ರಾಯ್ಪುರ, ಏ.18- ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ತೆಂಡು ಎಲೆಗಳ ಬೋನಸ್ ಹಣ(Tendu Leaf Bonus Scam)ವನ್ನು ದೊಡ್ಡ ಪ್ರಮಾಣದಲ್ಲಿ ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಮತ್ತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿಯನ್ನು ಬಂಧಿಸಿದೆ.
ಪ್ರಾಸಿಕ್ಯೂಷನ್ ಉಪ ನಿರ್ದೇಶಕ ಮಿಥಿಲೇಶ್ ವರ್ಮಾ ಬಂಧನವನ್ನು ದೃಢಪಡಿಸಿದ್ದು, ಅಕ್ರಮಗಳ ಸಮಯದಲ್ಲಿ ಸುಕ್ಮಾದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಆಗಿದ್ದ ಅಧಿಕಾರಿಯನ್ನು ಅಶೋಕ್ ಕುಮಾರ್ ಪಟೇಲ್ ಎಂದು ಗುರುತಿಸಲಾಗಿದೆ.
ಪಟೇಲ್ ಅವರನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ (ಭ್ರಷ್ಟಾಚಾರ ತಡೆ ಕಾಯ್ದೆ) ನೀರಜ್ ಶರ್ಮಾ ಅವರ ಮುಂದೆ ಹಾಜರುಪಡಿಸಲಾಯಿತು, ಅವರು ಅಧಿಕಾರಿಯನ್ನು ಏಪ್ರಿಲ್ 23 ರವರೆಗೆ ಆರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.
ತೆಂಡು ಎಲೆ ಸಂಗ್ರಾಹಕರಿಗೆ ಬೋನಸ್ ಪಾವತಿಯಾಗಿ ಉದ್ದೇಶಿಸಲಾಗಿದ್ದ ಸುಮಾರು 7 ಕೋಟಿ ರೂ.ಗಳನ್ನು ಆರೋಪಿ ಅಧಿಕಾರಿ ಹಿಂಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.ಬ್ಯಾಂಕ್ ಖಾತೆಗಳನ್ನು ಹೊಂದಿರದ ಉದ್ದೇಶಿತ ಫಲಾನುಭವಿಗಳಿಗೆ ಹಣವನ್ನು ಜಮಾ ಮಾಡದ ಕಾರಣ ದುರುಪಯೋಗ ಸಂಭವಿಸಿದೆ ಎಂದು ವರ್ಮಾ ತಿಳಿಸಿದ್ದಾರೆ.