ಬೆಂಗಳೂರು,ಏ.22- ವಿಧಾನಸೌಧ ವೀಕ್ಷಣೆಗೆ ಪ್ರವೇಶ ಶುಲ್ಕ ನಿಗದಿ ಮಾಡುವ ಕುರಿತಂತೆ ವಿಧಾನಸಭೆ ಸಚಿವಾಲಯ ಗಂಭೀರ ಚರ್ಚೆ ನಡೆಸುತ್ತಿದೆ.ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಈ ನಿಟ್ಟಿನಲ್ಲಿ ಚರ್ಚೆ ಆರಂಭಿಸಿದ್ದು, ಶುಲ್ಕ ನಿಗದಿಯ ಮೂಲಕ ವಿಧಾನಸೌಧವನ್ನು ಪ್ರವಾಸೋದ್ಯಮ ತಾಣವನ್ನಾಗಿಸಲು ಮುಂದಾಗಿದ್ದಾರೆ.
ಗೈಡೆಡ್ ಟೂರ್ ಅಡಿಯಲ್ಲಿ ವಿಧಾನಸಭೆಯ ಪ್ರವೇಶಕ್ಕೆ ಕನಿಷ್ಠ 20 ರೂ.ನಿಂದ 50 ರೂ. ಶುಲ್ಕ ನಿಗದಿ ಮಾಡಲು ವಿದೇಶಿ ಪ್ರವಾಸಿಗರಿಗೆ 150 ರೂ.ವರೆಗೆ ಶುಲ್ಕ ವಿಧಿಸುವ ಬಗ್ಗೆ ಚರ್ಚೆಗಳಿವೆ. ವಿಧಾನಸಭೆಯ ಕುರಿತು ಮಾಹಿತಿ ನೀಡುವ ಗೈಡ್‌ಗಳಿಗೆ ಭದ್ರತೆ, ಮೇಲ್ವಿಚಾರಣೆ, ಕುಡಿಯುವ ನೀರು ಸೇರಿದಂತೆ ಇತರೆ ಸೌಲಭ್ಯಗಳಿಗಾಗಿ ಶುಲ್ಕ ವಸೂಲಿ ಮಾಡಲು ಚರ್ಚಿಸಲಾಗಿದೆ.
ಆರೋಗ್ಯ ಕುರಿತಂತೆ ಕಾಳಜಿ ವಹಿಸುವ ಸಲುವಾಗಿಯೂ ಶುಲ್ಕದಲ್ಲಿ ಸೇರ್ಪಡೆಯಾಗಲಿದೆ. ವಿಧಾನಸೌಧ ವೀಕ್ಷಣೆಗೆ ಬರುವವರನ್ನು 30 ಜನರ ತಂಡವನ್ನಾಗಿ ವಿಭಾಗಿಸಿ ಗೈಡ್‌ಗಳ ಮೇಲ್ವಿಚಾರಣೆಯಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ. ವಸೂಲಾದ ಶುಲ್ಕವನ್ನು ಪ್ರವಾಸೋದ್ಯಮದ ಇಲಾಖೆಗೆ ಜಮಾ ಮಾಡಲಾಗುತ್ತಿದ್ದು, ವಿಧಾನಸೌಧದ ನಿರ್ವಹಣೆಗೆ ಮತ್ತು ಸೌಂದರ್ಯಪಾಲನೆಗೆ ಬಳಕೆ ಮಾಡುವ ಸಾಧ್ಯತೆಗಳಿವೆ.