ಜೈಪುರ, ಏ.21-ರಾಜಸ್ಥಾನದ ಚಿತ್ತೋರ್‌ಗಢ ಬಳಿಯ ನೀಮಚ್-ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಧ್ಯಪ್ರದೇಶದ ನಾಲ್ವರು ಯಾತ್ರಿಕರು ಸಾವನ್ನಪ್ಪಿದ್ದಾರೆ.ನಿಂಬಾಹೆರಾದ ಜಾಲಿಯಾ ಚೆಕ್‌ಪೋಸ್ಟ್ ಬಳಿ ತಡರಾತ್ರಿ ಅಪಘಾತ ನಡೆದಿದೆ. ಭಕ್ತರಿದ್ದ ಕಾರು ರಸ್ತೆಯಲ್ಲಿನ ವಿಭಾಜಕಕ್ಕೆ ಡಿಕ್ಕಿ ಹೊಡೆದು ನಂತರ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತಿವೇಗದ ವಾಹನ ನಿಯಂತ್ರಣ ತಪ್ಪಿ ವಿಭಾಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ನಿಂಬಾಹೆರಾ) ಬದ್ರಿಲಾಲ್ ರಾವ್ ಹೇಳಿದರು.ಕಾರಿನಲ್ಲಿದ್ದ ಪ್ರಯಾಣಿಕರು ಉಜ್ಜಯಿನಿ ಜಿಲ್ಲೆಯ ಬದ್‌ನಗರದ ಇಂಗೋರಿಯಾ ಗ್ರಾಮದ ನಿವಾಸಿಗಳಾಗಿದ್ದು, ಚಿತ್ತೋರ್‌ಗಢದ ಸನ್ವಾಲಿಯಾ ಸೇಠ್ ದೇವಸ್ಥಾನಕ್ಕೆ ಹೋಗುತ್ತಿದ್ದರು ಎಂದು ಅವರು ಹೇಳಿದರು.
ಅಪಘಾತದಲ್ಲಿ ಮೃತಪಟ್ಟವರನ್ನು ಸಂಜಯ್ ಅಲಿಯಾಸ್ ಸಂಜು (42), ಗೌರವ್ (32), ಅನಿಲ್ (18) ಮತ್ತು ಚಾಲಕ ರಾಜಾ ಚೌಧರಿ ಅಲಿಯಾಸ್ ರಾಜೇಶ್ ಎಂದು ಗುರುತಿಸಲಾಗಿದೆ. ನಾಲ್ವರೂ ಸಂಬಂಧಿಕರು ಎಂದು ಅಧಿಕಾರಿ ತಿಳಿಸಿದ್ದಾರೆ.ಗಾಯಾಳುಗಳು ಮೂವರು ನಿಂಬಹೆರಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.