Sunday, April 20, 2025
Homeರಾಜಕೀಯ | Politicsಡಿಕೆಶಿಗೆ ಡೈರೆಕ್ಟ್ ಚಾಲೆಂಜ್ ಹಾಕಿದ ಶಾಸಕ ಮುನಿರತ್ನ

ಡಿಕೆಶಿಗೆ ಡೈರೆಕ್ಟ್ ಚಾಲೆಂಜ್ ಹಾಕಿದ ಶಾಸಕ ಮುನಿರತ್ನ

MLA Munirathna issues direct challenge to DK Shivakumar

ಬೆಂಗಳೂರು, ಏ.19-ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷವಾಗುತ್ತಿದ್ದು, ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಬೆಂಗಳೂರು ನಗಾರಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಅವಧಿಯಲ್ಲಿ ಒಂದೇ ಒಂದು ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದರೆ ತೋರಿಸಲಿ ಎಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಬಹಿರಂಗ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು.ಡಿ.ಕೆ ಶಿವಕುಮಾರ್ ಡಿಸಿಎಂ ಆಗಿ ಎರಡು ವರ್ಷದ ಸಾಧನೆ ಏನು ಎಂದು ಹೇಳಲಿ, ಸಾರ್ವಜನಿಕ ಚರ್ಚೆಗೆ ನಾನು ಕೂಡಾ ಸಿದ್ದನಿದ್ದು, ಒಂದು ವೇದಿಕೆ ಸಿದ್ಧಪಡಿಸಲಿ ಎಂದು ನೇರ ಸವಾಲು ಎಸೆದರು. ಮೊನ್ನೆ ಕಾಂಗ್ರೆಸ್ ಕಾರ್ಯಕ್ರಮವನ್ನು ಸರ್ಕಾರದ ಕಾರ್ಯಕ್ರಮ ತರಹ ಮಾಡಿದರು.

ರಸ್ತೆಯ ತೇಪೆ ಕೆಲಸಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ. ಆರ್.ಆರ್.ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಡಿಸಿಎಂ ಬಂದು ಗುದ್ದಲಿ ಪೂಜೆ ಮಾಡಿದ್ದಾರೆ. ಇದನ್ನು ಯಾರಾದರೂ ಕೇಳಿದ್ದಾರಾ? ಇದಕ್ಕೆ ಶೋಲೆ ಸಿನಿಮಾದ ರೀತಿಯಲ್ಲಿ ಫೆಕ್ಸ್ ಕಟ್ಟಿದ್ದರು. ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಗಬ್ಬರ್ ಸಿಂಗ್.

ಧರ್ಮೇಂದ್ರ, ಹೇಮಾಮಾಲಿನಿ ತರಹ ಪೋಸ್ ಕೊಟ್ಟು ಫಕ್ಸ್ ಕಟ್ಟಿಸಿದ್ದಾರೆ. ಅದರಲ್ಲಿ ಒಬ್ಬರು ಗಬ್ಬರ್ ಸಿಂಗ್ ಥರನೇ ಇದ್ದರೆ, ಇನ್ನೊಬ್ಬರು ಹೇಮಾ ಮಾಲಿನಿ ಥರನೇ ಇದ್ದರು ಎಂದು ಲೇವಡಿ ಮಾಡಿದರು. ಸುರಂಗ ರಸ್ತೆ ಮಾಡಲು ನಾಲ್ಕು ಜನರನ್ನು ನೇಮಿಸಿದ್ದಾರೆ. ಬೆಂಗಳೂರಿನಲ್ಲಿ ಅನೇಕ ಸೇತುವೆಗಳ ಕೆಲಸ ನಿಂತಿದೆ.

ನಿಂತಿರುವ ಕೆಲಸ ಮಾಡಿ ಅಂದರೆ, ಟನೆಲ್ ಮಾಡಲು ಹೋಗಿದ್ದಾರೆ. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂ ಬೇಕಾ? ಆಕಾಶದಲ್ಲಿ ನೋಡುವ ಸೂರ್ಯ ಚಂದ್ರ ಇರೋವರೆಗೂ ಟನೆಲ್ ರಸ್ತೆ ನಿರ್ಮಾಣ ಆಗುವುದಿಲ್ಲ. ಯಾವುದೇ ಕಾರಣಕ್ಕೂ ಇವರು ಟನೆಲ್ ರಸ್ತೆ ಮುಗಿಸಲು ಸಾಧ್ಯವೇ ಇಲ್ಲ ಎಂದು ಖಂಡ ತುಂಡವಾಗಿ ಹೇಳಿದರು.

ಅವನ್ಯಾವನೋ ಚಂಗಲು ಒಬ್ಬ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾನೆ ಎಂದು ನನ್ನು ವಿರುದ್ಧ ಡಿ.ಕೆ.ಶಿವಕುಮಾರ್ ಮಾತಾಡಿದ್ದಾರೆ. ನಮ್ಮ ದೇಶದಲ್ಲಿ ದೂರು ನೀಡಲು ಪ್ರತಿಯೊಬ್ಬರಿಗೂ ಹಕ್ಕಿದೆ. ನಾನು ಎರಡು ಸಾವಿರ ಕೋಟಿ ರೂ. ಹಗರಣದ ಬಗ್ಗೆ ದೂರು ಕೊಟ್ಟಿದ್ದೇನೆ .ಈ ದೂರಿಗೆ ಈಗಲೂ ನಾನು ಬದ್ಧ. ಈ ದೂರು ಸರಿಯಲ್ಲ ಎಂದು ಬೇಕಾದರೆ ಹೇಳಲಿ, ದಾಖಲೆಯೂ ಸರಿ ಇಲ್ಲ ಎಂದು ಹೇಳಲು ನನ್ನದೇನು ತಕರಾರು ಇಲ್ಲ. ಅದನ್ನು ಬಿಟ್ಟು ಚಂಗಲು ಎನ್ನುವ ಪದಬಳಕೆ ಸರಿ ಇಲ್ಲ ಎಂದು ಆಕ್ಷೇಪಿಸಿದರು.

ವಿಶ್ವಬ್ಯಾಂಕ್‌ನಿಂದ ಎರಡು ಸಾವಿರ ಕೋಟಿ ಸಾಲ ತಂದಿದ್ದೀರಿ. ಪ್ರಕೃತಿ ವಿಕೋಪಕ್ಕೆ ಒಳಗಾದಾಗ ವಿಶ್ವ ಬ್ಯಾಂಕ್ ನಿಂದ ಸಾಲ ಪಡೆಯವುದು ಸಹಜ ಆದರೆ ಬೆಂಗಳೂರಿನಲ್ಲಿ ಯಾವುದೇ ಪ್ರಕೃತಿ ವಿಕೋಪ ಉಂಟಾಗಿಲ್ಲ. ಆದರೂ ಪ್ರಕೃತಿ ವಿಕೋಪ ಅಂತ ಸುಳ್ಳು ಹೇಳಿ ವಿಶ್ವಬ್ಯಾಂಕ್‌ನಿಂದ ಸಾಲ ತಂದಿದ್ದೀರಿ.

ಅಷ್ಟೇ ಅಲ್ಲ ಆ ಹಣದಲ್ಲಿ ನಿಮಗೆ ಬೇಕಾದವರಿಗೆ ಟೆಂಡರ್ ಕೊಟ್ಟಿದ್ದೀರಿ. ಬೆಂಗಳೂರು ನಗರದ ಹಣ ಆಂಧ್ರದ ಗುತ್ತಿಗೆದಾರರರಿಗೆ ಕೊಡುತ್ತಿದ್ದಾರೆ. ನಮ್ಮ ರಾಜ್ಯದ ಗುತ್ತಿಗೆದಾರರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಟೆಂಡರ್ ಓಪನ್ ಆಗುವ ಮುನ್ನ ನಾನು ದೂರು ಕೊಟ್ಟಿದ್ದೆ. ಈಗ ಟೆಂಡರ್ ಕೊಡಲಾಗಿದೆ.

ನಾನು ಹೇಳಿದ ಗುತ್ತಿಗೆದಾರರಿಗೇ ಟೆಂಡರ್ ಕೊಡಲಾಗಿದೆ. ಮಹದೇವಪುರ ಕಾಮಗಾರಿಗಳಿಗೆ ಸ್ಟಾರ್ ಚಂದ್ರುಗೆ ಟೆಂಡರ್ ಕೊಡಲಾಗಿದೆ. ರಾಜರಾಜೇಶ್ವರಿ ಕ್ಷೇತ್ರಕ್ಕೆ ಬಿಎಸ್‌ಆರ್ ಕನ್ಸಟ್ರಕ್ಷನ್ ಕಂಪೆನಿಗೆ ಟೆಂಡರ್ ಕೊಡಲಾಗಿದೆ. ನಾನು ಹೇಳಿದ್ದು ನಿಜವಾಗಿದೆ. ನಾನು ಯಾರು ಯಾರ ಹೆಸರು ಹೇಳಿದ್ದೇನೋ ಅವರಿಗೇ ಟೆಂಡ‌ರ್ ಕೊಟ್ಟಿದ್ದಾರೆ. ಪ್ರತೀ ಟೆಂಡರ್ ಅನ್ನೂ ಶೇ.5ರಿಂದ ಶೇ.10ರಷ್ಟು ಹೆಚ್ಚಿಗೆ ಕೊಟ್ಟಿದ್ದಾರೆ.ಈ ಅಕ್ರಮ ಟೆಂಡರ್‌ನಲ್ಲಿ ಡಿಸಿಎಂ ಪಾಲ್ಗೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್‌ನಲ್ಲಿದ್ದರೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ಮಾಡುತ್ತಾರೆ. ಅವರ ಜತೆ ಧ್ಯಾನಕ್ಕೆ ಕೂರುವುದು, ಪ್ರಯಾಗ್‌ರಾಜ್‌ನಲ್ಲಿ ಮುಳುಗುವುದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯನ್ನು ಡಿಕೆಶಿ ಥಟ್ ಥಟ್ಟನೆ ಮಾಡಿದ್ದಾರೆ. ಇದೆಲ್ಲ ದಟ್ ಥಟ್ಟನೆ ಆದ ಬದಲಾವಣೆ ಎಂದು ಡಿಕೆಶಿ ವಿರುದ್ಧ ಮುನಿರತ್ನ ವಾಗ್ದಾಳಿ ನಡೆಸಿದರು.

ನನ್ನ ಡಿಕೆಶಿ ಸ್ನೇಹ ಇಂದು ನಿನ್ನೆದೆಯದಲ್ಲ. 21ನೇ ವಯಸ್ಸಲ್ಲಿದ್ದಾಗಲೇ ನಾನು ಅವರು ಸ್ನೇಹಿತರಾಗಿದ್ದೆವು. ಅದು ಜಾವಾ, ಅಂಬಾಸಡರ್ ಕಾಲ, ಬಿಲ್‌ ಗೇಟ್ಸ್, ಬಿಲ್ ಕ್ಲಿಂಟನ್, ಅದಾನಿ, ಅಂಬಾನಿಗೂ ಇಲ್ಲದ ಅದೃಷ್ಟ ಡಿಕೆಶಿಗೆ ಆ ದೇವರು ಬರೆದಿದ್ದಾನೆ. ಆದರೆ, ನನ್ನ ಮೇಲೆ ಅತ್ಯಾಚಾರ ಪ್ರಕರಣ ಹಾಕುವ ಮಟ್ಟಕ್ಕೆ ಅವರು ಬಂದಿದ್ದಾರೆ. ನನಗೆ ಮಾಡಿದ ಪಾಪಕೃತ್ಯ ಇನ್ಯಾರಿಗೂ ಮಾಡುವುದು ಬೇಡ ಎಂದು ಭಾವುಕರಾದರು.

ನನ್ನನ್ನು ತೇಜೋವಧೆ ಮಾಡಿ ಡಿಕೆಶಿ ಏನು ಸಾಧನೆ ಮಾಡುತ್ತಾರೆ? ನನ್ನ ಮನೆಯಲ್ಲಿ ರಾಜಕಾರಣದಲ್ಲಿ ನಾನೇ ಮೊದಲು. ನಾನೇ ಕೊನೆ. ನನ್ನ ವಿರುದ್ಧ ದ್ವೇಷ ಸಾಧಿಸಿ ಡಿಕೆಶಿ ಏನು ಮಾಡ್ತಾರೆ? ನಲವತ್ತು ವರ್ಷದ ರಾಜಕಾರಣಿ ಡಿಕೆಶಿ, ಆದರೆ, ನಲವತ್ತು ಶಾಸಕರು ಜತೆಗೆ ಇಲ್ಲ. ಇದು ನಿಮ್ಮ ರಾಜಕೀಯ ಪರಂಪರೆ, ಸಣ್ಣ ಸಣ್ಣ ಆಲೋಚನೆ ಬಿಡಿ. ಏಕೆ ಈ ದ್ವೇಷ? ನನಗೂ ನಿಮಗೂ ಕಿಡ್ನಿಗಳು ಅರ್ಧ ಹೋಗಿವೆ.ನಾನೂ, ಅವರು ಮಾತ್ರೆ ತಗೊಳ್ಳಿಲ್ಲ ಅಂದರೆ ಬದುಕಲ್ಲ. ಮತ್ಯಾಕೆ ಈ ದ್ವೇಷ, ಇದು ಬೇಕಾ? ಎಂದು ಮುನಿರತ್ನ, ಸಚಿವ ಶಿವಕುಮಾರ್ಗೆ ನಾಲು ಸಾಲು ಪ್ರಶ್ನೆ ಮಾಡಿದರು.

RELATED ARTICLES

Latest News