ಬೆಂಗಳೂರು,ಏ.19-ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರ ಮೇಲೆ ತಡರಾತ್ರಿ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಬಗ್ಗೆ ನಾಲ್ವರ ವಿರುದ್ಧ ಎ್‌ಐಆರ್ ದಾಖಲಾಗಿದೆ.ರಿಕ್ಕಿ ರೈ ಹತ್ಯೆ ಯತ್ನದ ಹಿಂದೆ ಅನುರಾಧ, ರಾಕೇಶ್ ಮಲ್ಲಿ , ನಿತೀಶ್‌ಶೆಟ್ಟಿ ಮತ್ತು ವೈದ್ಯನಾಥನ್ ಅವರ ಕೈವಾಡವಿರಬಹುದು ಎಂದು ಕಾರು ಚಾಲಕ ಬಸವರಾಜು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ. ಬಸವರಾಜ್ ದೂರು ಆಧರಿಸಿ ಬಿಡದಿ ಠಾಣೆ ಪೊಲೀಸರು ಅನುರಾಧಾ, ರಾಕೇಶ್ ಮಲ್ಲಿ, ನಿತೀಶ್ ಶೆಟ್ಟಿ ಹಾಗೂ ವೈದ್ಯನಾಥನ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ಈ ಹಿಂದೆ ನನ್ನ ಮೇಲೆ ಹಲವಾರು ಬಾರಿ ಹಲ್ಲೆ ನಡೆಸಲು ಸಂಚು ರೂಪಿಸಲಾಗಿತ್ತು. ನನಗೆ ಜೀವ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಜಾಗರೂಕತೆ ವಹಿಸಿದ್ದೆ ಎಂದು ರಿಕ್ಕಿ ರೈ ನನಗೆ ತಿಳಿಸಿದ್ದರು ಎಂದು ಬಸವರಾಜ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾತ್ರಿ ರಿಕ್ಕಿ ರೈ, ಅಂಗರಕ್ಷಕ ರಾಜ್ ಪಾಲ್ ಹಾಗೂ ನಾನು ಬಿಡದಿ ಮನೆಯಿಂದ ಹೋಗುತ್ತಿದ್ದಾಗ ಮನೆಯ ಸ್ವಲ್ಪ ದೂರದಲ್ಲೇ ಜೋರಾದ ಶಬ್ದ ಕೇಳಿಸಿತು,ಸ್ವಲ್ಪ ಮುಂದೆ ಹೋಗಿ ಕಾರು ನಿಲ್ಲಿಸಿ ಟೈರ್ ಪಂಚರ್ ಆಗಿರಬಹುದೆಂದು ನೋಡಿದೆ ಸರಿ ಇದ್ದ ಕಾರಣ ಪುನಃ ಅಲ್ಲಿಂದ ಮುಂದೆ ಸಾಗುತ್ತಿದ್ದಂತೆ ಕಾರಿನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆದಿದೆ ಎಂದು ದೂರಿನಲ್ಲಿ ಬಸವರಾಜು ತಿಳಿಸಿದ್ದಾರೆ.
ಈ ಬಗ್ಗೆ ನಾನು ರಿಕ್ಕಿ ರೈ ರವರನ್ನು ಕೇಳಿದಾಗ ನೋವಿನಿಂದಲೆ ಈ ಘಟನೆಗೆ ಪ್ರಬಲವಾಗಿ ರಾಕೇಶ್ ಮಲ್ಲಿ ಮತ್ತು ಅನುರಾಧ ಹಾಗೂ ನಿತೇಶ್ ಎಸ್ಟೇಟ್ ಮಾಲಿಕರುಗಳಾದ ನಿತೇಶ್ ಶೆಟ್ಟಿ ಮತ್ತು ವೈದ್ಯನಾಥನ್ ಹಾಗೂ ಅವರ ಅನುಯಾಯಿಗಳ ಮೇಲೆ ಅನುಮಾನವಿದೆಯೆಂದು ಅವರು ನನಗೆ ತಿಳಿಸಿದರು ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಿಕ್ಕಿ ರೈ ಅವರ ತಂದೆ ಮುತ್ತಪ್ಪ ರೈ ಅವರು ಭೂಗತ ಜಗತ್ತಿನೊಂದಿಗೆ ಸಂಪರ್ಕ ಇರಿಸಿಕೊಂಡಿದ್ದರಿಂದ ಅವರ ಮೇಲೂ ಎರಡು ಬಾರಿ ಕೊಲೆ ಯತ್ನ ನಡೆದಿದ್ದರೂ ಅವರು ಅಪಾಯದಿಂದ ಪಾರಾಗಿದ್ದರು.
ಇದೀಗ ಮುತ್ತಪ್ಪ ರೈ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಮಾದರಿಯಲ್ಲೇ ರಿಕ್ಕಿ ರೈ ಅವರ ಮೇಲೂ ಗುಂಡಿನ ದಾಳಿ ನಡೆಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ರಿಕ್ಕಿ ರೈ ರವರ ತಂದೆ ಮುತ್ತಪ್ಪ ರೈ ರವರು ಕ್ಯಾನ್ಸರ್ ಖಾಯಿಲೆಯಿಂದ ಮೃತಪಟ್ಟಿದ್ದು, ಅವರ ಕೊನೆಯ ದಿನಗಳಲ್ಲಿಯೂ ಕೂಡ ರಾಕೇಶ್ ಹಾಗೂ ಅನುರಾಧ ಅವರಿಂದ ಬೆದರಿಕೆಗಳು ಬಂದಿದ್ದು ಮಾನಸಿಕವಾಗಿಯೂ ಕುರುಕುಳ ನೀಡಿದ್ದರು ಎಂದು ರಿಕ್ಕಿ ರೈ ನನಗೆ ತಿಳಿಸಿದ್ದಾರೆಂದು ಬಸವರಾಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೌಟುಂಬಿಕ ಕಲಹದ ಜತೆಗೆ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈ ಇನ್ನಿತರ ಹಲವಾರು ಮಂದಿಯೊಂದಿಗೂ ವೈಷಮ್ಯ ಕಟ್ಟಿಕೊಂಡಿದ್ದರು ಎನ್ನಲಾಗಿದೆ.
ಹೀಗಾಗಿ ಪೊಲೀಸರು ಇನ್ನಿತರ ಕೋನಗಳಲ್ಲೂ ಕೊಲೆಯತ್ನದ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.
ಅನುರಾಧ, ರಾಕೇಶ್ ಮಲ್ಲಿ, ನಿತೀಶ್ ಶೆಟ್ಟಿ ಹಾಗೂ ವೈದ್ಯನಾಥನ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದರೂ ಬೇರೆ ಯಾರಾದರೂ ಈ ಕೃತ್ಯದ ಹಿಂದಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಒಟ್ಟಾರೆ, ರಿಕ್ಕಿ ರೈ ಹತ್ಯೆ ಯತ್ನ ಕುರಿತಂತೆ ಪೊಲೀಸರು ಕೌಟುಂಬಿಕ, ಹಣಕಾಸು, ಆಸ್ತಿ ವಿಚಾರ ಹಾಗೂ ವೈಷಮ್ಯ ಕುರಿತ ಹಾಗೂ ಇನ್ನಿತರ ಕೋನಗಳಲ್ಲೂ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.