ಬೆಂಗಳೂರು,ಏ.19- ಬಿಡದಿ ಮನೆ ಬಳಿ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ರಾಮನಗರ ಉಪ ವಿಭಾಗದ ಪೊಲೀಸರು ವಿವಿಧ ಆಯಾಮ ಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
ಕೌಟುಂಬಿಕ ಕಲಹ, ರಿಯಲ್ ಎಸ್ಟೇಟ್ ವ್ಯವಹಾರ, ಹಳೆ ದ್ವೇಷ, ಹಣಕಾಸು ವಹಿವಾಟು ಸೇರಿಂದತೆ ಮುಂತಾದ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ.ಈಗಾಗಲೇ ರಚಿಸಲಾಗಿರುವ ನಾಲ್ಕುವಿಶೇಷ ತಂಡಗಳು ಒಂದೊಂದು ಆಯಾಮಗಳಲ್ಲಿ ತನಿಖೆ ಕೈಗೊಂಡು ಮಾಹಿತಿಗಳನ್ನು ಸಂಗ್ರಹಿಸುತ್ತಿವೆ.
ಒಂದು ತಂಡ ಘಟನೆ ನಡೆದ ರಿಕ್ಕಿ ಅವರ ಬಿಡದಿ ಮನೆಗೆ ತೆರಳಿ ಅಲ್ಲಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದೆ. ಘಟನೆ ಯಾವಾಗ, ಎಷ್ಟು ಗಂಟೆಗೆ ನಡೆಯಿತು. ಮನೆಯಲ್ಲಿ ಯಾವ ಯಾವ ಸಿಬ್ಬಂದಿ ಇದ್ದರು. ರಿಕ್ಕಿ ರೈ ವಿದೇಶದಿಂದ ಯಾವಾಗ ಬಂದರು, ಅವರ ಜೊತೆ ಬೇರೆ ಯಾರಾದರು ಬಂದಿದ್ದರೇ, ಮನೆಯಲ್ಲಿ ಯಾರ್ಯಾರು ಯಾವ ಯಾವ ಕೆಲಸಗಳನ್ನು ಮಾಡುತ್ತಿದ್ದಿರಿ, ಇತ್ತೀಚಿಗೆ ಮನೆಗೆ ಯಾರಾದರೂ ಬಂದು ಹೋಗಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.
ಇಂದೊಂದು ತಂಡ ರಿಕ್ಕಿ ಅವರ ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆಗೆ ತೆರಳಿ ನೆರೆಹೊರಯವರಿಂದ ಮಾಹಿತಿ ಪಡೆದುಕೊಳ್ಳುತ್ತಿವೆ. ಆ ಮನೆಯಲ್ಲಿ ಯಾರ್ಯಾರು ಇದ್ದಾರೆ. ಯಾವ ಕೆಲಸ ಮಾಡುತ್ತಿದ್ದಾರೆ ಎಂಬುವುದನ್ನು ಸಂಗ್ರಹಿಸುತ್ತಿದೆ.ಮತ್ತೊಂದು ತಂಡ ರಿಕ್ಕಿ ರೈ ಅವರ ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಇನ್ನೊಂದು ತಂಡ ಅವರ ಕುಟುಂಬದವರ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಒಟ್ಟಾರೆ ರಿಕ್ಕಿ ರೈ ಅವರ ಮೇಲಿನ ಗುಂಡಿನ ದಾಳಿಗೆ ನಿಖರ ಕಾರಣಗಳನ್ನು ಈ ತನಿಖಾ ತಂಡಗಳು ಪತ್ತೆಹಚ್ಚುತ್ತಿವೆ.