ಶ್ರೀನಗರ,ಏ.20- ಜಮ್ಮು ಮತ್ತು ಕಾಶೀರದ ರಾಂಬನ್ ಜಿಲ್ಲೆಯ ಚೆನಾಬ್ ನದಿಯ ಸಮೀಪವಿರುವ ಧರ್ಮಕುಂಡ್ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ತೀವ್ರ ಮಳೆಯಿಂದ ಉಂಟಾದ ಪ್ರವಾಹವು ಮೂರು ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಓರ್ವ ವ್ಯಕ್ತಿ ಕಾಣೆಯಾಗಿರುವ ಘಟನೆ ಸಂಭವಿಸಿದೆ.
ಭೂಕುಸಿತ ಮತ್ತು ಆಲಿಕಲ್ಲು ಮಳೆಯೊಂದಿಗೆ ನೈಸರ್ಗಿಕ ವಿಕೋಪವು ಆಸ್ತಿ ಮತ್ತು ಮೂಲಸೌಕರ್ಯಗಳಿಗೆ ಭಾರೀ ಹಾನಿಯನ್ನುಂಟುಮಾಡಿದೆ. ಹಲವಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ, ನಿರಂತರ ಮಳೆಯಿಂದಾಗಿ ಸಮೀಪದ ನಾಲಾದಲ್ಲಿ ನೀರಿನ ಮಟ್ಟವು ನಿರಂತರವಾಗಿ ಏರಿಕೆಯಾಗಿತ್ತು. ಇದರಿಂದಾಗೊ ಹಠಾತ್ ಪ್ರವಾಹವಾಗಿ ಚೆನಾಬ್ ಸೇತುವೆಯ ಬಳಿ ಧರ್ಮಕುಂಡ್ ಗ್ರಾಮವನ್ನು ಪ್ರವೇಶಿಸಿತು.
ಹತ್ತು ಮನೆಗಳು ಸಂಪೂರ್ಣ ನಾಶವಾಗಿದ್ದು, 25ರಿಂದ 30 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ವಿನಾಶದ ಹೊರತಾಗಿಯೂ, ಧರಂಕುಂಡ್ ಪೊಲೀಸ್ ಮತ್ತು ಜಿಲ್ಲಾಡಳಿತದ ತ್ವರಿತ ಕಾರ್ಯಾಚರಣೆಯಿಂದಾಗಿ ಈ ಪೀಡಿತ ನೆರೆಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಸುಮಾರು 90 ರಿಂದ 100 ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದ ಹಲವು ಭಾಗಗಳಲ್ಲಿ ನೀರು ಹೆಚ್ಚುತ್ತಲೇ ಇರುವುದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಡಜನ್‌ಗಟ್ಟಲೆ ನಿವಾಸಿಗಳನ್ನು ರಕ್ಷಣಾ ತಂಡಗಳು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ದಿವೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಪರಿಸ್ಥಿತಿಯ ಗಂಭೀರತೆಯನ್ನು ಒಪ್ಪಿಕೊಂಡಿದ್ದು, ಸಮಯೋಚಿತ ಮತ್ತು ದಕ್ಷ ಪ್ರತಿಕ್ರಿಯೆಗಾಗಿ ಜಿಲ್ಲಾಡಳಿತವನ್ನು ಶ್ಲಾಘಿಸಿದ್ದಾರೆ.
ರಾಂಬನ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ರಾಂಬನ್ ಪ್ರದೇಶದಲ್ಲಿ ರಾತ್ರಿಯಿಡೀ ಭಾರೀ ಆಲಿಕಲ್ಲು ಮಳೆ, ಅನೇಕ ಭೂಕುಸಿತಗಳು ಮತ್ತು ವೇಗದ ಗಾಳಿ ಇತ್ತು.
ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ ಮತ್ತು ದುರ ದೃಷ್ಟವಶಾತ್, ಮೂರು ಸಾವುನೋವುಗಳು ಮತ್ತು ಆಸ್ತಿ ನಷ್ಟವಾಗಿದೆ ಎಂದು ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಬಷೀರ್-ಉಲ್-ಹಕ್ ಚೌಧರಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಸಂತ್ರಸ್ತ ಕುಟುಂಬಗಳಿಗೆ ಹಣಕಾಸಿನ ನೆರವು ಸೇರಿದಂತೆ ಎಲ್ಲಾ ಅಗತ್ಯ ನೆರವು ನೀಡಲಾಗುತ್ತಿದೆ, ಅಗತ್ಯವಿದ್ದಲ್ಲಿ, ನನ್ನ ವೈಯಕ್ತಿಕ ಸಂಪನೂಲಗಳಿಂದಲೂ ಹೆಚ್ಚಿನ ನೆರವು ನೀಡಲು ಸಿದ್ಧನಿದ್ದೇನೆ. ಯಾರು ಕೂಡಾ ಅನಗತ್ಯವಾಗಿ ಭಯಪಡಬಾರದು. ನಾವೆಲ್ಲರೂ ಒಟ್ಟಾಗಿ ಈ ನೈಸರ್ಗಿಕ ವಿಕೋಪವನ್ನು ಜಯಿಸೋಣ ಎಂದು ಸಚಿವರು ಆಭಯ ನೀಡಿದ್ದಾರೆ.