ನವದೆಹಲಿ,ವಿ.20- ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಎದ್ದ ದಂಗೆಯಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದ ಅಲ್ಲಿಯ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ರೆಡ್ ಕಾರ್ನರ್ ನೋಟೀಸ್ ನೀಡುವಂತೆ ಇಂಟರ್ ಪೋಲ್‌ಗೆ ಮನವಿ ಮಾಡಲಾಗಿದೆ.
ಬಾಂಗ್ಲಾದೇಶ ಪೊಲೀಸರ ರಾಷ್ಟ್ರೀಯ ಕೇಂದ್ರ ಬ್ಯೂರೋ ಇಂಟರ್‌ಪೋಲ್‌ಗೆ ಶೇಖ್ ಹಸೀನಾ ಸೇರಿದಂತೆ 12 ವ್ಯಕ್ತಿಗಳ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಹೊರಡಿಸುವಂತೆ ಕೋರಿಕೆಯನ್ನು ಸಲ್ಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
77 ವರ್ಷದ ಹಸೀನಾ, ಕಳೆದ ವರ್ಷ ಆಗಸ್ಟ್‌ನಲ್ಲಿ ಭುಗಿಲೆದ್ದ ಗಲಭೆಗಳ ನಂತರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಅವರು ಭಾರತಕ್ಕೆ ಪಲಾಯನ ಮಾಡಿದ್ದರು. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಶೇಖ್ ಹಸೀನಾ ಅವರನ್ನು ಮರಳಿ ಕರೆತರಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಆಕೆಯ ಪಾಸ್‌ಪೋರ್ಟ್ ಕೂಡ ರದ್ದುಗೊಂಡಿದೆ. ಅವರು ಭಾರತ ಸರ್ಕಾರಕ್ಕೂ ಪತ್ರ ಬರೆದರು. ಭಾರತ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಫೆ. 6 ರಂದು ಶೇಖ್ ಹಸೀನಾ ಭಾಷಣದಿಂದ ಆಕ್ರೋಶಗೊಂಡ ಉದ್ದಿಕ್ಷರ ಗುಂಪೊಂದು ಢಾಕಾದಲ್ಲಿರುವ ಅವರ ತಂದೆಯ ನಿವಾಸವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದೆ. ಶೇಖ್ ಹಸೀನಾ ತಂದೆ, ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಸ್ಮಾರಕ ಮತ್ತು ಅವರ ನಿವಾಸವನ್ನು ಧ್ವಂಸಗೊಳಿಸಿದ್ದರು. ಮನೆಗೆ ಬೆಂಕಿ ಹಚ್ಚಿ, ಜೆಸಿಬಿ, ಮೂಲಕ ಮನೆ ನಾಶಮಾಡಲು ಯತ್ನಿಸಿದ್ದರು.
ಶೇಖ್ ಹಸೀನಾರನ್ನು ವಾಪಾಸ್ ಕರೆಸಿಕೊಳ್ಳಲು ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಕೆಲವುದಿನಗಳ ಹಿಂದೆಯಷ್ಟೇ ಢಾಕಾ ನ್ಯಾಯಾಲಯವು ಆಕೆಯ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳು ಸೇರಿದಂತೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಿತ್ತು. ಗಡಿಪಾರಾಗಿ ಭಾರತದಲ್ಲಿರುವ ಹಸೀನಾ ಅವರ ಧನ್ನೊಂಡಿ ನಿವಾಸ ಸುದಾಸಧನ್ ಮತ್ತು ಅವರ ಕುಟುಂಬ ಸದಸ್ಯರು ಹೊಂದಿರುವ ಇತರ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಆದೇಶ ನೀಡಿತ್ತು.
ಇದೀಗ ಹಸೀನಾರನ್ನು ವಾಪಾಸ್ ಕರೆಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಬಾಂಗ್ಲಾದೇಶ ಇಂಟರ್ ಪೋಲ್ ಮೊರೆ ಹೋಗಿದೆ. ಈ ಬಗ್ಗೆ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ (ಮಾಧ್ಯಮ) ಎನಾಮುಲ್ ಹಕ್ ಸಾಗೋರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಹಸೀನಾ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿಗೊಳಿಸುವಂತೆ ಇಂಟರ್ ಪೋಲ್‌ಗೆ ಮನವಿ ಮಾಡಲಾಗಿದೆ. ವಿದೇಶಗಳಿಗೆ ಪರಾರಿಯಾಗಿರುವವರನ್ನು ಪತ್ತೆ ಹಚ್ಚಲು ಇಂಟರ್‌ಪೋಲ್ ಸಹಾಯ ಮಾಡುತ್ತದೆ ಎಂದಿದ್ದಾರೆ.
ನೊಬೆಲ್ ಪ್ರಶಸ್ತಿ ವಿಜೇತರಾದ ಮೊಹಮ್ಮದ್ ಯೂನುಸ್ ನೇತೃತ್ವದಲ್ಲಿ ಸದ್ಯ ಬಾಂಗ್ಲಾದಲ್ಲಿ ಹಂಗಾಮಿ ಸರ್ಕಾರ ಅಸ್ತಿತ್ವದಲ್ಲಿದೆ. ಈ ಸರ್ಕಾರವನ್ನು ಬೀಳಿಸಲು ಶೇಖ್ ಹಸೀನಾ ಪಿತೂರಿ ನಡೆಸುತ್ತಿದ್ದಾರೆ ಎನ್ನುವ ಆರೋಪವೂ ಬಾಂಗ್ಲಾದಲ್ಲಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಈಗ ಅವರಿಗೆ ರೆಡ್ ಕಾರ್ನರ್ ನೋಟೀಸ್ ನೀಡುವಂತೆ ಇಂಟರ್‌ಪೋಲ್‌ಗೆ ಮನವಿ ಹೋಗಿದೆ.
ಬಾಂಗ್ಲಾದೇಶದ ಕೋರ್ಟ್‌ಗಳು, ತನಿಖಾ ಸಂಸ್ಥೆಗಳು ಮೊದಲಾದವುಗಳಿಂದ ಮನವಿಗಳು ಬಂದಾಗ ನ್ಯಾಷನಲ್ ಸೆಂಟ್ರಲ್ ಬ್ಯೂರೋ ಇಂಟರ್ ಪೋಲ್‌ಗೆ ಈ ರೀತಿಯ ಮನವಿ ಮಾಡುತ್ತದೆ ಎನ್ನಲಾಗಿದೆ. ವಿವಿಧ ಪ್ರಕರಣಗಳಲ್ಲಿ ನಡೆಯುತ್ತಿರುವ ತನಿಖೆ ವೇಳೆ ಕೇಳಿ ಬಂದ ಆರೋಪಗಳ ಸಂಬಂಧ ಈ ಮನವಿಗಳನ್ನು ಮಾಡಲಾಗಿದೆ ಎಂದು ಅಲ್ಲಿನ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ದೇಶ ಭ್ರಷ್ಟರಾದ ಶೇಖ್ ಹಸೀನಾ ಹಾಗೂ ಇತರರನ್ನು ಬಂಧಿಸಲು ಇಂಟರ್‌ಪೋಲ್ ನೆರವು ಪಡೆಯುವಂತೆ ಕಳೆದ ವರ್ಷದ ನವೆಂಬರ್ ತಿಂಗಳಲ್ಲೇ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಮುಖ್ಯ ಪ್ರಾಸಿಕ್ಯೂಟರ್ ಕಚೇರಿಯು ಬಾಂಗ್ಲಾದ ಪೊಲೀಸ್‌ಗೆ ತಿಳಿಸಿತ್ತು.ಬಾಂಗ್ಲಾದೇಶದಲ್ಲಿ ಹಲವು ವರ್ಷಗಳಿಂದ ಪ್ರಧಾನಿಯಾಗಿದ್ದಶೇಖ್ ಹಸೀನಾ 2024ರಲ್ಲಿ ಬಾಂಗ್ಲಾದೇಶದಲ್ಲಿ ಬೃಹತ್ ವಿದ್ಯಾರ್ಥಿ ಪ್ರತಿಭಟನೆ ಬೆನ್ನಲ್ಲೇ ಭಾರತಕ್ಕೆ ತಪ್ಪಿಸಿಕೊಂಡು ಬಂದಿದ್ದರು. ಹಸೀನಾ ಅವರು ಭಾರತದ ಜೊತೆ ಸ್ನೇಹ ಸಂಬಂಧ ಹೊಂದಿದ್ದರು. ಅವರ ನಿರ್ಗಮನದ ಬಳಿಕ ಅಸ್ತಿತ್ವಕ್ಕೆ ಬಂದಿರುವ ಸರ್ಕಾರವು ಸ್ಪಷ್ಟವಾಗಿ ಭಾರತ ವಿರೋಧಿ ನಿಲುವನ್ನು ಹೊಂದಿದೆ.