ಬೆಂಗಳೂರು,ಏ.21– ಜಾತಿಗಣತಿಗೆ ಸಂಬಂಧಪಟ್ಟಂತೆ ಎಲ್ಲಾ ಪಕ್ಷಗಳಲ್ಲೂ ಪರ-ವಿರೋಧ ಅಭಿಪ್ರಾಯಗಳಿವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲೂ ಪರ-ವಿರೋಧ ಅಭಿಪ್ರಾಯಗಳಿವೆ. ಕೆಲವು ಶಾಸಕರು ವರದಿಯನ್ನು ಬೆಂಬಲಿಸುತ್ತೇವೆ ಎಂದರೆ ಇನ್ನೂ ಕೆಲವರು ವಿರೋಧ ಮಾಡುತ್ತಿದ್ದಾರೆ. ಅದೇ ರೀತಿ ಕಾಂಗ್ರೆಸ್‌ನಲ್ಲೂ ಪರ-ವಿರೋಧ ಅಭಿಪ್ರಾಯಗಳಿವೆ.
ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಿಸಬೇಕು ಎಂದು ಹತ್ತಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ಸಮಿತಿಗಳೂ ಮಾದರಿ ಸಂಗ್ರಹದ ಸಮೀಕ್ಷೆಗಳನ್ನು ಮಾಡಿ ಸರ್ಕಾರಕ್ಕೆ ವರದಿ ನೀಡಿದೆ. ಇದೇ ಮೊದಲ ಬಾರಿಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ವರದಿ ನೀಡಲಾಗಿದೆ. ಈ ವರದಿಗೆ ಹೆಚ್ಚು ಮಹತ್ವ ನೀಡಬೇಕಾಗುತ್ತದೆ ಎಂದರು.
ಕಾಂತರಾಜು ಆಯೋಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಮಾಹಿತಿಯನ್ನು ಕಲೆ ಹಾಕಿದೆ. ಸ್ವಾಭಾವಿಕವಾಗಿ ಆ ಸಂದರ್ಭದಲ್ಲಿ ಜಾತಿಯ ಮಾಹಿತಿಯನ್ನೂ ಸಂಗ್ರಹಿಸಲಾಗಿದೆ. ಕೆಲವರು ವರದಿ ಸರಿಯಿದೆ ಎಂದರೆ, ಇನ್ನೂ ಕೆಲವರು ಸರಿಯಿಲ್ಲ ಎನ್ನುತ್ತಾರೆ. ಇನ್ನೂ ಕೆಲವರು ದತ್ತಾಂಶ ಬಿಟ್ಟು ಹೋಗಿದೆ ಎಂದು ಹೇಳುತ್ತಿದ್ದಾರೆ. ಎಲ್ಲವನ್ನೂ ಕ್ರೂಢೀಕರಿಸಿ ಒಮತದ ಅಭಿಪ್ರಾಯ ತೆಗೆದುಕೊಳ್ಳಲು ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಈಗಾಗಲೇ ಎರಡು ಬಾರಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು.
ಸಂಪುಟದಲ್ಲಿ ಬಹಳಷ್ಟು ಸಚಿವರು ಆಯಾ ಸಮುದಾಯಗಳ ಬಗ್ಗೆ ಮಾತನಾಡಿದ್ದಾರೆ. ವಿರೋಧಪಕ್ಷದ ನಾಯಕ ಆರ್.ಅಶೋಕ್ ಸಮೀಕ್ಷೆಯ ಮೂಲ ಪ್ರತಿಯೇ ಲಭ್ಯವಿಲ್ಲ ಎಂದು ಹೇಳಿರುವುದನ್ನು ಪರಿಗಣಿಸಲಾಗುವುದು. ಸಮೀಕ್ಷೆಯ ಮೂಲಪ್ರತಿಯಿಲ್ಲ ಎಂದರೆ ಹೇಗೆ ಸಾಧ್ಯ. ಆಯೋಗದಲ್ಲಿ ಮೂಲಪ್ರತಿಗಳು ಇರಲೇಬೇಕು. ವಿರೋಧಪಕ್ಷಗಳು ಸಕಾರಾತಕ ಟೀಕೆ ಮಾಡಬೇಕು. ಎಲ್ಲದಕ್ಕೂ ನಕಾರಾತಕ ಟೀಕೆಗಳು ಸರಿಯಲ್ಲ . ಸಮೀಕ್ಷೆಯ ನೆಪದಲ್ಲಿ 169 ಕೋಟಿ ರೂ. ಹಗರಣವಾಗಿದೆ. ನ್ಯಾಯಾಂಗ ತನಿಖೆ ನಡೆಸಬೇಕು ಎಂಬೆಲ್ಲಾ ಆರೋಪದ ವಿಚಾರಗಳನ್ನು ಸಂಪುಟದಲ್ಲಿ ಚರ್ಚಿಸಲಾಗುವುದು ಎಂದರು.