ಬೆಂಗಳೂರು, ಏ.19- ಒಂದು ಕಾಲದ ಭೂಗತ ಲೋಕದ ಪಾತಕಿ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡ ರಾತ್ರಿ ನಡೆದಿದೆ. ಹಂತಕರ ಗುಂಡಿನ ದಾಳಿಯಿಂದ ರಿಕ್ಕಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ರಿಕ್ಕಿ ರೈ ಅವರ ಕೈ ಹಾಗೂ ಮೂಗಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲೆ ಚಿಕಿತ್ಸೆ ನೀಡಲಾಗುತ್ತಿದೆ.
ತಡರಾತ್ರಿ 11.30 ಗಂಟೆ ಸುಮಾರಿನಲ್ಲಿ ಬಿಡದಿಯ ಮನೆಯಿಂದ ಕಾರಿನಲ್ಲಿ ಬೆಂಗಳೂರಿಗೆ ಚಾಲಕ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಲಕ್ಕಿ ರೈ ಹಿಂಬಂದಿ ಸೀಟಿನಲ್ಲಿ ಕುಳಿತು ತೆರಳುತ್ತಿದ್ದಾಗ ಮನೆಯ ಕೂಗಳತೆಯ ದೂರದಲ್ಲಿಯೇ ಹೊಂಚುಹಾಕಿ ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಕಾರಿನ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಕಾರಿನ ಗಾಜು ಸೀಳಿಕೊಂಡು ಗುಂಡುಗಳು ರಿಕ್ಕಿ ರೈ ಅವರ ಮೂಗು ಹಾಗೂ ಕೈಗೆ ತಾಗಿ ಗಾಯಗಳಾಗಿವೆ. ತಕ್ಷಣವೇ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಬಿಡದಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಲಕ್ಕಿ ರೈ ಅವರು ಎರಡು ದಿನಗಳ ಹಿಂದೆಯಷ್ಟೇ ರಷ್ಯಾದಿಂದ ವಾಪಾಸ್ ಆಗಿದ್ದರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಿರತರಾಗಿದ್ದರು. ರಾತ್ರಿ ರಾಮನಗರ ತಾಲೂಕಿನ ಬಿಡದಿ ಮನೆಯಿಂದ ತಡರಾತ್ರಿ ತಮ್ಮ ಫಾರ್ಚೂನರ್ ಕಾರಿನಲ್ಲಿ ಬೆಂಗಳೂರಿಗೆ ಹೋಗಲು ಮನೆಯಿಂದ ಹೊರ ಬರುತ್ತಿದ್ದಂತೆ ಕಾಂಪೌಂಡ್ ಬಳಿಯೇ ಹೊಂಚು ಹಾಕಿ ಕುಳಿತ್ತಿದ್ದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆಗೆ ವಿಫಲ ಯತ್ನ ನಡೆಸಿದ್ದಾರೆ.
ಹಿಂಬದಿ ಕುಳಿತಿದ್ದು ಪ್ರಾಣ ಉಳಿಸಿತು:
ರಿಯಲ್ ಎಸ್ಟೆಟ್ ಉದ್ಯಮಕ್ಕೆ ಸಂಬಂಧಿಸಿದಂತೆ ಕೆಲವರೊಂದಿಗೆ ವೈರತ್ವ ಕಟ್ಟಿಕೊಂಡಿದ್ದ ರಿಕ್ಕಿ ಯಾವಾಗಲೂ ತಾವೇ ಕಾರ್ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದರು. ಆದರೆ, ಅವರ ಅದೃಷ್ಟ ನೆಟ್ಟಾಗಿದ್ದರಿಂದ ನಿನ್ನೆ ಚಾಲಕನಿಗೆ ಕಾರು ಚಾಲನೆ ಮಾಡಲು ತಿಳಿಸಿ ಅವರು ಹಿಂಬದಿ ಸೀಟಿನಲ್ಲಿ ಕುಳಿತಿದ್ದರು.ಯಾವಾಗಲು ರಿಕ್ಕಿ ಅವರೇ ಕಾರು ಚಾಲನೆ ಮಾಡಲಿದ್ದಾರೆ ಎಂಬ ವಿಷಯ ಸಂಗ್ರಹಿಸಿದ್ದ ಹಂತಕರು ಚಾಲಕನನ್ನು ಗುರಿಯಾಗಿರಿಸಿಕೊಂಡು ಗುಂಡು ಹಾರಿಸಿರುವುದರಿಂದ ರಿಕ್ಕಿ ಬಜಾವಾಗಿದ್ದಾರೆ.
ಒಂದು ವೇಳೆ ರಿಕ್ಕಿ ಅವರೇ ಕಾರು ಚಾಲನೆ ಮಾಡಿದ್ದರೆ ಅವರು ಹಂತಕರ ಗುಂಡೇಟಿಗೆ ಬಲಿಯಾಗುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಫೈರಿಂಗ್ ಆಗುತ್ತಿದ್ದಂತೆ ಕಾರು ಚಾಲಕ ಬಸವರಾಜು ಬಗ್ಗಿದ ಕಾರಣ ಅವರು ಕೂದಳೆಲೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಕಾರು ಚಾಲಕ ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹಿನ್ನೆಲೆ:
ಮಂಗಳೂರು ಮೂಲದ ಮುತ್ತಪ್ಪ ರೈ ಆಕಸ್ಮಿಕವಾಗಿ ಭೂಗತ ಲೋಕಕ್ಕೆ ಕಾಲಿಟ್ಟವರು. ಬೇಡ ಬೇಡ ಎಂದರೂ ಭೂಗತ ಲೋಕ ಅವರನ್ನು ಆವರಿಸಿಕೊಂಡಿತ್ತು. ಇದರಿಂದಾಗಿ ಅವರು ಡಾನ್ ಆಗಿ ಪರಿವರ್ತನೆಗೊಂಡರು.ಡಾನ್ ಆಗುತ್ತಿದ್ದಂತೆ ದೇಶ ತೊರೆದು ದುಬೈನಲ್ಲಿ ನೆಲೆ ಕಂಡುಕೊಂಡಿದ್ದ ಮುತ್ತಪ್ಪ ರೈ ಅಲ್ಲಿಂದಲೆ ಬೆಂಗಳೂರಿನ ಭೂಗತ ಜಗತ್ತನ್ನು ಮುನ್ನಡೆಸುತ್ತಿದ್ದರು.
ತಾನು ಡಾನ್ ಆಗಿದ್ದ ಸಂದರ್ಭದಲ್ಲೇ ಕೋಟಿ ಕೋಟಿ ಸಂಪಾದಿಸಿದ್ದರೆ ಅವರಿಗೆ ಕೊನೆಗಾಲದಲ್ಲಿ ಪಶ್ಚಾತಾಪವಾಗಿತ್ತು.
ಇದೇ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾಗಿದ್ದ ಜ್ಯೋತಿ ಪ್ರಕಾರ ಮಿರ್ಜಿ, ಗೋಪಾಲ್ ಬಿ ಹೊಸೂರು ಅವರ ತಂಡ ದುಬೈನಲ್ಲಿದ್ದರೆ ಅವರನ್ನು ಅಲ್ಲಿಂದ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಮಾತ್ರವಲ್ಲ ಸ್ವತಃ ಹೋಸೂರ್ ಅವರೇ ರೈ ಅವರಿಗೆ ನಿನ್ನನ್ನು ಎನ್ ಕೌಂಟರ್ ಮಾಡಬಹುದಿತ್ತು. ಆದರೂ ನಿನಗೆ ಪ್ರಾಣ ಬೀಕ್ಷೆ ನೀಡುತ್ತಿದ್ದೇನೆ ಇನ್ನು ಮುಂದಾದರೂ ಉತ್ತಮ ಜೀವನ ನಡೆಸು ಎಂದು ಬುದ್ದಿವಾದ ಹೇಳಿದ್ದರು.
ಈ ಘಟನೆ ನಂತರ ಭೂಗತ್ತ ಜಗತ್ತಿನಿಂದ ಹೊರ ಬರುವ ನಿರ್ಧಾರ ಮಾಡಿದ ರೈ ಮುಂದಿನ ದಿನಗಳಲ್ಲಿ ತಮ್ಮನ್ನು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು. ಇದರ ಜೊತೆಗೆ ಜಯ ಕರ್ನಾಟಕ ಸಂಘಟನೆ ಕಟ್ಟಿ ಕನ್ನಡಾಂಬೆಯ ಋಣ ತೀರಿಸುವ ಕಾರ್ಯವನ್ನು ಮುಂದುವರೆಸಿದ್ದರು.ತಾನು ಡಾನ್ ಆಗಿದ್ದ ಸಂದರ್ಭದಲ್ಲಿ ದೇಶದ್ರೋಹಿ ದಾವೂದ್ ಇಬ್ರಾಹಿಂ ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ರೈ ಹತ್ಯೆಗೆ ಅಂತಾರಾಷ್ಟ್ರೀಯ ಮಾಫಿಯಾದವರು ಕಣ್ಣಿಟ್ಟಿದ್ದರು.
ಹೀಗಾಗಿ ಸದಾ ಬೆಂಗಾವಲು ಪಡೆಯೊಂದಿಗೆ ಓಡಾಡುತ್ತಿದ್ದ ರೈ ಅವರನ್ನು ಮುಟ್ಟಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಅವರ ನಿಧನದ ನಂತರ ಅವರ ಪುತ್ರ ರಿಕ್ಕಿ ಭೂಗತ ಲೋಕಕ್ಕೆ ಕಾಲಿಡದಿದ್ದರೂ ಅವರು ರಿಯಲ್ ಎಸ್ಟೇಟ್ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರೊಂದಿಗೆ ಹಗೆತನ ಕಟ್ಟಿಕೊಂಡಿದ್ದರು. ಈ ಹಿಂದೆ ಕೂಡ ಅವರ ಮೇಲೆ ಹಲ್ಲೆ ಯತ್ನ ನಡೆಸಲಾಗಿತ್ತು. ನನಗೆ ಕೆಲವರಿಂದ ಕೊಲೆ ಬೆದರಿಕೆ ಇದೆ ಎಂದು ರಿಕ್ಕಿ ಪದೇ ಪದೇ ಹೇಳಿಕೊಳ್ಳುತ್ತಿದ್ದರೂ ಅಂತಹ ವ್ಯಕ್ತಿ ಮೇಲೆ ಇದೀಗ ಗುಂಡಿನ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.ಸ್ಥಳಕ್ಕೆ ಎಫ್ ಎಸ್‌ಎಲ್ ತಂಡ ಹಾಗೂ ಸೋಕೋ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿವೆ.
ತನಿಖೆ ಬಳಿಕ ಮತ್ತಷ್ಟು ಮಾಹಿತಿ:
ಈ ಬಗ್ಗೆ ಸುದ್ದಿಗಾರೊಂದಿಗೆ ಮಾತನಾಡಿದ ರಾಮನಗರ ಎಸ್.ಪಿ ಶ್ರೀನಿವಾಸಗೌಡ ಅವರು, ಮಧ್ಯರಾತ್ರಿ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅವರ ಜೊತೆ ಪ್ರಯಾಣಿಸುತ್ತಿದ್ದ ಒಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿದೆ. ರಿಕ್ಕಿ ರೈಗೆ ತೀವ್ರ ಗಾಯಗಳಾಗಿವೆ. ಮೇಲ್ನೋಟಕ್ಕೆ ಒಂದು ಸುತ್ತು ಗುಂಡು ಹಾರಿಸಿರುವ ಶಂಕೆ ಇದೆ. ತನಿಖೆ ಬಳಿಕ ಇನ್ನಷ್ಟು ಮಾಹಿತಿ ಗೊತ್ತಾಗುತ್ತದೆ ಎಂದು ತಿಳಿಸಿದರು.
ನಾಲ್ಕು ತಂಡ ರಚನೆ:
ರಿಕ್ಕಿ ಕೈ ಹತ್ಯೆಗೆ ವಿಫಲ ಯತ್ನ ನಡೆಸಿ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಈಗಾಗಲೇ ಕಾರ್ಯೋನ್ಮುಖವಾಗಿ ಹಲವು ಮಾಹಿತಿಗಳನ್ನು ಕಲೆ ಹಾಕುತ್ತಿವೆ. ಘಟನೆಗೆ ರಿಯಲ್ ಎಸ್ಟೇಟ್ ಕಾರಣವೇ, ಹಳೆ ದ್ವೇಷದಿಂದ ದಾಳಿ ಮಾಡಲಾಗಿದೆಯೇ ಎಂಬುದೂ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.