Sunday, April 20, 2025
Homeರಾಜ್ಯರಿಕ್ಕಿ ರೈ ಹತ್ಯೆಯತ್ನ, ಸುಪಾರಿ ನೀಡಿರುವ ಶಂಕೆ

ರಿಕ್ಕಿ ರೈ ಹತ್ಯೆಯತ್ನ, ಸುಪಾರಿ ನೀಡಿರುವ ಶಂಕೆ

Rikki Rai's assassination attempt

ಬೆಂಗಳೂರು,ಏ.20- ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡು ಹಾರಿಸಿ ಕೊಲೆಗೆ ಪ್ರಯತ್ನಿಸಿ ಪರಾರಿಯಾಗಿರುವವರು ಸುಪಾರಿ ಕಿಲ್ಲರ್‌ರ‍ಸ ಇರಬಹುದು ಎಂದು ರಾಮನಗರ ಜಿಲ್ಲಾ ಪೊಲೀಸರು ಶಂಕಿಸಿ ತನಿಖೆ ತೀವ್ರಗೊಳಿಸಿದ್ದಾರೆ.

ಗುಂಡು ಹಾರಿಸಿ ಪರಾರಿಯಾಗಿರುವ ದುಷ್ಕರ್ಮಿಗಳ ಬಂಧನಕ್ಕೆ ರಚಿಸಲಾಗಿರುವ ನಾಲ್ಕು ತಂಡಗಳಲ್ಲಿ ಒಂದು ತಂಡ ಈ ನಿಟ್ಟಿನಲ್ಲಿ ತನಿಖೆ ಕೈಗೊಂಡು ಕೆಲವು ಸುಪಾರಿ ಕಿಲ್ಲರ್‌ಗಳನ್ನು ವಿಚಾರಣೆಗೆ ಒಳಪಡಿಸಿ, ಮಾಹಿತಿ ಪಡೆದುಕೊಳ್ಳುತ್ತಿದೆ.ಘಟನೆ ನಡೆದು 24 ಗಂಟೆ ಕಳೆದರೂ ಸಹ ರಿಕ್ಕಿ ರೈ ಮೇಲೆ ಗುಂಡು ಹಾರಿಸಿ ಓಡಿಹೋಗಿರುವ ದುಷ್ಕರ್ಮಿಗಳು ಯಾರು ಎಂಬುದು ನಿಖರವಾಗಿ ಪೊಲೀಸರಿಗೆ ಇನ್ನೂ ಗೊತ್ತಾಗಿಲ್ಲ. ಒಟ್ಟಾರೆ ಪ್ರಕರಣ ಇನ್ನೂ ನಿಗೂಢವಾಗಿದೆ.

ರಿಕ್ಕಿ ರೈ ಮೇಲೆ ಯಾರು, ಯಾವ ಕಾರಣಕ್ಕಾಗಿ ಗುಂಡು ಹಾರಿಸಿದ್ದಾರೆ ಎಂಬುದರ ಬಗ್ಗೆ ಸಾಕಷ್ಟು ಅನುಮಾನಗಳು ಪೊಲೀಸರನ್ನು ಕಾಡುತ್ತಿವೆ. ಮುತ್ತಪ್ಪರೈ ಅಪಾರ ಆಸ್ತಿ ಮಾಡಿರುವುದರಿಂದ ಆಸ್ತಿ ವಿಚಾರದಲ್ಲಾಗಿದೆಯಾ, ರಿಕ್ಕಿ ರೈ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿರುವುದರಿಂದ ಆ ವ್ಯವಹಾರದ ಹಿನ್ನೆಲೆಯಲ್ಲಿ ಏನಾದರೂ ಆಗಿದೆಯಾ ಅಥವಾ ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆಯಾಗಿದೆಯಾ ಎಂಬುದರ ಬಗ್ಗೆ ಪೊಲೀಸರು ಇಂಚಿಂಚೂ ಮಾಹಿತಿ ಕಲೆಹಾಕುತ್ತಿದ್ದಾರೆ.

ರಿಕ್ಕಿ ರೈ ಅವರ ಕಾರಿನ ಚಾಲಕ ಬಸವರಾಜು ಅವರು ಮುತ್ತಪ್ಪರೈನ ಎರಡನೇ ಪತ್ನಿ ಅನುರಾಧ, ರೈನ ಆಪ್ತ ರಾಕೇಶ್‌ ಮಲ್ಲಿ, ನಿತೀಶ್‌ ಶೆಟ್ಟಿ, ವೈದ್ಯನಾಥನ್‌ರವರುಗಳ ವಿರುದ್ಧ ಅನುಮಾನ ವ್ಯಕ್ತಪಡಿಸಿ ಬಿಡದಿ ಪೊಲೀಸ್‌‍ ಠಾಣೆಯಲ್ಲಿ ದೂರು ನೀಡಿದ್ದಾರೆ.ರಿಕ್ಕಿ ರೈ ಅವರೇ ಇವರುಗಳ ಮೇಲೆ ಅನುಮಾನ ವ್ಯಕ್ತಪಡಿಸಿ ನನ್ನ ಬಳಿ ಹೇಳಿದ್ದಾರೆ ಎಂದು ದೂರಿನಲ್ಲಿ ಬಸವರಾಜು ತಿಳಿಸಿದ್ದಾರೆ.

ಈ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್‌ನಲ್ಲಿ ದಾಖಲಾಗಿರುವ ನಾಲ್ವರಿಗೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸದ್ಯದಲ್ಲೇ ನೋಟೀಸ್‌‍ ನೀಡಲಿದ್ದಾರೆ.ಪ್ರಕರಣ ದಾಖಲಾದ ನಂತರ ಒಂದು ತಂಡ ಎಫ್‌ಐಆರ್‌ನಲ್ಲಿರುವ ಅಂಶಗಳ ಬಗ್ಗೆ ತೀವ್ರ ತನಿಖೆ ನಡೆಸುತ್ತಿದೆ. ಘಟನೆ ನಡೆದ ಸ್ಥಳದಲ್ಲಿ ಸಿಮ್‌ ಇಲ್ಲದ ಬೇಸಿಕ್‌ ಮೊಬೈಲ್‌ ಸೆಟ್‌ ದೊರೆತಿದೆ. ಅದನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಈಗಾಗಲೇ ಚಾಲಕ ಬಸವರಾಜು ಅವರಿಂದ ಹಲವಾರು ಮಾಹಿತಿಗಳನ್ನು ಪಡೆದುಕೊಂಡಿರುವ ಬಿಡದಿ ಠಾಣೆ ಪೊಲೀಸರು ಗಾಯಗೊಂಡು ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಕ್ಕಿ ರೈರನ್ನು ಭೇಟಿ ಮಾಡಿ ಘಟನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ.ರಿಕ್ಕಿ ರೈ ಅವರ ಹೇಳಿಕೆ ಪಡೆದ ನಂತರ ಈ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.

RELATED ARTICLES

Latest News