ಬೆಂಗಳೂರು, ಏ.21- ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ನೀಡುವ ಊಟದ ವ್ಯವಸ್ಥೆ ಇದೀಗ ಸದ್ದು ಮಾಡತೊಡಗಿದೆ. ಪ್ರತೀ ಕೈದಿಗೆ ದಿನದ ಊಟಕ್ಕೆ ಕೇವಲ 85ರೂ ಖರ್ಚು ಮಾಡ್ತಿರೋ ಸರ್ಕಾರದ ಧೋರಣೆ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ.
ವೇತನದ ಹೆಚ್ಚಳದ ಹೆಸರಲ್ಲಿ ಲಕ್ಷಾಂತರ ರೂ. ಗೌರವ ಧನ ಪಡೆಯುವ ಶಾಸಕರು…ಕೈದಿಗಳಿಗೆ ಮೂರು ಹೊತ್ತು ಊಟಕ್ಕೆ ಬರೀ 85 ರೂ. ಮಾತ್ರ ನಿಗದಿ ಮಾಡಿರುವುದು ಆರ್‌ಟಿಐ ಮಾಹಿತಿಯಲ್ಲಿ ಹೊರಬಿದ್ದಿದೆ.
ಕರ್ನಾಟಕದ ಕೈದಿಗಳ ಊಟದ ವಿವರ ಕುರಿತಂತೆ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಅವರು ಕೇಳಿರುವ ಮಾಹಿತಿಗೆ ಕೇಂದ್ರ ಕಾರಾಗೃಹ ಇಲಾಖೆ ಈ ಮಾಹಿತಿ ನೀಡಿದೆ.
ದುಡ್ಡಿದ್ದವರಿಗೆ ಜೈಲಲ್ಲಿ ಐಶಾರಾಮಿ ಜೀವನ. ದುಡ್ಡಿಲ್ಲದವರಿಗೆ ಬರೀ ಅನ್ನ, ಗಂಜಿ…ವಾರದಲ್ಲಿ ಒಂದು ದಿನ ಮಾತ್ರ ನಾನ್ ವೆಜ್ ಊಟ.ಬೆಳಗ್ಗೆ 7:15 ರಿಂದ 8:30ರ ವರೆಗೆ ಉಪಹಾರ. 11 ಗಂಟೆಯಿಂದ 11.30ರ ವರೆಗೆ ಮಧ್ಯಾಹ್ನ ಊಟ ಹಾಗೂ ಸಂಜೆ 5:15 ರಿಂದ 5:45 ಗಂಟೆಯವರೆಗೆ ರಾತ್ರಿ ಊಟಕ್ಕೆ ಸಮಯ ನಿಗದಿ ಮಾಡಲಾಗಿದೆ.
ಸಂಜೆ 5:45ರ ಬಳಿಕ ಯಾವುದೇ ಊಟೋಪಚಾರ ಇರುವುದಿಲ್ಲ ಮರು ದಿನ ಬೆಳಗ್ಗೆ ಮತ್ತೆ ಉಪಹಾರ ನೀಡಲಾಗುತ್ತದೆ. ಸುದೀರ್ಘ 14 ಗಂಟೆಗಳ ಕಾಲ ಊಟವಿಲ್ಲದ ಬಗ್ಗೆ ಇದೀಗ ಆಕ್ಷೇಪ ವ್ಯಕ್ತವಾಗಿದೆ.
ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿರುವ ನರಸಿಂಹ ಮೂರ್ತಿ ಅವರು ಕೈದಿಗಳು ಎಲ್ಲರಂತೆ ಮನುಷ್ಯರೇ ಆಗಿರುವುದರಿಂದ ಅವರಿಗೂ ಉತ್ತಮ ಆಹಾರ ನೀಡುವಂತೆ ಕಾರಾಗೃಹ ಇಲಾಖೆಗೆ ಸೂಚಿಸುವಂತೆ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.