ಬೆಂಗಳೂರು,ಏ.22- ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ವರದಿಯಲ್ಲಿನ ಗೊಂದಲಗಳನ್ನು ಮೊದಲು ಬಗೆಹರಿಸಬೇಕು. ಕೈಬಿಟ್ಟು ಹೋಗಿರುವವರನ್ನು ಮರುಸೇರ್ಪಡೆ ಮಾಡಲು ಮೂರಾಲ್ಕು ತಿಂಗಳು ಕಾಲಾವಕಾಶ ನೀಡಬೇಕೆಂದು ಮಾಜಿ ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿ ಸಚಿವರ ಬಳಿ ಇದೆ. ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ಅಲ್ಪಸ್ವಲ್ಪ ಮಾಹಿತಿಗಳು ಮಾತ್ರ ತಿಳಿದಿದೆ. ವರದಿಯ ಬಗ್ಗೆ ಸಂಪೂರ್ಣ ವಿವರವನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಸಲಹೆ ಮಾಡಿದರು.
ವರದಿಯಲ್ಲಿನ ಜಾತಿ ಅಂಕಿ ಸಂಖ್ಯೆಗಳ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ. ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಯಾವ ಸಮುದಾಯ ಸಂಪೂರ್ಣ ಸ್ವಂತ ಕಾಲ ಮೇಲೆ ನಿಂತಿದೆ?, ಬ್ರಾಹ್ಮಣರು, ಲಿಂಗಾಯತ, ಒಕ್ಕಲಿಗರಲ್ಲೂ ಬಡವರಿದ್ದಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬೆಳವಣಿಗೆಯಾಗಿರುವ ಸಮುದಾಯಗಳು ಯಾವುವು? ಎಂಬೆಲ್ಲಾ ಅಂಶಗಳು ಚರ್ಚೆಯಾಗಬೇಕು. ಗೊಲ್ಲರು, ಬೆಸ್ತರು ಎಸ್ಟಿಗೆ ಸೇರ್ಪಡೆಯಾಗಲು ಹೋರಾಟ ಮಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ವರದಿಯಲ್ಲಿ ಸ್ಪಷ್ಟತೆ ಇಲ್ಲ, ಕಾಂತರಾಜು, ಜಯಪ್ರಕಾಶ್ ಹೆಗಡೆ ಅವರು ನೀಡಿರುವ ವರದಿಗಳನ್ನು ಪೂರ್ಣವಾಗಿ ಜನರ ಮುಂದಿಡಬೇಕು. ಅಲ್ಪಸ್ವಲ್ಪ ಮಾತ್ರ ಮಾಹಿತಿ ನೀಡಿದರೆ ಗೊಂದಲ ಹೆಚ್ಚಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ಸ್ವತಂತ್ರ್ಯ ಪೂರ್ವದಿಂದಲೂ ಸಮಾನತೆಯ ಪರವಾಗಿದೆ. ವರದಿ ತಯಾರಾಗಿ ಬಹಳಷ್ಟು ವರ್ಷಗಳಾಗಿವೆ. ಈ ನಡುವೆ ತುಂಬಾ ಜನ ವಲಸೆ ಬಂದಿದ್ದಾರೆ. ಬೇರೆ ಬೇರೆ ನಗರಗಳಿಗೂ ಸ್ಥಳಾಂತರಗೊಂಡಿದ್ದಾರೆ. ಅವರ ಹೆಸರುಗಳು ಸೇರ್ಪಡೆಯಾಗಿವೆಯೇ? ಮುಖ್ಯಮಂತ್ರಿಯವರು ಸಾಕಷ್ಟು ಅನುಭವ ಇರುವವರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅನುಮಾನ ಬಗೆಹರಿಸಿ ಚರ್ಚೆಗಳನ್ನು ಮುಂದುವರೆಸಬೇಕು ಎಂದು ಹೇಳಿದರು.
ವರದಿಯನ್ನು ಯಾರೂ ವಿರೋಧ ಮಾಡಿಲ್ಲ, ಹಿಂದುಳಿದ ವರ್ಗಗಳಲ್ಲಿ ಅನೇಕ ಜಾತಿಗಳಿವೆ. ಕುರುಬರನ್ನು ಹೆಚ್ಚು ಸೇರಿಸಿದ್ದಾರೆ ಎಂಬ ಅನುಮಾನಗಳಿವೆ. ಅದರ ಬಗ್ಗೆ ಸ್ಪಷ್ಟನೆ ನೀಡಬೇಕು. 1.33 ಕೋಟಿ ಕುಟುಂಬಗಳನ್ನು ಸಮೀಕ್ಷೆ ಮಾಡಲಾಗಿದೆ. ರಾಜ್ಯಸರ್ಕಾರ 1.22 ಕೋಟಿ ಕುಟುಂಬಕ್ಕೆ ಗೃಹಜ್ಯೋತಿ ಸೌಲಭ್ಯ ನೀಡಲಾಗಿದೆ.
ಸಾಕಷ್ಟು ದತ್ತಾಂಶಗಳು ಸರ್ಕಾರದ ಬಳಿ ಇವೆ. ಇದನ್ನು ಆಧಾರವಾಗಿಟ್ಟುಕೊಂಡು ಲೋಪದೋಷಗಳನ್ನು ಸರಿಪಡಿಸಬಹುದು ಎಂದರು. ಪರಿಶಿಷ್ಟ ಜಾತಿಯಲ್ಲಿ ಆದಿ ದ್ರಾವಿಡ, ಆದಿ ಕರ್ನಾಟಕ ಎಂಬ ಗೊಂದಲವಿದೆ. ಮೊದಲು ಇದನ್ನು ಸರಿಪಡಿಸಬೇಕು. ಸಮೀಕ್ಷೆ ನಡೆದ ಬಳಿಕ 1 ಕೋಟಿ ಜನಸಂಖ್ಯೆ ಹೆಚ್ಚಾಗಿದೆ. ಇದು ಸೇರ್ಪಡೆಯಾಗಿದೆಯೇ, ಇಲ್ಲದೇ ಎಂಬುದು ಗೊತ್ತಿಲ್ಲ, ವಿಶೇಷ ಅಧಿವೇಶನ ಕರೆಯುವುದು ಒಂದು ಭಾಗ, ದೊಡ್ಡ ತೀರ್ಮಾನ ತೆಗೆದುಕೊಳ್ಳುವಾಗ ಸಮಗ್ರ ಚರ್ಚೆಯಾಗಬೇಕು ಎಂದು ಹೇಳಿದರು.
ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಸಾಕಷ್ಟು ಆರೋಪಗಳಿವೆ. ಅವನೊಬ್ಬ ಏಡ್ಸ್ ಟ್ರಾಪ್ ಗಿರಾಕಿ. ಬೇರೆಯವರಿಗೆ ಏಡ್ಸ್ ಸೋಂಕನ್ನು ಅಂಟಿಸಿದ್ದಾನೆ. ಶಾಸನಸಭೆಯಿಂದ ಅಮಾನತುಗೊಂಡಿದ್ದಾನೆ. ಯಾವ ಸಮಿತಿಗಳಿಗೂ ಹೋಗುವಂತಿಲ್ಲ, ವಿಧಾನಸೌಧಕ್ಕೂ ಕಾಲಿಡುವಂತಿಲ್ಲ. ಆದರೆ ವಿಧಾನಸೌಧಕ್ಕೆ ಹೋಗಿ ಬರುತ್ತಿದ್ದಾರೆ. ರಾಜಭವನಕ್ಕೆ ಇವನನ್ನು ಹೇಗೆ ಬಿಟ್ಟುಕೊಂಡರು. ಆತನ ಮೇಲೆ ಅತ್ಯಾಚಾರದ ಆರೋಪವಿದೆ ಎಂದು ಪ್ರಶ್ನಿಸಿದರು.
ದಿನ ಮಾತ್ರೆ ನುಂಗಿಯೇ ಬದುಕುತ್ತೇನೆ ಎಂದು ಮುನಿರತ್ನ ಹೇಳಿಕೊಂಡಿರುವುದನ್ನು ಕೇಳಿದ್ದೇನೆ. ನಿದ್ರೆ ಬರಲು ಮಾತ್ರೆ ನುಂಗಬಹುದು. ಆತ ಮಾಡಿರುವುದು ಒಂದಲ್ಲಾ ಎರಡಲ್ಲ, ವಿಧಾನಸೌಧದ ಮೂರನೇ ಮಹಡಿಯಲ್ಲಿ ಹೆಣ್ಣುಮಗಳನ್ನು 5 ಬಾರಿ ಅತ್ಯಾಚಾರ ಮಾಡಿರುವುದಾಗಿ ದೂರಿದೆ.
ಬಿಬಿಎಂಪಿ ಕಡತಗಳನ್ನು ಸುಟ್ಟಿರುವುದು, ಓಟರ್ ಐಡಿ ಹಗರಣ, ಎಲ್ಲೆಲ್ಲಿ ಲಂಚ ಕೊಟ್ಟಿದ್ದಾನೆ ಎಂಬುದೆಲ್ಲಾ ಹೇಳುತ್ತಾ ಹೋದರೆ ಸಾಕಷ್ಟು ಸಮಯ ಬೇಕು. ಕ್ಷೇತ್ರದಲ್ಲಿ ಆತ ಹಾಕಿಸಿರುವ ಒಂದು ಬೋರ್ ವೆಲ್ ಕೂಡ ಸಿಗುವುದಿಲ್ಲ. ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿ ಬಗ್ಗೆ ಮಾತನಾಡಿದ ಆತ ತನ್ನ ತಂದೆಯನ್ನು ಪೂಜೆ ಮಾಡದವನು ಬೇರೆಯವರ ಬಗ್ಗೆ ಮಾತನಾಡುತ್ತಾನೆ ಎಂದು ಟೀಕಿಸಿದರು.
ಮುಂದಿನ ದಿನಗಳಲ್ಲಿ ಮುನಿರತ್ನ ಅತ್ಯಾಚಾರ ಪ್ರಕರಣದ ದಾಖಲೆಗಳನ್ನು ಮನೆಮನೆಗೆ ಹಂಚುತ್ತೇವೆ. ವಿಧಾನಸೌಧದಲ್ಲಿ ರಾಜ್ಯದ ಹಿತದೃಷ್ಟಿ ಕಾಪಾಡಬೇಕು. ಆ್ಯಂಟಿಬೇಂಬರ್‌ನಲ್ಲಿ ಅತ್ಯಾಚಾರ ಮಾಡುವುದಲ್ಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಬಳಿ ಬಂದು ಕಾಲು ಕಟ್ಟುವುದು, ಕಾಂಟ್ಯಾಕ್ಸ್ ಸಿಗಲಿಲ್ಲ ಎಂದು ಇ.ಡಿ.ಗೆ ದೂರು ನೀಡುವುದು. ಮೊದಲೆಲ್ಲಾ ಕಳ್ಳ ಲೆಕ್ಕ ಬರೆಯುತ್ತಿದ್ದ. ಈಗ ಅದು ನಡೆಯುತ್ತಿಲ್ಲ, ಒಂದೆಡೆ ಬಿ.ಕೆ.ಹರಿಪ್ರಸಾದ್‌ನನ್ನು ಗುರು ಎಂದು ಹೇಳುವ ಮುನಿರತ್ನ ಅದೇ ಹರಿಪ್ರಸಾದ್‌ರನ್ನು ಸೋಲಿಸಲು ತೇಜಸ್ವಿ ಸೂರ್ಯಗ ಹಣ ನೀಡಿದ್ದಾನೆ ಎಂದು ಆರೋಪಿಸಿದರು.