ಬೆಂಗಳೂರು,ಏ.22– ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಕೊಲೆ ಪ್ರಯತ್ನ ಪ್ರಕರಣದಲ್ಲಿ ಹಿಂದೆ ಗನ್‌ಮ್ಯಾನ್ ಆಗಿ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಸ್ಥಳದಲ್ಲಿ ಸಿಕ್ಕ ಮೊಬೈಲ್ ಅನ್ನು ಘಟನೆ ಬಳಿಕ ತಂದು ಇರಿಸಿರುವುದಾಗಿ ತಿಳಿದುಬಂದಿದೆ.
ಮೂರು ದಿನಗಳ ಹಿಂದೆ ಮಧ್ಯರಾತ್ರಿ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಹಿಂದೆ ಗನ್‌ಮ್ಯಾನ್ ಆಗಿ ಕೆಲಸ ಮಾಡಿದ್ದ ವಿಠ್ಠಲರಾವ್ ಎಂಬುವವರನ್ನು ತೀವ್ರವಾಗಿ ವಿಚಾರಣೆಗೊಳಪಡಿಸಲಾಗಿದೆ. ಅನುಮಾನಾಸ್ಪದವಾಗಿ ಕಂಡುಬಂದ ಎಲ್ಲರಿಗೂ ವಿಚಾರಣೆಗೆ ಹಾಜರಾಗುವಂತೆ ಬಿಡದಿಯ ಪೊಲೀಸರು ನೋಟೀಸ್ ನೀಡಿದ್ದಾರೆ.
ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಒಂದು ಮೊಬೈಲ್ ಸಿಕ್ಕಿತ್ತು. ಅದನ್ನು ಪರಿಶೀಲನೆ ನಡೆಸಿದಾಗ ಪೊಲೀಸರ ದಿಕ್ಕು ತಪ್ಪಿಸುವ ಸಲುವಾಗಿ ಗುಂಡಿನ ದಾಳಿಯಾದ ಬಳಿಕ ಮೊಬೈಲ್ ಅನ್ನು ತಂದು ಅಲ್ಲಿ ಇಟ್ಟಿರುವುದಾಗಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣದ ಪ್ರಮುಖ ಆರೋಪಿ ರಾಕೇಶ್ ಮಲ್ಲಿಯನ್ನು ಬಿಡದಿಯ ಪೊಲೀಸರು ಇಂದು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ವಕೀಲರೊಂದಿಗೆ ಹಾಜರಾಗಿದ್ದ ರಾಕೇಶ್ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ರಾಮನಗರದ ಎಸ್ಪಿ ಶ್ರೀನಿವಾಸಗೌಡ ಅವರು ಘಟನೆಯ ಬಗ್ಗೆ ಮಾಹಿತಿ ನೀಡಿ, ಮೂರು ದಿನಗಳಿಂದ ತನಿಖೆ ನಡೆಸಲಾಗುತ್ತಿದೆ. ದೂರಿನಲ್ಲಿ ಹೆಸರಿಸಲಾದ ಎಲ್ಲರಿಗೂ ನೋಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಎಲ್ಲರೂ ತನಿಖೆಗೆ ಸಹಕರಿಸಲು ಒಪ್ಪಿದ್ದಾರೆ. ಇನ್ನೂ ಹೆಚ್ಚಿನ ತನಿಖೆ ಅಗತ್ಯವಿದೆ ಎಂದಿದ್ದಾರೆ.
ಪ್ರಾಥಮಿಕ ವಿಚಾರಣೆ ಪ್ರಕಾರ, ಪರಿಚಿತ ವ್ಯಕ್ತಿಯೇ ಮಾಹಿತಿ ನೀಡಿರುವ ಸಾಧ್ಯತೆಯಿದೆ. ಕೊಲೆಯತ್ನದ ಹಿಂದಿನ ಉದ್ದೇಶ ಇನ್ನೂ ಖಚಿತವಾಗಿಲ್ಲ. ಘಟನೆ ನಡೆದಾಗ ಹಾಜರಿದ್ದ ಅಂಗರಕ್ಷಕರಿಂದಲೂ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.