ಬೆಂಗಳೂರು, ಏ.21- ಕರ್ನಾಟಕವೇ ಬೆಚ್ಚಿ ಬೀಳಿಸಿರುವ ನಿವೃತ್ತ ಪೊಲೀಸ್ ಮಹಾನಿದೇರ್ಶಕ ಓಂ ಪ್ರಕಾಶ್ ಅವರ ಬರ್ಬರ ಹತ್ಯೆಗೆ ಆಸ್ತಿ ವಿಚಾರವೇ ಕಾರಣ ಎಂಬ ಪೊಲೀಸರು ಶಂಕಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. ಓಂ ಪ್ರಕಾಶ್ ಸಾವಿನ ಬಗ್ಗೆ ಪುತ್ರ ಕಾರ್ತೀಕೇಶ್ ಹೆಚ್‌ಎಸ್ ಆರ್ ಪೊಲೀಸ ಠಾಣೆಗೆ ದೂರು ನೀಡಿದ್ದು, ದೂರಿನಲ್ಲಿ ತಾಯಿ ಮತ್ತು ಸಹೋದರಿಯ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಡಿಜಿಪಿ ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಕೊಲೆ ಪ್ರಕರಣದಲ್ಲಿ ತಮ್ಮ ಪುತ್ರಿ ಕೃತಿಯ ಪಾತ್ರವಿಲ್ಲ ಎಂದು ಪಲ್ಲವಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಡಿಜಿಪಿ ಅವರಿಗೆ ಮಹಿಳೆಯೊಬ್ಬಳ ಜೊತೆ ಸಲುಗೆಯಿತ್ತು ಇದರ ಜೊತೆಗೆ ಆಸ್ತಿ ಹಾಗೂ ಕೌಟುಂಬಿಕ ಕಲಹವೇ ಈ ಭೀಕರ ಹತ್ಯೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿ ಅಕ್ರಮ ಸಂಬಂಧ, ಆಸ್ತಿ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆಯಾಗಿರಬಹದೇ ಎಂಬ ಬಗ್ಗೆ ಹಲವು ಅಯಾಮಗಳಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ.
ಏನಿದು ಆಸ್ತಿ ಜಗಳ? ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಓಂ ಪ್ರಕಾಶ್ ಅವರು ಜಮೀನು ಖರೀದಿ ಮಾಡಿದ್ದರು. ಈ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಸಹೋದರಿಯರ ಹೆಸರಿನಲ್ಲಿ ನೋಂದಾಯಿಸಿದ್ದರು ಎಂದು ಹೇಳಲಾಗಿದೆ. ಆದರೆ ಇದಕ್ಕೆ ಓಂ ಪ್ರಕಾಶ್ ಪತ್ನಿ ಪಲ್ಲವಿ ಆಕ್ಷೇಪ ಎತ್ತಿದ್ದರು. ಈ ಜಗಳವೂ ವಿಕೋಪಕ್ಕೆ ಹೋಗಿತ್ತು. ಇದು ಹತ್ಯೆಗೆ ಕಾರಣವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಓಂ ಪ್ರಕಾಶ್ ಹಾಗೂ ಪತ್ನಿಯ ನಡುವೆ ವಿವಿಧ ಕಾರಣಗಳಿಂದಾಗಿ ಪದೇ ಪದೇ ಕಲಹ ನಡೆಯುತ್ತಿತ್ತು. ಓಂ ಪ್ರಕಾಶ್ ಅವರು ಪಿಸ್ತೂಲ್ ತಂದು ನನ್ನನ್ನು ಹಾಗೂ ಮಗಳನ್ನು ಶೂಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರ ಪತ್ನಿ ಈ ಹಿಂದೆ ಆರೋಪ ಮಾಡಿದ್ದರು. ಇದರ ಮುಂದುವರಿದ ಭಾಗವಾಗಿಯೇ ಭಾನುವಾರವೂ ಜಗಳ ಆಗಿದೆ.
ಈ ಸಂದರ್ಭದಲ್ಲಿ ಓಂ ಪ್ರಕಾಶ್ ಕಣ್ಣಿಗೆ ಖಾರದ ಪುಡಿಯನ್ನು ಎರಚಲಾಗಿದೆ. ಬಳಿಕ ಅಡುಗೆ ಎಣ್ಣೆಯನ್ನು ಸುರಿಯಲಾಗಿದೆ. ನಂತರದಲ್ಲಿ ಕೈ ಕಾಲು ಕಟ್ಟಿ ಹಾಕಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇರಿಯಲಾಗಿದೆ. ತೀವ್ರ ರಕ್ತಸ್ರಾವದಿಂದ ಓಂ ಪ್ರಕಾಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನಿವೃತ್ತ ಡಿಜಿ ಓಂಪ್ರಕಾಶ್ ಅವರು ಬಿಹಾರ ಮೂಲದವರಾಗಿದ್ದು, ಅವರ ತಂದೆ 98 ವರ್ಷದ ಹಿರಿಯ ಜೀವ ಬದುಕಿರುವುದರಿಂದ ಮೃತದೇಹವನ್ನು ಬಿಹಾರಕ್ಕೆ ಕೊಂಡೊಯ್ಯಬೇಕಾ ಅಥವಾ ಹೆಬ್ಬಾಳದಲ್ಲೇ ಅಂತ್ಯ ಸಂಸ್ಕಾರ ಮಾಡಬೇಕಾ ಅಂತ ಕುಟುಂಬಸ್ಥರು ನಿರ್ಧಾರ ಮಾಡಲಿದ್ದಾರೆ.
ಯಲಹಂಕ ಭಾಗದಲ್ಲಿ ಓಂಪ್ರಕಾಶ್ ಸಂಬಂಧಿಕರು ಹೆಚ್ಚಿರುವ ಕಾರಣ ಹೆಬ್ಬಾಳ ಚಿತಗಾರದಲ್ಲೇ ಅಂತ್ಯ ಸಂಸ್ಕಾರಕ್ಕೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆಸ್ತಿ ಹಾಗೂ ಕೌಟುಂಬಿಕ ಕಲಹವೇ ಈ ಭೀಕರ ಹತ್ಯೆಯ ಹಿಂದೆ ಇದೆ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಷ್ಟಕ್ಕೂ ಓಂ ಪ್ರಕಾಶ್ ಅವರು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಖರೀದಿಸಿದ್ದ ಕೋಟ್ಯಂತರ ಬೆಲೆ ಬಾಳುವ ಭೂಮಿಯೂ ಈ ಹತ್ಯೆಗೆ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಓಂ ಪ್ರಕಾಶ್ ಅವರು ಜಮೀನು ಒಂದನ್ನು ಖರೀದಿ ಮಾಡಿದ್ದರು. ಈ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಸಹೋದರಿಯರ ಹೆಸರಿನಲ್ಲಿ ನೋಂದಾಯಿಸಿದ್ದರು ಎಂದು ಹೇಳಲಾಗಿದೆ. ಆದರೆ ಇದಕ್ಕೆ ಓಂ ಪ್ರಕಾಶ್ ಪತ್ನಿ ಪಲ್ಲವಿ ಆಕ್ಷೇಪ ಎತ್ತಿದ್ದರು. ಈ ಜಗಳವೂ ವಿಕೋಪಕ್ಕೆ ಹೋಗಿತ್ತು. ಇದು ಹತ್ಯೆಗೆ ಕಾರಣವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೃತ್ಯ ನಡೆದಾಗ ಕಾರ್ತೀಕೇಶ್ ಮನೆಯಲ್ಲಿರಲಿಲ್ಲ. ಕೃತ್ಯದ ನಂತರ, ಮನೆಗೆ ವಾಪಸ್ ಬಂದಾಗ, ತಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.