ಹುಬ್ಬಳ್ಳಿ, ಏ.15: ಇಲ್ಲಿನ ವಿಜಯನಗರದಲ್ಲಿ ಬಾಲಕಿ ಹತ್ಯೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಆರೋಪಿ ರಿತೇಶ್ ಕುಮಾರ್ ಗಾಂಜಾ ನಶೆಯಲ್ಲಿ ತೇಲುತ್ತಿದ್ದು, ಪೊಲೀಸರ ವಿಚಾರಣೆಯ ವೇಳೆ ಏನನ್ನು ಬಾಯಿ ಬಿಡದೆ ಸತಾಯಿಸಿದ್ದ.
ಬಿಹಾರದ ರಿತೇಶ ಕುಮಾರ ಮಾದಕವಸ್ತುವಿನ ನಶೆಯಲ್ಲೇ ಬಲಾತ್ಕಾರ ಮಾಡಿ, ಬಾಲಕಿಯ ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾನೆಂದು. ಶಂಕೆಯ ಮೇಲೆ ಆರೋಪಿಯನ್ನು ವಶಕ್ಕೆ ಪಡೆದಾಗಲೂ ಆತ ಗಾಂಜಾ ಮತ್ತಿನಲ್ಲಿಯೇ ತೇಲಾಡುತ್ತಿದ್ದ. ಆತನನ್ನು ಪೊಲೀಸರು 2-3 ತಾಸು ಎಲ್ಲ ಬಗೆಯಾಗಿ ಎಷ್ಟೇ ವಿಚಾರಣೆ ಮಾಡಿದರೂ ತಾನು ಎಲ್ಲಿಯವನು, ಏನು ಮಾಡಿಕೊಂಡಿದ್ದೇನೆ. ಬಾಲಕಿಗೆ ಏನು ಮಾಡಿದೆ ಎಂದು ಬಾಯಿಬಿಟ್ಟಿರಲಿಲ್ಲ ಎನ್ನಲಾಗಿದೆ.
ಬಾಲಕಿ ಮೇಲೆ ಅತ್ಯಾಚಾರ?
ಬಿಹಾರ ಮೂಲದ ಕಾಮುಕ ಬಾಲಕಿಯನ್ನು ಅಪಹರಿಸಿ ಮನೆಯೊಂದರ ಶೆಡ್‌ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ಪ್ರಶ್ನೆ ಎದ್ದಿದ್ದು, ಬಾಲಕಿ ಧರಿಸಿದ್ದ ಲೆಗ್ಗಿನ್ಸ್ ಅನ್ನು ರಿತೇಶ್ ತನ್ನ ಪ್ಯಾಂಟ್‌ನಲ್ಲಿ ಇಟ್ಟುಕೊಂಡಿದ್ದ. ವಿಕೃತ ಕಾಮಿಯಂತೆ ವರ್ತಿಸಿದ್ದಾನೆ. ಬಾಲಕಿ ಕಿರುಚಾಡಿದ ಮೇಲೆ ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷಾ ವರದಿ ದೃಢವಾದ ಅನಂತರವೇ ನಿಜಾಂಶ ಗೊತ್ತಾಗಲಿದೆ.
ಅನಾಥವಾದ ಆರೋಪಿ ಶವ
ಬಾಲಕಿ ಕೊಲೆ ಆರೋಪಿ ರಿತೇಶ ಕುಮಾರ ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದು, ಆತನ ಮೃತದೇಹವನ್ನು ಕೆಎಂಸಿಆರ್‌ಐ ಶವಾಗಾರದಲ್ಲಿ ಇಡಲಾಗಿದೆ. ಅದನ್ನು ನೋಡಲು ಕುಟುಂಬಸ್ಥರು, ಸಂಬಂಧಿಕರು ಸಹ ಬಂದಿಲ್ಲ. ಆರೋಪಿಯನ್ನು ಪೊಲೀಸರು ವಿಚಾರಣೆ ಮಾಡಿದಾಗ ಯಾವುದೇ ಮಾಹಿತಿ, ಸಂಪರ್ಕ ಸಂಖ್ಯೆ ಸಹ ಕೊಟ್ಟಿರಲಿಲ್ಲ. ಹೀಗಾಗಿ ಪೊಲೀಸರು ಆತನ ಸಂಬಂಧಿಕರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜಿಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ಆರೊಪಿಯ ಮರಣೋತ್ತರ ಪರೀಕ್ಷೆ ನಡೆಯಬೇಕಿದೆ. ಎರಡು ದಿನಗಳ ಕಾಲ ಕುಟುಂಬಸ್ಥರ ಬರುವಿಕೆಗಾಗಿ ಪೊಲೀಸರು ಕಾಯಲಿದ್ದಾರೆ. ಬಾರದಿದ್ದರೆ ಹಳೇಹುಬ್ಬಳ್ಳಿ ಪೊಲೀಸರು ಹು-ಧಾ ಮಹಾನಗರ ಪಾಲಿಕೆಗೆ ಮೃತದೇಹ ಹಸ್ತಾಂತರ ಮಾಡಲಿದ್ದಾರೆ. ಕೊನೆಗೆ ಅವರೇ ಅಂತಿಮ ಸಂಸ್ಕಾರ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಆರೋಪಿಯ ಶವಸಂಸ್ಕಾರ ಕುಟುಂಬದ ಸದಸ್ಯರು ಬರುವವರೆಗೂ ನಡೆಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ.