ಬೆಂಗಳೂರು, ಏ.19-ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಮನೋಭಾವನೆ ತುಂಬಿ ತುಳುಕಿ ಎಲ್ಲಾ ಇಲಾಖೆಗಳಲ್ಲಿಯೂ ಪ್ರವೇಶಿಸಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿ ಕುಮಾರ್ ಆರೋಪಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ತೀರ್ಥಹಳ್ಳಿ ಮತ್ತು ಬೀದರ್‌ನಲ್ಲಿ ನಡೆದ ಅಧಿಕಾರಿಗಳ ನಿಂದನೀಯ ಕೃತ್ಯಗಳಿಂದ ಇದು ಸ್ಪಷ್ಟವಾಗಿದೆ ಎಂದಿದ್ದಾರೆ.
ತೀರ್ಥಹಳ್ಳಿಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಯಿಂದ ಜನಿವಾರವನ್ನು ಬಲವಂತವಾಗಿ ತೆಗೆಸಿಕೊಳ್ಳಲಾಗಿದೆ ಹಾಗೂ ಬೀದರ್‌ನಲ್ಲಿ ಜನಿವಾರ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದು ಹಿಂದುಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಎದುರಾದ ದೊಡ್ಡ ಸಮಸ್ಯೆ.
ಕೆಲವು ತಿಂಗಳ ಹಿಂದೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮುನ್ನ ಕೆಲವು ಮಹಿಳೆಯರ ಮಂಗಳಸೂತ್ರ ತೆಗೆಯಲು ಸೂಚಿಸಲಾಗಿತ್ತು. ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವಾಧಾರಿತ, ಸಕಾರಾತ್ಮಕ ಹಾಗೂ ನಿಜವಾದ ಧರ್ಮನಿರಪೇಕ್ಷ ಸರ್ಕಾರವನ್ನು ನಡೆಸುತ್ತಿದ್ದಾರೋ ಅಥವಾ ತಾಲಿಬಾನ್ ರೀತಿಯ ಆಡಳಿತ ನಡೆಸುತ್ತಿದ್ದಾರೋ ಎಂಬ ಅನುಮಾನ ಉಂಟಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಹೀಗೆ ಹಿಂದು ವಿರೋಧಿ ಕೃತ್ಯಗಳು ಪುನಃ ಪುನಃ ನಡೆಯುತ್ತಿವೆ. ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ನಾಜೂಕಾದ ವಿಷಯಗಳಲ್ಲಿ ಜನಿವಾರ ತೆಗೆಸುವಂತಹ ನಿಷ್ಟುರ ತೀರ್ಮಾನಗಳನ್ನು ಅಧಿಕಾರಿಗಳು ತಾವೇ ತೆಗೆದುಕೊಳ್ಳುವುದಿಲ್ಲ. ನಾನು ಖಚಿತವಾಗಿ ಹೇಳುತ್ತೇನೆ. ಈ ರೀತಿಯ ಸೂಚನೆಗಳು ಮತ್ತು ಮಾರ್ಗಸೂಚಿಗಳನ್ನು ಸರ್ಕಾರವೇ ನೀಡಿದೆ. ಸಂಬಂಧಿತ ಸಚಿವರು ಈ ನಿಂದನೀಯ ಘಟನೆ ಬಗ್ಗೆ ಸ್ಪಷ್ಟನೆ ನೀಡಬೇಕು. ಈ ನಿಂದನಾರ್ಹ ಘಟನೆಯ ಕುರಿತಾಗಿ ಸಂಪೂರ್ಣ ತನಿಖೆ ನಡೆಯಬೇಕು ಎಂದು ರವಿ ಕುಮಾರ್ ಆಗ್ರಹಿಸಿದ್ದಾರೆ.