Monday, April 21, 2025
Homeರಾಜ್ಯಈ ಬಾರಿ ವಾಡಿಕೆಗಿಂತ ಹೆಚ್ಚು ಬೇಸಿಗೆ ಮಳೆ

ಈ ಬಾರಿ ವಾಡಿಕೆಗಿಂತ ಹೆಚ್ಚು ಬೇಸಿಗೆ ಮಳೆ

This time, more summer rain than usual

ಬೆಂಗಳೂರು,ಏ.21- ಪೂರ್ವ ಮುಂಗಾರು ಮಳೆ ಚೇತರಿಕೆ ಕಂಡಿದ್ದು, ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ.

ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ. ಕೆಲವೆಡೆ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಒಳನಾಡಿನಲ್ಲಿ ಟ್ರಫ್‌ ನಿರ್ಮಾಣವಾಗಿರುವ ಪರಿಣಾಮ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಮಳೆಯಾಗುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ನಿನ್ನೆ ಕೂಡ ಚಿತ್ರದುರ್ಗ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ. ವಿಜಯಪುರ, ದಾವಣಗೆರೆ, ತುಮಕೂರು, ಶಿವಮೊಗ್ಗ, ಕೊಪ್ಪಳ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಹಾವೇರಿ, ಚಿಕ್ಕಬಳ್ಳಾಪುರ, ರಾಯಚೂರು, ಮೈಸೂರು, ದ.ಕನ್ನಡ, ಗದಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾದರೆ, ರಾಮನಗರ, ಬೀದರ್‌, ಕೋಲಾರ, ಚಾಮರಾಜನಗರ, ಕಲಬುರಗಿ, ಮಂಡ್ಯ, ಉ.ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಕೆಲವೆಡೆ ಮಾತ್ರ ಮಳೆಯಾಗಿದೆ.

ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ 84.5 ಮಿ.ಮೀ.ನಷ್ಟು ಅತೀ ಹೆಚ್ಚು ಮಳೆಯಾಗಿದೆ ಎಂದು ತಿಳಿದುಬಂದಿದೆ.ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನಲ್ಲಿ ಒಣ ಹವೆಯಿದ್ದು, ಕೆಲವೆಡೆ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಗರಿಷ್ಠ ತಾಪಮಾನ 41 ಡಿ.ಸೆಂ.ನಿಂದ 43 ಸೆಂ.ವರೆಗೆ ದಾಖಲಾಗುತ್ತಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸರಾಸರಿ 34 ರಿಂದ 36 ಡಿ.ಸೆ.ವರೆಗೆ ಗರಿಷ್ಠ ತಾಪಮಾನ ಕಂಡುಬರಲಿದೆ.

ಮಾರ್ಚ್‌ 1 ರಿಂದ ನಿನ್ನೆಯವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.70ರಷ್ಟು ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ 27.9 ಮಿ.ಮೀ ವಾಡಿಕೆ ಮಳೆಯಾಗಿದ್ದು, 47.4 ಮಿ.ಮೀ.ನಷ್ಟು ಮಳೆಯಾಗಿದೆ.
ಏಪ್ರಿಲ್‌ 1 ರಿಂದ ನಿನ್ನೆವರೆಗೆ ವಾಡಿಕೆ ಮಳೆಯ ಪ್ರಮಾಣ 18.8 ಮಿ.ಮೀ.ನಷ್ಟಿದ್ದು, 35.4ರಷ್ಟು ಮಳೆಯಾಗಿದ್ದು, ಶೇ.88 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಆದರೆ ಕಳೆದ ಒಂದು ವಾರದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದ್ದು, ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.ರಾಜ್ಯದಾದ್ಯಂತ ಅಲ್ಲಲ್ಲಿ ಬೇಸಿಗೆ ಮಳೆ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ಭೂಮಿ ಸಿದ್ಧತೆ, ಪೂರ್ವ ಮುಂಗಾರಿನ ಬೆಳೆಗಳ ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿಕೊಂಡಿದ್ದಾರೆ.

RELATED ARTICLES

Latest News