ಚಂಡಿಘಡ, ಏ.21- ನನ್ನ ಬದಲಿಗೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ದೇವದತ್ ಪಡಿಕ್ಕಲ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು ಎಂದು ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕಿಂಗ್ ಕೊಹ್ಲಿ 54 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್‌ಗಳೊಂದಿಗೆ ಅಜೇಯ 74 ರನ್ ಬಾರಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಒಲಿದಿತ್ತು.
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಇದು ನಮಗೆ ಬಹಳ ಮುಖ್ಯವಾದ ಪಂದ್ಯವಾಗಿತ್ತು. ಏಕೆಂದರೆ ಪ್ಲೇಆಫ್ ಅರ್ಹತೆಯ ವಿಷಯದಲ್ಲಿ 2 ಅಂಕಗಳು ಭಾರಿ ವ್ಯತ್ಯಾಸವನ್ನುಂಟುಮಾಡಬಹುದು. ನಾವು ತವರಿನಲ್ಲಿ ನೋತರೂ, ಹೊರಗಡೆ ಉತ್ತಮ ಕ್ರಿಕೆಟ್ ಆಡಿದ್ದೇವೆ.
ನೀವು ಪಾಯಿಂಟ್ಸ್ ಟೇಬಲ್‌ನಲ್ಲಿ ಎಂಟರಿಂದ ಹತ್ತು ಅಂಕಗಳಿಗೆ ಹೋದಾಗ, ಅದು ಪಾಯಿಂಟ್‌ಗಳ ಪಟ್ಟಿಯಲ್ಲಿ ಭಾರಿ ವ್ಯತ್ಯಾಸವನ್ನುಂಟು ಮಾಡುತ್ತದೆ. ಪ್ರತಿ ಪಂದ್ಯದಲ್ಲೂ 2 ಅಂಕಗಳನ್ನು ಪಡೆಯುವುದು ನಮ್ಮ ಮನಸ್ಥಿತಿಯಾಗಿರಬೇಕು.
ನಾನು ನನ್ನ ಬ್ಯಾಟಿಂಗ್‌ನಲ್ಲಿ ಇನ್ನಷ್ಟು ವೇಗವನ್ನು ಹೆಚ್ಚಿಸಲು ಬಯಸಿದ್ದೆ. ಆದರೆ ಈ ಹಂತದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್‌ನೊಂದಿಗೆ ರನ್ ಗತಿಯಲ್ಲಿ ತುಂಬಾ ವ್ಯತ್ಯಾಸವನ್ನು ಉಂಟು ಮಾಡಿದರು. ಹೀಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯು ದೇವದತ್ ಪಡಿಕ್ಕಲ್ ಗೆ ಕೊಡಬೇಕಿತ್ತು ಎಂಬುದು ನನ್ನ ಭಾವನೆ ಎಂದಿದ್ದಾರೆ.
ಇನ್ನು ದೇವದತ್ ಪಡಿಕ್ಕಲ್ ಜೊತೆಗಿನ ಶತಕದ ಜೊತೆಯಾಟದ ಬಗ್ಗೆ ಮಾತನಾಡಿದ ಕೊಹ್ಲಿ, ಟಿ 20 ಕ್ರಿಕೆಟ್ ನಲ್ಲಿ ರನ್ ಚೇಸ್ ಸಮಯದಲ್ಲಿ ಒಂದು ಉತ್ತಮ ಪಾಲುದಾರಿಕೆ ಸಾಕು. ಅಂತಹದೊಂದು ಜೊತೆಯಾಟವನ್ನು ದೇವದತ್ ಪಡಿಕ್ಕಲ್ ಆಡಿದ್ದಾರೆ. ಈಗ ನಮಗೆ ಉತ್ತಮ ತಂಡ ಸಿಕ್ಕಿದೆ. ಹರಾಜಿನ ಬಳಿಕ ಉತ್ತಮ ತಂಡದ ಸಂಯೋಜನೆಯಾಗಿದೆ.
ಟಿಮ್ ಡೇವಿಡ್, ಜಿತೇಶ್ ಶರ್ಮಾ, ರಜತ್ ಪಾಟಿದಾರ್ ಅವರಂತಹ ಆಟಗಾರರು, ಅವರು ನಿರ್ವಹಿಸುತ್ತಿರುವ ಪಾತ್ರಗಳು ಚೆನ್ನಾಗಿ ಮೂಡಿಬರುತ್ತಿದೆ. ಇದರ ಜೊತೆಗೆ ನಮ್ಮ ತಂಡವು ಗೆಲುವಿಗಾಗಿ ಹಸಿದಿರುವುದಂತು ನಿಜ. ಇದೇ ಕಾರಣದಿಂದಾಗಿ ಪ್ರತಿ ಆಟಗಾರರಲ್ಲಿ ತೀವ್ರತೆಯನ್ನು ನೀವು ನೋಡಬಹುದು. ಇವೆಲ್ಲವನ್ನೂ ನೋಡಲು ನಿಜವಾಗಿಯೂ ಸಂತೋಷವಾಗುತ್ತದೆ. ಇಂತಹ ಮನಸ್ಥಿತಿ ಇದ್ದಾಗಲೇ ಗೆಲ್ಲುವ ಸಾಧ್ಯತೆಗಳಿರುತ್ತವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.