Sunday, April 20, 2025
Homeರಾಜ್ಯಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯ ಮೂಲ ಪ್ರತಿ ನಾಪತ್ತೆ : ನ್ಯಾಯಾಂಗ ತನಿಖೆಗೆ ಅಶೋಕ್‌ ಆಗ್ರಹ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯ ಮೂಲ ಪ್ರತಿ ನಾಪತ್ತೆ : ನ್ಯಾಯಾಂಗ ತನಿಖೆಗೆ ಅಶೋಕ್‌ ಆಗ್ರಹ

Original copy of social and educational survey report missing

ಬೆಂಗಳೂರು,ಏ.20- ಶಾಶ್ವತ ಹಿಂದುಳಿದ ಆಯೋಗ ನಡೆಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯ ಮೂಲ ಹಸ್ತಪ್ರತಿ ನಾಪತ್ತೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಕೊಡಬೇಕು ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಸರ್ಕಾರವನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021 ರ ಅಕ್ಟೋಬರ್‌ನಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್‌ ಹೆಗ್ಡೆಯವರು ಸರ್ಕಾರಕ್ಕೆ ಪತ್ರ ಬರೆದು ಜಾತಿಗಣತಿ ವರದಿ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಸೀಲ್ಡ್ ಬಾಕ್ಸ್ ತೆರೆದಾಗ ಮುದ್ರಿತ ವರದಿಯಲ್ಲಿ ಆಯೋಗದ ಸದಸ್ಯ ಕಾರ್ಯದರ್ಶಿ ಸಹಿ ಇಲ್ಲ. ಇದರ ಜೊತೆಗೆ ಮೂಲ ಹಸ್ತಪ್ರತಿ ಇರಲಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂದು ಅವರು ಹೇಳಿದರು.

ಸರ್ಕಾರ ಈಗ ಹೇಳಲಿ. ಈ ಜಾತಿಗಣತಿ ವರದಿ ವರ್ಜಿನಲ್ಲಾ?, ಮೂಲ ವರದಿಯ ಹಸ್ತಪ್ರತಿಯೇ ಸೀಲ್‌್ಡಬಾಕ್‌್ಸನಲ್ಲಿ ಇಲ್ಲ ಎಂದ ಮೇಲೆ ವರದಿ ಹೇಗೆ ವರ್ಜಿನಲ್‌ ಆಗುತ್ತದೆ?, ಇದು ರಕ್ತ ಕಣ್ಣೀರು ಸಿನಿಮಾ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಜಾತಿಗಣತಿ ವಿಚಾರವನ್ನು ಹೊರಗೆ ತಂದರು. ಅವರು ಯಾವಾಗ ಬೇಕೋ ಆಗ ವರದಿ ನೀಡುತ್ತಾರೆ. ಇದಕ್ಕೆ ತಮೊಂದಿಗೆ ನಾಟಕ ಕಂಪನಿಯನ್ನು ಇಟ್ಟುಕೊಂಡಿದ್ದಾರೆ. ಇದು ಶಕುನಿ ಸರ್ಕಾರ. ಅಭಿವೃದ್ಧಿ ಬೇಕಾಗಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಆಯೋಗದ ಅಧ್ಯಕ್ಷರೇ ವರದಿಯ ಮೂಲಪ್ರತಿ ಇಲ್ಲ ಎಂದಿದ್ದಾರೆ. ಅವರು ಸಮೀಕ್ಷೆ ಮಾಡಿದ್ದು 6 ಕೋಟಿ ಜನರನ್ನು. ಉಳಿದ ಒಂದು ಕೋಟಿ ಜನರಿಗೆ ನಾಮವೇ? ಎಂದು ಪ್ರಶ್ನಿಸಿದ ಅವರು, ಜಾತಿಗಣತಿಯ ವರ್ಜಿನಲ್‌ ಪ್ರತಿ ಸಿದ್ದರಾಮಯ್ಯನವರ ಮನೆಯಲ್ಲಿದೆ. ಈಗ ಮಂಡಿಸಿರುವ ವರದಿ ನಕಲಿ ಎಂದು ಆರೋಪಿಸಿದರು.

ಸಮೀಕ್ಷೆ ಮಾಡುವವರು ಮಠಕ್ಕೆ ಬಂದಿಲ್ಲ ಎಂದು ಸಿದ್ದಗಂಗಾ ಮಠದ ಶ್ರೀಗಳೇ ಹೇಳಿದ್ದಾರೆ. ಕಾಂಗ್ರೆಸ್‌‍ನ ಕೆಲ ಶಾಸಕರೂ ಸಹ ನಮ ಮನೆಗಳಿಗೆ ಬಂದಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಸಮೀಕ್ಷೆಗಳಿಗೆ ಖರ್ಚು ಮಾಡಿದ್ದ 169 ಕೋಟಿ ರೂ. ದೊಡ್ಡ ಹಗರಣವಾಗಿದೆ. ಮುಂದೆ ನಮ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಹಗರಣದ ತನಿಖೆ ಮಾಡಿಸುತ್ತೇವೆ ಎಂದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಯಾರ್ಯಾರು ಮಾಡಿದ್ದರು, ಯಾವ ಏಜೆನ್ಸಿಗೆ ಕೊಟ್ಟಿದ್ದರು. ಯಾವ ಶಿಕ್ಷಕರು ಹೋಗಿದ್ದರು ಎಂಬ ಮಾಹಿತಿ ನೀಡಲಿ. ಜಾತಿಗಣತಿಗೆ ನಾವು ವಿರೋಧವಿಲ್ಲ. ತುಳಿತಕ್ಕೊಳಗಾದ ಜಾತಿಗಳಿಗೆ ನ್ಯಾಯ ಸಿಗಬೇಕು. ಮನೆಮನೆಗೆ ಹೋಗಿ ಸಮೀಕ್ಷೆ ಮಾಡಿರುವ ದಾಖಲೆಗಳು ಬಹಿರಂಗವಾಗಬೇಕು. ಇದರ ಹಿಂದಿನ ನಿರ್ದೇಶಕರು, ಸ್ಕ್ರೀನ್‌ ಪ್ಲೇ ಎಲ್ಲವೂ ಸಿದ್ದರಾಮಯ್ಯನವರು ಎಂದು ಆಪಾದಿಸಿದರು.

ಸಂವಿಧಾನಬದ್ಧ ಸರ್ಕಾರವಲ್ಲ :
ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನಿವಾರಕ್ಕೆ ಕತ್ತರಿ, ಶಿವದಾರ ಶಿವನ ಪಾದ, ಉಡುದಾರಕ್ಕೆ ಊರುಗೋಲಿಲ್ಲ, ತಾಳಿಗೆ ಭಾಗ್ಯವಿಲ್ಲ, ಹಿಜಾಬ್‌ಗೆ ಬಹುಪರಾಖ್‌ ನಡೆಯುತ್ತಿದೆ ಎಂದು ಅಶೋಕ್‌ ಇದೇ ಸಂದರ್ಭದಲ್ಲಿ ಆರೋಪಿಸಿದರು.ಬಾಬಾ ಸಾಹೇಬ ಬಿ.ಆರ್‌.ಅಂಬೇಡ್ಕರ್‌ ಅವರ ಸಂವಿಧಾನಬದ್ಧ ಸರ್ಕಾರ ಇದಲ್ಲ.

ಧಾರವಾಡದಲ್ಲೂ ನಂದನ್‌ ಎಂಬ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ ಪ್ರಕರಣ ನಡೆದಿದೆ. ಜನಿವಾರ ತೆಗಿ ಎಂದು ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಭಾವನೆಯನ್ನು ಘಾಸಿ ಮಾಡಿದ್ದಾರೆ. ಹಿಜಾಬ್‌ ತೆಗೆದಿದ್ದಕ್ಕೆ ಬಾಯಿ ಬಾಯಿ ಬಡಿದುಕೊಂಡರು ಎಂದು ಟೀಕಿಸಿದರು. ಮಹಿಳೆಯರ ತಾಳಿಗೆ ಕೈ ಹಾಕಿದ ಕಾಂಗ್ರೆಸ್‌‍ ಸರ್ವನಾಶವಾಗುತ್ತದೆ.

ತಾಳಿ, ಓಲೆ ಎಲ್ಲವನ್ನೂ ತೆಗೆಸಿದ್ದಾರೆ. ಕಾಂಗ್ರೆಸ್‌‍ ಸರ್ಕಾರ ಹಿಂದೂಗಳನ್ನು ಅಪಮಾನಿಸಿ ದಮನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗ ಸರ್ಕಾರದ ಮೇಲೆ ಕ್ರಮ ಕೈಗೊಳ್ಳಬೇಕು ಎಂದ ಅವರು, ಈ ಸಂಬಂಧ ಕೇಂದ್ರ ಮಹಿಳಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಯಾವ ಧರ್ಮ ಕಾಪಾಡುತ್ತಾರೆ ಎಂಬುದನ್ನು ಹೇಳಲಿ. ಕುಕ್ಕರ್‌ ಬಾಂಬ್‌ ಹಾಕಿದವರನ್ನು ಬ್ರದರ್‌ ಎಂದು ಕರೆದವರು ಎಂದು ಮೂದಲಿಸಿದರು.ಪಿಎಸ್‌‍ಐ ಪರಶುರಾಮು ಸಾವಿನ ಪ್ರಕರಣದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್‌ ಅವರ ಮೇಲಿನ ಆರೋಪಕ್ಕೆ ಬಿ ರಿಪೋರ್ಟ್‌ ಹಾಕುವ ಮೂಲಕ ಮುಚ್ಚಿ ಹಾಕುವ ಯತ್ನ ನಡೆದಿದೆ ಎಂದು ಅಶೋಕ್‌ ಆರೋಪಿಸಿದರು.ವಾಣಿವಿಲಾಸ ಆಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವಾಗಿದೆ. ಈ ಸರ್ಕಾರಕ್ಕೆ ಮಹಿಳೆಯರ ರಕ್ಷಣೆಯ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.

ಮೂಲಪ್ರತಿ ನನ್ನ ಬಳಿ ಇರಲು ಹೇಗೆ ಸಾಧ್ಯ?: ಸಿಎಂ
ಮುಸಲ್ಮಾನರಿಗೆ, ಹಿಂದುಳಿದವರಿಗೆ ಮಾತ್ರವಲ್ಲದೆ, ಎಲ್ಲಾ ಧರ್ಮದ, ಎಲ್ಲಾ ಜಾತಿಯ ಬಡವರಿಗೆ ಶಿಕ್ಷಣ ಸಿಗಬೇಕು, ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬಬೇಕು. ಇದೇ ನಮ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಮೂಲ ಪ್ರತಿ ಮುಖ್ಯಮಂತ್ರಿಗಳ ಬಳಿಯಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಶೋಕ್‌ ಅವರು ಯಾವತ್ತಾದರೂ ಸತ್ಯವನ್ನು ಹೇಳಿದ್ದಾರೆಯೇ? ಅವರು ಸುಳ್ಳೇ ಹೇಳುವುದು. ಮೂಲ ಪ್ರತಿ ನನ್ನ ಬಳಿಯಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಕಾಂಗ್ರೆಸ್‌‍ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿಯವರಿಗೆ ನಾವು ಪತ್ರ ಬರೆದಿಲ.್ಲ ಆದರೆ ಅವರೊಂದಿಗೆ ಚರ್ಚೆ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯ ವರದಿಯನ್ನು ಮಂಡಿಸಿದ್ದೇವೆ ಎಂದರು.

ಕಾಂಗ್ರೆಸ್‌‍ ಶಾಸಕರೇ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಸಚಿವ ಸಂಪುಟ ಸಭೆಯಲ್ಲಿ ಯಾರೂ ಈ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ. ಯಾರೂ ಜೋರಾಗಿ ಮಾತನಾಡಿಲ್ಲ. ಸಮೀಕ್ಷೆಯನ್ನು ಓದಿಕೊಂಡು ಅಭಿಪ್ರಾಯಗಳನ್ನು ತಿಳಿಸುವಂತೆ ಸೂಚಿಸಲಾಗಿದ್ದು, ಸಚಿವರು ಅಭಿಪ್ರಾಯ ತಿಳಿಸಿದ ನಂತರ ಪುನ: ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು.

ಯಾವ ಜಾತಿಗೂ ಅನ್ಯಾಯವಾಗಬಾರದು ಎನ್ನುವುದು ಸರ್ಕಾರದ ಉದ್ದೇಶ. ಇದು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ. ಸಂವಿಧಾನ ಜಾರಿಯಾಗಿ 75 ವರ್ಷಗಳಾಗಿದ್ದರೂ ಬಡವ ಬಡವನಾಗಿಯೇ ಉಳಿಯಬೇಕೇ? ಸಮಾನತೆ ಬೇಡವೇ? ಜಾತಿಗೆ ಅಂಟಿಕೊಂಡೇ ಇರಬೇಕೇ?ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

RELATED ARTICLES

Latest News