ಬೆಂಗಳೂರು,ಏ.21- ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿರುವ ಆದೇಶವನ್ನು ವಾಪಸ್ ಪಡೆಯುವಂತೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಲ್ಲಿ ಮನವಿ ಮಾಡಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.
ವಿಧಾನಸಭಾಧ್ಯಕ್ಷರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಾನತು ಆದೇಶವನ್ನು ಪರಿಶೀಲನೆ ಮಾಡುವುದಾಗಿ ಸಭಾಧ್ಯಕ್ಷರು ತಿಳಿಸಿದ್ದಾರೆ. ಧಾನಸಭೆಯ ಒಳಗೆ ನಡೆದಿರುವ ಘಟನೆಯಾಗಿದ್ದು, ಸರ್ಕಾರದ ಜೊತೆ ಈ ಸಂಬಂಧ ಚರ್ಚೆ ಮಾಡುವುದಾಗಿ ಹೇಳಿದ್ದಾರೆ ಎಂದರು.
ಸಭಾಧ್ಯಕ್ಷರ ಪೀಠದ ಬಗ್ಗೆ ಅಗೌರವವಿಲ್ಲ, ಗೌರವವಿದೆ. ಆದರೂ ಆರು ತಿಂಗಳು ಅಮಾನತು ಮಾಡಿರುವುದು ಸರಿಯಲ್ಲ. ಈ ಹಿಂದೆ ಅನೇಕ ಘಟನೆಗಳು ನಡೆದಿವೆ. ಅಮಾನತು ಮಾಡಿರುವುದರಿಂದ ವಿವಿಧ ಸಮಿತಿ ಸಭೆಗಳಿಗೆ ಶಾಸಕರು ಹೋಗಲಾಗುತ್ತಿಲ್ಲ ಎಂದು ಹೇಳಿದರು. ಸದನದಲ್ಲಿ ಸಚಿವ ಕೆ.ಎನ್.ರಾಜಣ್ಣ ಅವರು ಹನಿಟ್ರಾಪ್ ವಿಚಾರ ಪ್ರಸ್ತಾಪಿಸಿದಾಗ, ಪಕ್ಷದ ವತಿಯಿಂದ ಆ ಬಗ್ಗೆ ಮಾತನಾಡಿದ್ದೇವೆ ಎಂದು ತಿಳಿಸಿದರು.
ಖಂಡನೆ: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಹತ್ಯೆ ಖಂಡನೀಯ. ರಾಜ್ಯದಲ್ಲಿ ಹಲವು ರೀತಿಯ ಕೊಲೆಗಳಾಗುತ್ತಿದ್ದವು. ಈಗ ಪೊಲೀಸ್ ಅಧಿಕಾರಿಗೆ ಸಾವಿನ ಭಾಗ್ಯ ಬಂದಿದೆ. ಇದರಿಂದ ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಸರಿಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು. ಪೊಲೀಸರು ಇದ್ದಾರೆ. ಕ್ರಮ ಕೈಗೊಳ್ಳುತ್ತಾರೆ ಎಂಬ ಭಯ. ಹೀಗಾಗಿ ಇಂಥ ಘಟನೆಗಳು ನಡೆಯುತ್ತವೆ. ಪೊಲೀಸ್ ಇಲಾಖೆಯನ್ನು ಯಾರು ನಡೆಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು.