ಮೈಸೂರು, ಏ.19- ಅಕ್ರಮ ಸಂಬಂಧಕ್ಕೆ ತೊಂದರೆಯಾದ ಪತಿಯನ್ನು ಪ್ರೀಯಕರನೊಂದಿಗೆ ಸೇರಿ ಪತ್ನಿ ಕೊಲೆ ಮಾಡಿರುವ ಘಟನೆ ಕೆಆರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಕರವಾಡಿಯಲ್ಲಿ ನಡೆದಿದೆ. ಮಹಮದ್ ಶಫಿ ಕೊಲೆಯಾದ ವ್ಯಕ್ತಿ.
ಶಬೀನ್ ತಾಜ್ ಹಾಗೂ ಮಹಮದ್ ಶಫಿ ಕಳೆದ 16 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ 12 ವರ್ಷದ ಮಗಳಿದ್ದಾಳೆ. ರೆಡಿಯೇಟರ್ ಕೆಲಸ ಮಾಡುತ್ತಿದ್ದ. ಮಹಮದ್ ಶಫಿ ಹಾಗೂ ಪತ್ನಿ ನಡುವೆ ಕಳೆದ ಐದಾರೂ ವರ್ಷಗಳಿಂದ ಅನ್ಯೂನ್ಯತೆ ಇರಲಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ಗಾರ್ಮೇಂಟ್ಸ್ ಕೆಲಸಕ್ಕೆ ಶಬೀನ್ ತಾಜ್ ಸೇರಿಕೊಂಡಿದ್ದರು. ಪ್ರತಿ ದಿನ ಅನ್ವರ್ ಎಂಬಾತ ಗಾರ್ಮೇಂಟ್ಸ್ ಗೆ ಆಟೋದಲ್ಲಿ ಕರೆದೊಯ್ಯತ್ತಿದ್ದ ಈ ನಡುವೆ ಇಬ್ಬರ ನಡುವೆ ಬಾಂಧವ್ಯ ಬೆಳೆದಿತ್ತು. ಈ ವಿಚಾರದ ಬಗ್ಗೆ ಆಗಾಗ್ಗೆ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಪತಿ ಇದ್ದರೆ ಅಕ್ರಮ ಸಂಬಂಧಕ್ಕೆ ತೊಂದರೆಯಾಗುತ್ತದೆ ಎಂದು ಪತ್ನಿ ನಿರ್ಧರಿಸಿ, ಪತಿಯನ್ನು ಮುಗಿಸಲು ಸ್ಕೆಚ್ ಹಾಕಿ ಪ್ರಿಯಕರನಿಗೆ ತಿಳಿಸಿದ್ದಾಳೆ.
ಮನೆಯಲ್ಲಿ ಒಬ್ಬನೆ ಮಲಗಿದ್ದಾಗ ಈ ವಿಚಾರವನ್ನು ಪ್ರೀಯತಮನಿಗೆ ತಿಳಿಸಿದ್ದಾಳೆ. ಮನೆಗೆ ಬಂದ ಪ್ರೀಯಕರ ಚಾರ್ಜರ್ ವೈರ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಏನೂ ತಿಳಿಯದಂತೆ ಹೊರ ಬಂದಿದ್ದಾನೆ. ಮನೆಗೆ ಬಂದ ಪತ್ನಿ, ಮಹಮದ್ ಶಫಿ ಮನೆಯವರಿಗೆ ಕರೆಮಾಡಿ ಪ್ರಜ್ಞೆತಪ್ಪಿ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾಳೆ.
ಶವಸಂಸ್ಕಾರದ ವೇಳೆ ಕುತ್ತಿಗೆಯಲ್ಲಿ ಗಾಯದ ಗೆರೆ ಕಾಣಿಸಿಕೊಂಡಿದೆ. ಕೂಡಲೆ ಕೆಆರ್ ಪೊಲೀಸ್ ಠಾಣೆಗೆ ಸುದ್ದಿ ತಿಳಿಸಿದ್ದು ಮೃತದೇಹ ಪರಿಶೀಲಿಸಿದ ಪೊಲೀಸರು ಇದು ಕೊಲೆ ಎಂದು ನಿರ್ಧರಿಸಿ ಮಾಹಿತಿ ಕಲೆಹಾಕಿದ್ದಾಗ ಪ್ರೇಮಿಗಳ ರಹಸ್ಯ ಬಯಲಾಗಿದೆ. ಈ ಸಂಬಂಧ ಇಬ್ಬರನ್ನು ಸಹ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.