Sunday, April 20, 2025
Homeರಾಜ್ಯಜಾತಿ ಜನಗಣತಿ ವರದಿ ಹೈಕಮಾಂಡ್‌ ಅಂಗಳಕ್ಕೆ

ಜಾತಿ ಜನಗಣತಿ ವರದಿ ಹೈಕಮಾಂಡ್‌ ಅಂಗಳಕ್ಕೆ

Caste Census Report To High Command

ನವದೆಹಲಿ,ಏ.20- ಜಾತಿ ಗಣತಿ ವರದಿ ಕರ್ನಾಟಕ ದಲ್ಲಿ ಭಾರೀ ಚರ್ಚೆ ಹಾಗೂ ವಿರೋಧಕ್ಕೆ ಕಾರಣವಾಗಿದೆ. ಸರ್ಕಾರದ ಸಚಿವ ಸಂಪುಟದಲ್ಲೇ ವರದಿಗೆ ಅಪಸ್ವರ ವ್ಯಕ್ತವಾಗಿದೆ. ಸಂಪುಟದಲ್ಲಿರುವ ಒಕ್ಕಲಿಗ, ಲಿಂಗಾಯತ ನಾಯಕರು ವರದಿ ಮರುಪರಿಶೀಲಿಸ ಬೇಕೆಂದು ಆಗ್ರಹಿಸಿದ್ದಾರೆ.ಹೀಗಾಗಿ ವಿಪಕ್ಷಗಳು ಇದನ್ನೇ ತಮ ಅಸ್ತ್ರವಾಗಿಸಿಕೊಂಡು ಸರ್ಕಾರದ ಕಾಲೆಳೆಯುವ ಪ್ರಯತ್ನ ಮಾಡುತ್ತಿವೆ. ಈ ಎಲ್ಲಾ ಬೆಳವಣಿಗೆ ನಡುವಲ್ಲೇ ವರದಿಯು ಇದೀಗ ಕಾಂಗ್ರೆಸ್‌‍ ಹೈಕಮಾಂಡ್‌ ಅಂಗಳ ತಲುಪಿದೆ.

ಎರಡು ಬಾರಿ ಮುಂದೂಡಲ್ಪಟ್ಟಿದ್ದ ವರದಿಯನ್ನು ಅಂತಿಮವಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಲಾಗಿದ್ದು, ವರದಿಗೆ ಸ್ವಪಕ್ಷದ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಸಂಪುಟದಲ್ಲಿ ವರದಿ ಮಂಡನೆ ಮಾಡುವುದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭೆ ಪ್ರತಿಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್‌‍ ವರಿಷ್ಠ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚಿಸಿದ್ದು, ರಾಹುಲ್‌ ಗ್ರೀನ್‌ ಸಿಗ್ನಲ್‌ ಕೊಟ್ಟ ಬಳಿಕವೇ ಈ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಿದ್ದಾರೆಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹೀಗಾಗಿ ಇದೀಗ ಸಂಪುಟ ಸಭೆಯಲ್ಲಿ ನಡೆದ ಬೆಳವಣಿಗೆಗಳ ಕುರಿತು ರಾಹುಲ್‌ ಗಾಂಧಿಯವರಿಗೆ ಮಾಹಿತಿ ನೀಡಲು ನಿರ್ಧರಿಸಿದ್ದಾರೆ.ಕೆಲ ಸಚಿವರು ವರದಿಗೆ ವಿರೋಧ ವ್ಯಕ್ತಪಡಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ದೂರು ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹೀಗಾಗಿ ಇದನ್ನು ತಡೆಯಲು ಮುಖ್ಯಮಂತ್ರಿಗಳು ಸಚಿವ ಅಭಿಪ್ರಾಯಗಳನ್ನು ಕಾಗದದ ಮೇಲೆ ಸಂಗ್ರಹಿಸಿ ಹೈಕಮಾಂಡ್‌ಗೆ ಕಳುಹಿಸಲು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಸಚಿವರುಗಳು ಜಾತಿ ಗಣತಿಗೆ ಆಕ್ಷೇಪಿಸಿ ಸಂಪುಟದಲ್ಲಿ ಧ್ವನಿ ಎತ್ತಿದ್ದರು. ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಸಮಾಜದಿಂದ ಬಂದಿರುವ ಸಚಿವರುಗಳು ವರದಿ ಪರ ವಹಿಸಿದ್ದರು. ತಟಸ್ಥ ನಿಲುವು ತಳೆದವರೂ ಇದ್ದರು. ಈ ಎಲ್ಲ ಅಂಶಗಳ ಬಗ್ಗೆಯೂ ಹೈಕಮಾಂಡ್‌ಗೆ ವಿಸ್ತೃತವಾದ ಮಾಹಿತಿ ನೀಡಲಿದ್ದಾರೆ.ಲಿಂಗಾಯತರು ಮತ್ತು ವೀರಶೈವರಿಗೆ ಪ್ರತ್ಯೇಕ ಸ್ಥಾನಮಾನ ನೀಡುವ ಸಿದ್ದರಾಮಯ್ಯ ಅವರ ಪ್ರಸ್ತಾವನೆಯಿಂದಾಗಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಸೋಲು ಅನುಭವಿಸಿದ ವಿಷಯವನ್ನು ಸಚಿವರು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಈ ವೇಳೆ ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು ವಿಚಾರ ಪ್ರಸ್ತಾಪಿಸಿದ್ದ ಎಂ.ಬಿ.ಪಾಟೀಲ್‌ ಅವರು ಗೆಲುವು ಸಾಧಿಸಿದ್ದಾರೆಂದು ವಾದಿಸಿದರು ಎನ್ನಲಾಗಿದೆ.ಜಾತಿ ಗಣತಿ ಬಗ್ಗೆ ನಮ ಪಕ್ಷದ ಪ್ರಣಾಳಿಕೆಯಲ್ಲೇ ಪ್ರಸ್ತಾಪಿಸಲಾಗಿದೆ.

ಹಾಗಾಗಿ ನುಡಿದಂತೆ ನಡೆದುಕೊಳ್ಳಬೇಕು. ಸಾಮಾಜಿಕ ನ್ಯಾಯ ಪರಿಪಾಲನೆಗೆ ಕೊಟ್ಟಿರುವ ಈ ಭರವಸೆ ಈಡೇರಿಸದಿದ್ದರೆ ತಪ್ಪಾಗುತ್ತದೆ ಎಂದು ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಯವರು ಕಿವಿಮಾತು ಹೇಳಿದರು.
ಸಂಪುಟ ಸಭೆಯಲ್ಲಿನ ಚರ್ಚೆಯ ಬೆನ್ನಲ್ಲೇ ಸಿದ್ದರಾಮಯ್ಯ ಅವರು, ರಾಜ್ಯದ 20-30 ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದ ಸ್ಥಾನಗಳು ಅಹಿಂದ ಮತಗಳಿಂದ ನಿರ್ಧರಿಸಲ್ಪಡುತ್ತವೆ ಎಂಬುದನ್ನು ಸಾಬೀತುಪಡಿಸಲು ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಜಾತಿ ಜನಗಣತಿ ವರದಿ ಪಡೆಯಲು ಮುಂದಾಗಿದ್ದಾರೆ. ವರದಿ ಬಳಿಕ 2018 ರಲ್ಲಿ ಕಾಂಗ್ರೆಸ್‌‍ ಸೋಲಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನದ ವಿಷಯವೇ ಕಾರಣ ಎಂಬ ಗ್ರಹಿಕೆಯನ್ನೂ ಹೋಗಲಾಡಿಸಲು ಮುಂದಾಗಿದ್ದಾರೆಂದು ಎಂದು ಮೂಲಗಳು ತಿಳಿಸಿವೆ.


ಜಾತಿ ಗಣತಿ ವಿಚಾರವಾಗಿ ಕಾಂಗ್ರೆಸ್‌‍ ಪಕ್ಷದಲ್ಲೇ ಭಿನ್ನ ಅಭಿಪ್ರಾಯಗಳಿವೆ. ವರದಿಯಲ್ಲಿರುವ ಅಂಕಿ-ಅಂಶಗಳ ಕುರಿತಾಗಿ ಕಾಂಗ್ರೆಸ್‌‍ ಪಕ್ಷದ ಕೆಲವು ಸಚಿವರು ಹಾಗೂ ಶಾಸಕರಲ್ಲಿ ಗೊಂದಲಗಳಿದ್ದು, ಅದನ್ನು ಬಗೆಹರಿಸುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲಾಗಿದೆ. ಜಾತಿ ಗಣತಿ ಕುರಿತಾಗಿ ಅಹಿಂದ ವರ್ಗದ ಸಚಿವರು, ಶಾಸಕರು ಮೆಚ್ಚುಗೆ ಮಾತನ್ನಾಡುತ್ತಿದ್ದಾರೆ. ಈ ವರದಿಯ ಅಗತ್ಯತೆಯ ಕುರಿತಾಗಿ ಅವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಸಚಿವರಾದ ಡಾ.ಜಿ.ಪರಮೇಶ್ವರ್‌, ಎಸ್‌‍.ಮಹದೇವಪ್ಪ, ಭೈರತಿ ಸುರೇಶ್‌, ಶಿವರಾಜ್‌ ತಂಗಡಗಿ, ಪ್ರಿಯಾಂಕ್‌ ಖರ್ಗೆ ಸೇರಿದಂತೆ ಬಹುತೇಕ ಸಚಿವರು ವರದಿಯ ಪರವಾಗಿದ್ದಾರೆ.
ಆದರೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಹಿನ್ನೆಲೆಯ ಸಚಿವರು ಮತ್ತು ಶಾಸಕರ ಅಭಿಪ್ರಾಯಗಳು ಕುತೂಹಲಕ್ಕೆ ಕಾರಣವಾಗಿದೆ. ಶ್ಯಾಮನೂರು ಶಿವಶಂಕರಪ್ಪ ಅವರ ವಿರೋಧ ಸಿಎಂ ಸಿದ್ದರಾಮಯ್ಯ ಅವರಿಗೆ ಬಹುದೊಡ್ಡ ಸವಾಲಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ವರದಿಗೆ ನೇರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಮನೂರು ವಿರೋಧ ಲಿಂಗಾಯತ ಸಮುದಾಯದಲ್ಲಿ ಪರಿಣಾಮವನ್ನು ಬೀರಲಿದೆ.


ಶಾಮನೂರು ಅವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌‍ ಸರ್ಕಾರದ ನಡೆಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಅಲ್ಲದೆ ಹೊಸ ಗಣತಿಯನ್ನು ನಡೆಸಲು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದನ್ನು ಬಗೆಹರಿಸುವುದು ಸವಾಲಾಗಿದೆ.


ಡಿಕೆ ಶಿವಕುಮಾರ್‌ ಎಚ್ಚರಿಕೆಯ ನಡೆ:
ಜಾತಿ ಗಣತಿ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಎಚ್ಚರಿಕೆಯ ನಡೆಯನ್ನು ಅನುಸರಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಜಾತಿ ಗಣತಿಯನ್ನು ವಿರೋಧವೂ ಮಾಡಿಲ್ಲ ಬೆಂಬಲವೂ ನೀಡಿಲ್ಲ. ಹೇಳಿಕೆಗಳನ್ನು ನೀಡುವಾಗಲೂ ಅವರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಜಾತಿ ಗಣತಿಗೆ ಶಾಮನೂರು ವಿರೋಧದ ಬಗ್ಗೆ ಮಾತನಾಡುವ ವೇಳೆ ವೀರಶೈವ ಮಹಾಸಭಾದವರು ಅವರ ಸಮಾಜ ರಕ್ಷಣೆ ಮಾಡಿಕೊಳ್ಳಲು ಹೊರಟಿದ್ದು, ಅವರನ್ನು ನಾವು ಏಕೆ ಟೀಕೆ ಮಾಡಬೇಕು? ಪ್ರಜಾಪ್ರಭುತ್ವ, ಸಂವಿಧಾನದ ಪ್ರಕಾರವಾಗಿ ಅವರುಗಳು ತಮ ನಿಲುವುಗಳನ್ನು ಪ್ರತಿಪಾದನೆ ಮಾಡಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮ ಅಸಮಾಧಾನವನ್ನು ಇಲ್ಲಿ ಹೊರ ಹಾಕಿರುವುದು ಸ್ಪಷ್ಟವಾಗುತ್ತಿದೆ.

ಒಕ್ಕಲಿಗರ ಸಚಿವರು, ಶಾಸಕರ ನಡೆ ಕುತೂಹಲ:
ಜಾತಿ ಗಣತಿ ಕುರಿತಾಗಿ ಒಕ್ಕಲಿಗ ಸಮದಾಯದ ಇತರ ಶಾಸಕರು ಹಾಗೂ ಸಚಿವರ ನಡೆಯೂ ಕುತೂಹಲಕಾರಿಯಾಗಿದೆ. ಜಾತಿ ಗಣತಿ ಕುರಿತಾಗಿ ಈಗಾಗಲೇ ಹೇಳಿಕೆ ನೀಡಿರುವ ಕಾಂಗ್ರೆಸ್‌‍ ಶಾಸಕ ಡಾ. ಎಚ್‌.ಡಿ ರಂಗನಾಥ್‌ ವೈಜ್ಞಾನಿಕವಾಗಿ ಮತ್ತೆ ಜಾತಿ ಗಣತಿ ನಡೆಯಲಿ. ಜಾತಿ ಗಣತಿ ಬಹಿರಂಗವಾಗಿಲ್ಲ. ಆದರೆ ಸಣ್ಣ ಪುಟ್ಟ ಲೋಪಗಳು ಇರುವುದು ಕಂಡು ಬಂದಿದೆ. ಹೀಗಿರುವಾಗ ವೈಜ್ಞಾನಿಕವಾಗಿ ಮತ್ತೆ ಜಾತಿ ಗಣತಿ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಎಂ.ಬಿ. ಪಾಟೀಲ್‌‍, ಖಂಡ್ರೆ ನಡೆ ಏನು?
ಸಿದ್ದರಾಮಯ್ಯ ಸರ್ಕಾರದ ಪ್ರಭಾವಿ ಸಚಿವರಾಗಿರುವ ಎಂಬಿ ಪಾಟೀಲ್‌ ಹಾಗೂ ಈಶ್ವರ್‌ ಖಂಡ್ರೆ ಯಾವ ನಡೆಯನ್ನು ಅನುಸರಿಸುತ್ತಾರೆ ಎಂಬುವುದು ಕೂಡಾ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಚಿವ ಸಂಪುಟ ಸಭೆಯ ಸಂದರ್ಭದಲ್ಲೂ ಇಬ್ಬರು ನಾಯಕರು ಯಾವುದೇ ಸ್ಪಷ್ಟ ಹೇಳಿಕೆಯನ್ನು ನೀಡಿಲ್ಲ. ಇದೀಗ ಜಾತಿ ಗಣತಿ ವರದಿಯ ಅಂಕಿ- ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಾಗೂ ಚರ್ಚೆಗೂ ಕಾರಣವಾಗುತ್ತಿದೆ.

ಪುನರ್‌ ಪರಿಶೀಲನೆಗೆ ಒತ್ತಾಯ
ಜಾತಿ ಗಣತಿ ವರದಿ ಬಿಡುಗಡೆಗೆ ಪರ-ವಿರೋಧ ವ್ಯಕ್ತವಾಗಿದೆ. ಕಾಂತರಾಜು ವರದಿಯನ್ನು ಒಕ್ಕಲಿಗ ಸಮುದಾಯದ ನಾಯಕರು ವಿರೋಧಿಸಿದ್ದಾರೆ. ಇತ್ತ ಕಾಂಗ್ರೆಸ್‌‍ ಹೈಕಮಾಂಡ್‌ ಜಾತಿ ಗಣತಿ ವರದಿಗೆ ಬೆಂಬಲಿಸಿದ್ದು, ವರದಿ ಬಿಡುಗಡೆಗೆ ಸೂಚಿಸಿದೆ. ಆದರೆ, ಇತ್ತ, ಸ್ವಸಮುದಾಯ ಜಾತಿ ಗಣತಿ ವರದಿಯನ್ನು ತೀವ್ರವಾಗಿ ವಿರೋಧಸುತ್ತಿದೆ. ಇದರಿಂದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಈ ಜಾತಿ ಗಣತಿ ವರದಿಯನ್ನು ನುಂಗುವುದಕ್ಕೆ ಆಗದೇ ಉಗುಳುವುದಕ್ಕೆ ಆಗದ ಪರಿಸ್ಥಿತಿಯಲ್ಲಿ ಸಿಲುಕೊಂಡಿದ್ದು, ಮುಂದೆ ಡಿಕೆಶಿ ಯಾವ ಕಡೆ ಹೆಜ್ಜೆ ಇಡುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

RELATED ARTICLES

Latest News