ಬೆಂಗಳೂರು,ನ.10-ರಾಜಕೀಯ ನಿವೃತ್ತಿ ಎಂಬುದು ನನ್ನ ಸ್ವಯಂ ನಿರ್ಧಾರವೇ ಹೊರತು ಯಾರೊಬ್ಬರ ಒತ್ತಡಕ್ಕೆ ಮಣಿದು ನಾನು ಇಂತಹ ನಿರ್ಧಾರ ಕೈಗೊಂಡಿಲ್ಲ ಎಂದು ಸಂಸದ ಹಾಗೂ ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದಗೌಡ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡುವುದಿಲ್ಲ ಎಂಬುದು ಆಧಾರರಹಿತ ಹೇಳಿಕೆ. ಇದಕ್ಕೆ ನಾನು ಉತ್ತರ ಕೊಡಬೇಕಾದ ಅಗತ್ಯವೂ ಇಲ್ಲ. ನಾನು ಹೃದಯಾಂತರಾಳದಿಂದ ತೆಗೆದುಕೊಂಡ ನಿರ್ಧಾರವೇ ಹೊರತು ಇದರಲ್ಲಿ ಬಾಹ್ಯ ಒತ್ತಡ ಇಲ್ಲ ಎಂದು ಪುನರುಚ್ಚರಿಸಿದರು.
ನಾನು ಹನುಮಂತನಂತೆ ಎದೆ ಬಗೆದು ಶ್ರೀರಾಮನನ್ನು ತೋರಿಸಲು ಆಗುವುದಿಲ್ಲ. ಪಕ್ಷವು ಎಲ್ಲವನ್ನು ಕೊಟ್ಟಿರುವಾಗ ಯುವಕರಿಗೆ ಮನ್ನಣೆ ಸಿಗಬೇಕೆಂಬ ಕಾರಣಕ್ಕಾಗಿ ಚುನಾವಣಾ ಕಣದಿಂದ ಹಿಂದೆ ಸರಿಯುವ ನಿರ್ಧಾರವನ್ನು ಕೈಗೊಂಡಿದ್ದೇನೆ. ಇನ್ನು ಮುಂದೆ ಪಕ್ಷದ ಸಂಘಟನೆ ಕಡೆ ಹೆಚ್ಚು ಗಮನಕೊಡುವೆ ಎಂದು ಹೇಳಿದರು.
ಜಾತಿ ಗಣತಿ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ಬಿಜೆಪಿ
ನನಗೆ ರಾಜಕೀಯ ನಿವೃತ್ತ ತೆಗೆದುಕೊಳ್ಳುವಂತೆ ಪಕ್ಷದ ವರಿಷ್ಠರು ಒತ್ತಡ ಹಾಕಿದ್ದರು ಎಂಬುದು ಶುದ್ದ ಸುಳ್ಳು. ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಮೊದಲ ಬಾರಿಗೆ ಶಾಸಕ ಸ್ಥಾನದಿಂದ ಹಿಡಿದು ಮುಖ್ಯಮಂತ್ರಿ ,ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಪಕ್ಷ ಕೊಟ್ಟಿದೆ. ಎಲ್ಲವನ್ನು ಅನುಭವಿಸಿರುವಾಗ ಉಳಿದಿರುವ ಅವಯಲ್ಲಿ ಪಕ್ಷದ ಸಂಘಟನೆಗೆ ತೊಡಗಿಸಿಕೊಳ್ಳುತ್ತೇನೆ ಎಂದರು.
ಯಾವುದೇ ಕಾರಣಕ್ಕೂ ನಾನು ಪಕ್ಷ ಬಿಟ್ಟು ಹೋಗುವ ಆಲೋಚನೆಯನ್ನು ಎಂಥದ್ದೇ ಸಂದರ್ಭದಲ್ಲೂ ಮಾಡಿಲ್ಲ. ನಾನು ನಂಬಿರುವ ಸಿದ್ದಾಂತ ಬೇರೆ ಪಕ್ಷ ಸಿದ್ದಾಂತ ನನಗೆ ಹೊಂದಾಣಿಕೆಯಾಗುವುದಿಲ್ಲ. ನನ್ನ ಕೊನೆಯುಸಿರು ಇರುವವರೆಗೂ ಬಿಜೆಪಿಯೇ ನನ್ನ ಆಸ್ತಿ ಎಂದು ಪ್ರತಿಪಾದಿಸಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಯಾರೇ ಸ್ಪರ್ಧೆ ಮಾಡಿದರೂ ನನ್ನ ಅಭ್ಯಂತರವಿಲ್ಲ. ಪಕ್ಷ ಏನು ಸೂಚನೆ ಕೊಡುತ್ತದೆಯೋ ಅದನ್ನು ಶಿರಾಸವಹಿಸಿ ಮಾಡುವೆ. ಬರಲಿರುವ ಲೋಕಸಭೆ ಚುನಾವಣೆಯಲ್ಲಿ ನಾನು ಅಭ್ಯರ್ಥಿಗಳ ಪರವಾಗಿ ರಾಜ್ಯಾದ್ಯಂತ ಪ್ರಚಾರ ಮಾಡುತ್ತೇನೆ ಎಂದರು.
ಪ್ರಧಾನಿ ನರೇಂದ್ರಮೋದಿ ಅವರು ಮತ್ತೊಮ್ಮೆ ದೇಶವನ್ನು ಮುನ್ನಡೆಸಬೇಕು ಎಂಬುದು ಇಡೀ ಭಾರತೀಯರ ದೃಢಸಂಕಲ್ಪವಾಗಿದೆ. ಅದಕ್ಕಾಗಿ ನಾನು ಕೂಡ ನನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತೇನೆ. ಯಾವ ಸಿದ್ದಾಂತವನ್ನು ನಂಬಿ ಬಂದಿದ್ದೇನೋ ಅದೇ ಸಿದ್ದಾಂತಕ್ಕೆ ಬದ್ದನಾಗಿ ಮುನ್ನಡೆಯುತ್ತೇನೆ. ಗಾಳಿ ಸುದ್ದಿಗೆಲ್ಲ ಕಿವಿಗೊಡುವ ಅಗತ್ಯವಿಲ್ಲ ಎಂದು ಸದಾನಂದಗೌಡ ಹೇಳಿದರು.