ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (68) ಅವರ ಮೃತದೇಹ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ಮನೆಯಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಓಂ ಪ್ರಕಾಶ್ ಪತ್ನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಅವರ ಪತ್ನಿ ಪಲ್ಲವಿ ಅವರೇ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಓಂಪ್ರಕಾಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.
ಬಿಹಾರದ ಚಂಪಾರಣ್ ಮೂಲದವರಾಗಿದ್ದ 68 ವರ್ಷದ ಓಂ ಪ್ರಕಾಶ್ ಅವರು 1981ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ವಾಸವಾಗಿದ್ದರು. ರಾಜ್ಯದ 38ನೇ ಡಿಜಿ ಮತ್ತು ಐಜಿಪಿಯಾಗಿದ್ದ ಓಂ ಪ್ರಕಾಶ್ ಅವರು ಕರ್ನಾಟಕ ಗೃಹರಕ್ಷಕದಳ, ಅಗ್ನಿಶಾಮಕದಳಗಳಲ್ಲಿ ಮಹಾನಿರ್ದೇಶಕರಾಗಿದ್ದ ಅವರು, 2015ರಿಂದ 2017ರವರೆಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಮಹಿಳೆ ಮತ್ತು ಆಸ್ತಿ ವಿಚಾರಕ್ಕೆ ಹತ್ಯೆ..?
ಈ ವೇಳೆ ಓರ್ವ ಮಹಿಳೆ ವಿಚಾರವಾಗಿ ಕಲಹ ಓಂ ಪ್ರಕಾಶ್ ಮತ್ತು ಪತ್ನಿ ನಡುವೆ ಭಿನ್ನಾಭಿಪ್ರಾಯ ಇತ್ತು, ಈ ವಿಚಾರ ಗೊತ್ತಾದ ನಂತರ ಪತಿ-ಪತ್ನಿ ಅಷ್ಟಕ್ಕೆ ಅಷ್ಟೇ ಎನ್ನುವಂತೆ ಇದ್ರು ಎನ್ನಲಾಗಿದೆ.
ಮಾಗಡಿ, ಬಿಡದಿ ಸೇರಿದಂತ ನಗರದ ಹೊರ ಭಾಗದಲ್ಲಿ ನೂರಾರು ಎಕರೆ ಆಸ್ತಿ ಮಾಡಿದ್ದರು, ಅವರ ಪುತ್ರ ಮಾಗಡಿ ಬಳಿ ಕ್ರಷರ್ ನಡೆಸುತ್ತಿರು, ಇಲಾಖೆಯಲ್ಲೆ ಇದ್ದ ನರಸಿಂಹಮೂರ್ತಿ ಎಂಬ ಸಿಬ್ಬಂದಿಯ ಜೊತೆ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.
ಬೆಂಗಳೂರಿನಲ್ಲಿ ಓಂ ಪ್ರಕಾಶ್ ಅವರಿಗೆ ಸೇರಿದ ಎರಡು ಮನೆ ಇದ್ದು, ಕಾವೇರಿ ಜಂಕ್ಷನ್ ನ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ಫ್ಲಾಟ್ ಇದೆ, ಹೆಚ್.ಎಸ್.ಆರ್ ಲೇಔಟ್ ನ ಐಪಿಎಸ್ ಕ್ವಾಟ್ರಸ್ ನಲ್ಲಿ ಅವರು ವಾಸವಾಗಿದ್ದರು. ಇದೆ ಮನೆಯಲ್ಲಿ ಅವರು ಕೊಲೆಯಾಗಿದ್ದಾರೆ.
ತಂಗಿ ಹಾಗೂ ಮಗನ ಹೆಸರಲ್ಲೂ ಆಸ್ತಿ ಮಾಡಿರುವ ಓಂ ಪ್ರಕಾಶ್ ಕುಟುಂಬದಲ್ಲಿ ಆಸ್ತಿ ಕಲಹ ನಡೆಯುತ್ತಿತ್ತು , ಆಸ್ತಿಯನ್ನು ತಂಗಿಯವರ ಹೆಸರಿಗೆ ಪ್ರಾಪರ್ಟಿ ಮಾಡಿದ್ದಕ್ಕೆ ಆಗಾಗ ಪತ್ನಿ ಜಗಳವಾಡುತ್ತಿದ್ದರು. ತಂಗಿಯರ ಹೆಸರಿಗೆ ಯಾಕೆ ಆಸ್ತಿ ಮಾಡಿದ್ದೀರಾ ಅನ್ನೊ ವಿಚಾರಕ್ಕೆ ಹಲವು ದಿನಗಳಿಂದ ಪತಿ-ಪತ್ನಿ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ತಂಗಿಯರ ವಿಚಾರ ಮಾತಾಡಬೇಡ ಎಂದು ಓಂಪ್ರಕಾಶ್ ಈ ಹಿಂದೆ ಪತ್ನಿಗೆ ವಾರ್ನ್ ಕೂಡ ಮಾಡಿದ್ದರು ಎನ್ನಲಾಗುತ್ತಿದೆ.
ಮಗನಿಂದ ದೂರು ಪಡೆದ ಪೊಲೀಸರು :
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಶ್, ”ಸಂಜೆ 4:30ರ ಸುಮಾರಿಗೆ ಬಂದ ಮಾಹಿತಿ ಆಧರಿಸಿ ಹೊಯ್ಸಳ ಸಿಬ್ಬಂದಿ ಬಂದು ಗಮನಿಸಿದಾಗ ಹತ್ಯೆಯ ವಿಚಾರ ತಿಳಿದುಬಂದಿದೆ. ಆಯುಧ ಬಳಸಿ ದೈಹಿಕ ಹಲ್ಲೆಗೈದಿರುವುದು ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮತ್ತಷ್ಟು ವಿಚಾರಗಳು ತಿಳಿಯಲಿವೆ” ಎಂದು ಮಾಹಿತಿ ನೀಡಿದ್ದಾರೆ.
”ಮನೆಯಲ್ಲಿ ಓಂ ಪ್ರಕಾಶ್ ಅವರು ಸೇರಿದಂತೆ ಮೂವರು ಇದ್ದರು. ಅದರಲ್ಲಿಯೇ ಒಬ್ಬರು ಹತ್ಯೆಯ ಕುರಿತು ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ಒಂದು ಆಯುಧವನ್ನು ಜಪ್ತಿ ಮಾಡಲಾಗಿದೆ. ಕಟ್ಟಡವನ್ನು ಪೊಲೀಸ್ ಸುಪರ್ದಿಗೆ ಪಡೆದಿದ್ದೇವೆ. ಸದ್ಯ ಓಂ ಪ್ರಕಾಶ್ ಮಗನಿಂದ ದೂರು ಪಡೆದು ಎಫ್ಐಆರ್ ದಾಖಲಿಸಿಕೊಳ್ಳಲಾಗುತ್ತಿದೆ. ಮುಂದಿನ ತನಿಖೆ ಕೈಗೊಂಡಿದ್ದೇವೆ” ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.