ನವದೆಹಲಿ, ಏ.19- ಈಶಾನ್ಯ ದೆಹಲಿಯ ಶಕ್ತಿ ವಿಹಾರ್ ಪ್ರದೇಶದಲ್ಲಿ ಇಂದು ಮುಂಜಾನೆ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಸಿಕ್ಕಿಬಿದ್ದಿದ್ದಾರೆ.
ಕಟ್ಟಡ ಕುಸಿದಾಗ ಸುಮಾರು 22 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು ಎಂದು ಪೊಲೀಸರು ಸ್ಥಳಕ್ಕೆ ತಲುಪಿದ ನಂತರ ತಿಳಿಸಿದ್ದಾರೆ.
ಈವರೆಗೆ 14 ಜನರನ್ನು ರಕ್ಷಿಸಿ ಜಿಟಿಬಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಯಾಳ್ವುರ ಪೊಲೀಸ್ ಠಾಣೆಯಲ್ಲಿ ಮುಂಜಾನೆ 3.02 ರ ಸುಮಾರಿಗೆ ಕಟ್ಟಡ ಕುಸಿತದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ ಎಂದು ಅವರು ಹೇಳಿದರು.
ಪೊಲೀಸ್ ತಂಡವು ಶಕ್ತಿ ವಿಹಾರ್‌ಗೆ ಬಂದು ಪರಿಶೀಲಿಸಿದಾಗ, ಅಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿರುವುದು ಕಂಡುಬಂತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಚರಣೆ ನಡೆಸಿ 14 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಅವಶೇಷಗಳಡಿ ಸಿಲುಕಿಕೊಂಡಿರುವವರ ಇತರರ ರಕ್ಷಣೆಗೆ ಕಾರ್ಯಚರಣೆ ಮುಂದುವರೆಸಿದ್ದಾರೆ.