ಚೆನ್ನೈ,ನ. 28: ಡಿಟ್ವಾ ಚಂಡಮಾರುತದ ಪರಿಣಾಮವಾಗಿ ದಕ್ಷಿಣ ಭಾರತದ ಕರಾವಳಿ ಪ್ರದೇಶಗಳಲ್ಲಿ ಹವಾಮಾನ ಪರಿಸ್ಥಿತಿ ಹದಗೆಡುವ ಲಕ್ಷಣಗಳು ಗೋಚರಿಸುತ್ತಿವೆ. ಬಂಗಾಳಕೊಲ್ಲಿಯಲ್ಲಿನ ಆಳವಾದ ವಾಯುಭಾರ ಕುಸಿತವು ಡಿಟ್ವಾ ಚಂಡಮಾರುತವಾಗಿ ರೂಪುಗೊಂಡಿದೆ. ಚಂಡಮಾರುತವು ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ಕಡೆಗೆ ಸಾಗುತ್ತಿದ್ದು, ನವೆಂಬರ್ 30 ರವರೆಗೆ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ.
ಶ್ರೀಲಂಕಾದ ಪೊಟ್ಟುವಿಲ್ ಬಳಿ ಚಂಡಮಾರುತ ರೂಪುಗೊಂಡಿದೆ. ಈ ಸ್ಥಳವು ಬಟಿಕಲೋವಾದಿಂದ ಸುಮಾರು 90 ಕಿ.ಮೀ ದಕ್ಷಿಣ-ಆಗ್ನೇಯ ಮತ್ತು ಚೆನ್ನೈನಿಂದ ಸುಮಾರು 700 ಕಿ.ಮೀ ದಕ್ಷಿಣ-ಆಗ್ನೇಯದಲ್ಲಿದೆ.ಪ್ರಸ್ತುತ ಮುನ್ಸೂಚನೆಗಳ ಪ್ರಕಾರ ಡಿಟ್ವಾ ಚಂಡಮಾರುತವು ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸುತ್ತದೆ ಮತ್ತು ನವೆಂಬರ್ 30 ರ ಬೆಳಗ್ಗೆ ತಮಿಳುನಾಡು-ಪುದುಚೇರಿ-ದಕ್ಷಿಣ ಆಂಧ್ರ ಕರಾವಳಿಯನ್ನು ತಲುಪುತ್ತದೆ. ಕೆಲವು ದಿನಗಳ ಹಿಂದೆ ಸಕ್ರಿಯವಾಗಿದ್ದ ಸೆನ್ಯಾರ್ ಚಂಡಮಾರುತವು ಈಗ ದುರ್ಬಲಗೊಂಡಿದೆ.
ಇದರಿಂದಾಗಿ ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಇಂದು ಮತ್ತು ನಾಳೆ ಕೆಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದಿನಿಂದ ಡಿಸೆಂಬರ್ 1 ರವರೆಗೆ ದಕ್ಷಿಣ ಆಂಧ್ರಪ್ರದೇಶ ಮತ್ತು ರಾಯಲಸೀಮಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ನವೆಂಬರ್ 30 ರಂದು ಈ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.ನವೆಂಬರ್ 27 ರಿಂದ 29 ರವರೆಗೆ ಕೇರಳ ಮತ್ತು ಮಾಹೆಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ತೆಲಂಗಾಣದಲ್ಲಿ ನವೆಂಬರ್ 30 ಮತ್ತು ಡಿಸೆಂಬರ್ 1 ರಂದು ಮಳೆಯಾಗುವ ಸಾಧ್ಯತೆ ಇದೆ. ನವೆಂಬರ್ 29 ರಂದು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ತಮಿಳುನಾಡು, ಕೇರಳ, ಆಂಧ್ರಪ್ರದೇಶದ ಕರಾವಳಿ, ಕರ್ನಾಟಕ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕಚೇರಿ ಎಚ್ಚರಿಸಿದೆ. ಪ್ರಾದೇಶಿಕ ಹವಾಮಾನ ಕೇಂದ್ರವು ತಮಿಳುನಾಡಿನ ಹಲವಾರು ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ನೀಡಿದೆ. ತಂಜಾವೂರು, ತಿರುವರೂರು, ನಾಗಪಟ್ಟಣಂ ಮತ್ತು ಮೈಲಾಡುತುರೈಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, 24 ಗಂಟೆಗಳಲ್ಲಿ 20 ಸೆಂ.ಮೀ ಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಅದೇ ರೀತಿ ಚೆನ್ನೈ, ತಿರುವಲ್ಲೂರು, ಕಾಂಚಿಪುರಂ, ರಾಣಿಪೇಟೆ ಮತ್ತು ಚೆಂಗಲ್ಪಟ್ಟುಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
