ಚಂಡೀಗಢ, ಏ.17- ಕಳೆದ ತಿಂಗಳು ಜಲಂಧರ್ ಮೂಲದ ಯೂಟ್ಯೂಬರ್ ನಿವಾಸದ ಮೇಲೆ ಗ್ರೆನೇಡ್ ಎಸೆದ ಘಟನೆಗೆ ಸಂಬಂಧಿಸಿದಂತೆ ಸೇನಾ ಜವಾನನನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಹ್ಯಾಂಡ್ ಗ್ರೆನೇಡ್ ಎಸೆದ ಆರೋಪಿಗೆ ಆನ್‌ಲೈನ್ ತರಬೇತಿ ನೀಡಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿತರಾಗಿದ್ದ ಸೇನಾ ಜವಾನ್ ಸುಖರಣ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮಾರ್ಚ್ 15 ಮತ್ತು 16 ರ ಮಧ್ಯರಾತ್ರಿ ಯೂಟ್ಯೂಬರ್ ರೋಜರ್ ಸಂಧು ಅವರ ನಿವಾಸದ ಮೇಲೆ ಹ್ಯಾಂಡ್ ಗ್ರೆನೇಡ್ ಎಸೆಯಲಾಗಿತ್ತು.
ಆದರೆ, ಗ್ರೆನೇಡ್ ಸ್ಫೋಟಗೊಳ್ಳಲಿಲ್ಲ.
ಈ ವಿಷಯದಲ್ಲಿ ಜವಾನನ ಪಾತ್ರದ ಬಗ್ಗೆ ಸೇನಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಜಲಂಧರ್‌ನ ನ್ಯಾಯಾಲಯವು ಸೇನಾ ಜವಾನನನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದ್ದು, ಈ ವಿಷಯದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಈ ಘಟನೆಯ ನಂತರ, ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸಿದ ಆರೋಪದ ಮೇಲೆ ಯೂಟ್ಯೂಬರ್ ನಿವಾಸದ ಮೇಲೆ ನಡೆದ ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನಿ ದರೋಡೆಕೋರ ಶಹಜಾದ್ ಭಟ್ಟಿ ವಹಿಸಿಕೊಂಡಿದ್ದರು. ಈವರೆಗೆ ಏಳು ಮಂದಿಯನ್ನು ಬಂಧಿಸಲಾಗಿದೆ.