ಕನಕಪುರ,ಏ.21– ಇತಿಹಾಸ ಪ್ರಸಿದ್ಧ ಹಾರೋಹಳ್ಳಿಯ ಚಾಮುಂಡೇಶ್ವರಿ ದೇವಾಲಯದ ಬಾಗಿಲು ಒಡೆದು ದೇವಿಯ ಮೇಲಿದ್ದ ಚಿನ್ನಾಭರಣ ಹಾಗೂ ಹುಂಡಿಯಲ್ಲಿದ್ದ ಲಕ್ಷಾಂತರ ರೂ.ಗಳನ್ನು ಕಳ್ಳರು ದೋಚಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಇಲ್ಲಿ ವೈಭವದ ಚಾಮುಂಡೇಶ್ವರಿ ಜಾತ್ರೆ ನಡೆದಿತ್ತು. ಸಾವಿರಾರು ಭಕ್ತರು ಆಗಮಿಸಿ ದೇವರಿಗೆ ಕಾಣಿಕೆ ಸಲ್ಲಿಸಿದ್ದರು. ಕಳೆದ ರಾತ್ರಿ ದೇವಾಲಯದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದೇವಿಯ ಮೇಲಿದ್ದ ಚಿನ್ನದ ಗುಂಡು, ಸರ, ತಾಳಿ ಸೇರಿದಂತೆ 40 ಗ್ರಾಂ ತೂಕದ ಚಿನ್ನಾಭರಣ ಹಾಗೂ ಹುಂಡಿ ತೆಗೆದು ಎಣಿಸಲು ಇಟ್ಟಿದ್ದ ಸುಮಾರು 4 ಲಕ್ಷ ರೂ.ಗಳನ್ನು ಕಳವು ಮಾಡಿದ್ದಾರೆ.
ಮುಜರಾಯಿ ಇಲಾಖೆಗೆ ಒಳಪಡುವ ಈ ದೇವಾಲಯದಲ್ಲಿ ಪ್ರತಿದಿನ ಭಕ್ತರು ಆಗಮಿಸುತ್ತಾರೆ. ಆದರೆ ಜಾತ್ರೆ ವೇಳೆ ಸಲ್ಲಿಸಲಾಗಿದ್ದ ಕಾಣಿಕೆಗಳನ್ನು ಎಣಿಕೆ ಮಾಡಲು ಕಳೆದ 25 ದಿನಗಳ ಹಿಂದೆಯೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹಣವನ್ನೆಲ್ಲ ತೆಗೆದು ಬ್ಯಾಗ್‌ನಲ್ಲಿಟ್ಟು ಬೀರುವಿನಲ್ಲಿ ಇಡಲಾಗಿತ್ತು. ಯಾರೋ ಗೊತ್ತಿರುವವರೇ ಈ ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ.
ಜಾತ್ರೆ ನಡೆದು 20 ದಿನಗಳು ಕಳೆದರೂ ತಾಲ್ಲೂಕು ಆಡಳಿತ ಸಿಬ್ಬಂದಿ ಹುಂಡಿ ಎಣಿಕೆ ಮಾಡದೆ ಮತ್ತು ಅದನ್ನು ಬ್ಯಾಂಕ್‌ಗೆ ಜಮೆ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಇಂದು ಬೆಳಿಗ್ಗೆ ಅರ್ಚಕ ಕಲ್ಯಾಣ್ ಕುಮಾರ್ ದೇವಸ್ಥಾನದ ಬಾಗಿಲು ತೆರೆಯಲು ಬಂದಾಗ ಕಳ್ಳತನ ನಡೆದಿರು ವುದು ಗೊತ್ತಾಗಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಹಾರೋಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.