Sunday, April 20, 2025
Homeರಾಜ್ಯ2025ನೇ ಸಾಲಿನ ಸಿಇಟಿ ಅರ್ಜಿ ತಿದ್ದುಪಡಿಗೆ ಮೇ.2ರವರೆಗೆ ಅವಕಾಶ

2025ನೇ ಸಾಲಿನ ಸಿಇಟಿ ಅರ್ಜಿ ತಿದ್ದುಪಡಿಗೆ ಮೇ.2ರವರೆಗೆ ಅವಕಾಶ

2025 CET application correction allowed till May 2

ಬೆಂಗಳೂರು, ಏ.19- ವಿದ್ಯಾರ್ಥಿಗಳು ಈಗಾಗಲೇ ಸಲ್ಲಿಸಿರುವ 2025ನೇ ಸಾಲಿನ ಸಿಇಟಿ ಅರ್ಜಿಯಲ್ಲಿ ಇನ್ನೂ ಏನಾದರೂ ತಪ್ಪುಗಳಿದ್ದು, ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಇಚ್ಛಿಸುವವರಿಗೆ ಮೇ 2ರವರೆಗೂ ಕರ್ನಾಟಕ ಪರೀಕ್ಷಾ ಪ್ರಾಧಿಧಿಕಾರ ಅವಕಾಶ ನೀಡಿದೆ.

ಮೀಸಲಾತಿ, ವಿಶೇಷ ಪ್ರವರ್ಗ, ಶೈಕ್ಷಣಿಕ ವಿವರಗಳು, ಕ್ಲಾಸ್ ಕೋಡ್ (ಎ, ಬಿ, ಸಿ, ಡಿ, ಇ, ಎಫ್, ಜಿ, ಎಚ್, ಐ. ಜಿ. ಕೆ. ಎಲ್. ಎಂ. ಎನ್. ಓ, ಝಡ್) ಇತ್ಯಾದಿ ತಪ್ಪಾಗಿದ್ದರೆ ಅವುಗಳನ್ನು ಸರಿ ಮಾಡಿಕೊಳ್ಳಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದಾರೆ.

ಅಭ್ಯರ್ಥಿಗಳ ಹೆಸರು, ತಂದೆ/ತಾಯಿ ಹೆಸರು, ಜನ್ಮ ದಿನಾಂಕ, 10ನೇ ತರಗತಿ ಹಾಗೂ 12ನೇ ತರಗತಿಯ ನೋಂದಣಿ ಸಂಖ್ಯೆ ಇತ್ಯಾದಿ ಮಾಹಿತಿಗಳು ತಪ್ಪಾಗಿ ನಮೂದು ಮಾಡಿದ್ದಲ್ಲಿ ದಾಖಲೆ ಸಮೇತ ಪ್ರಾಧಿಕಾರಕ್ಕೆ ಬಂದು ಮನವಿ ಸಲ್ಲಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಕೃಷಿಕರ ಕೋಟಾದಡಿ ಪ್ರಾಯೋಗಿಕ ಪರೀಕ್ಷೆ ಬರೆಯಲು ಸಿಇಟಿ ಅರ್ಜಿಯಲ್ಲಿ ನಮೂದಿಸದೇ ಇದ್ದಲ್ಲಿ ನಾಳೆಯೊಳಗೆ ತಿದ್ದುಪಡಿ ಮಾಡಿಕೊಳ್ಳಬೇಕು. ಹೊಸದಾಗಿ ಕೃಷಿಕರ ಕೋಟಾ ನಮೂದಿಸಿದವರು ಏ.21ರಂದು ತಮ್ಮ ದಾಖಲೆಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಸಿಇಟಿ ಕೀ ಉತ್ತರ ಪ್ರಕಟ : ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮುಗಿದಿದ್ದು, ನಿನ್ನೆಯೇ ಎಲ್ಲ ನಾಲ್ಕು ವಿಷಯಗಳ 16 ವರ್ಷನ್‌ಗಳ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ಕೀ ಉತ್ತರಗಳನ್ನು ಪ್ರಕಟಿಸಿದ್ದು, ಆಕ್ಷೇಪಣೆಗಳು ಇದ್ದಲ್ಲಿ ಏ.22ರ ಸಂಜೆ 5 ಗಂಟೆ ಒಳಗೆ ಆನ್ ಲೈನ್ ಮೂಲಕ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.

ಆಕ್ಷೇಪಣೆ ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಹಾಗೂ ಪೂರಕ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಸಲ್ಲಿಸಬೇಕು. ಈ ಮಾಹಿತಿ ಸರಿ ಇಲ್ಲದಿದ್ದಲ್ಲಿ ಅಂತಹ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

RELATED ARTICLES

Latest News