ಉಗ್ರರ ಗುಂಡಿಗೆ ಬಲಿಯಾದ ಮತ್ತಿಕೆರೆಯ ಭರತ್ ಭೂಷಣ್
ಕಾಶ್ಮೀರದಲ್ಲಿ ನಡೆದ ಭೀಕರ ಉಗ್ರರ ಅಟ್ಟಹಾಸಕ್ಕೆ ನಗರದ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಸಕ್ಕಾಗಿ ಕಾಶೀರಕ್ಕೆ ತೆರಳಿದ್ದ ಮತ್ತಿಕೆರೆಯ ಟೆಕ್ಕಿ ಭರತ್ ಭೂಷಣ್ ಉಗ್ರರ ಅಟ್ಟಹಾಸಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಕಳೆದ ಶುಕ್ರವಾರ ಬೆಂಗಳೂರಿ ನಿಂದ ವೆಕೇಷನ್‌ಗಾಗಿ ಭರತ್ ಭೂಷ ಪತ್ನಿ,
ಹಾಗೂ ಮೂರು ವರ್ಷದ ಮಗ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಪಹಲ್ಗಾಮ್‌ನಲ್ಲಿ ಪ್ರವಾಸದಲ್ಲಿದ್ದ ವೇಳೆ ಮಂಗಳವಾರ ಮಧ್ಯಾಹ್ನ ಏಕಾಏಕಿ ಉಗ್ರರ ದಾಳಿ ನಡೆದಿದೆ. ಈ ವೇಳೆ ದಾಳಿಯಾದ ಸ್ಥಳದಲ್ಲೇ ಇದ್ದ ಭೂಷಣ್ ಕುಟುಂಬ, ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿಹೋಗಿದ್ದಾರೆ. ಅಲ್ಲೇ ಇದ್ದ ಮರವೊಂದರ ಬಳಿ ಮಗು ಜೊತೆ ಅವಿತುಕುಳಿತಿದ್ದ ಭರತ್ ಭೂಷಣ್‌ಗೆ ಉಗ್ರರು ನೇರ ಶೂಟ್ ಮಾಡಿದ್ದಾರೆ.
ಬುಲೆಟ್ ನೇರ ಭೂಷಣ್ ತಲೆಗೆ ಬಿದ್ದಿದ್ದು, ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ಕೂಡಲೇ ಭೂಷಣ್ ಪರಿಶೀಲಿಸಿದ ಪತ್ನಿ, ಭೂಷಣ್ ಸಾವನ್ನಪ್ಪಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಭರತ್ ಕಳೆದ ಎಂಟು ವರ್ಷದ ಹಿಂದೆ ಮತ್ತಿಕೆರೆ ಮೂಲದ ಯುವತಿಯನ್ನು ಮದುವೆಯಾಗಿದ್ದರು.
ಟೆಕ್ಕಿಯಾಗಿದ್ದ ಭರತ್ ಇತ್ತೀಚಿಗೆ ಕೆಲಸ ಬಿಟ್ಟು ಬಿಸಿನೆಸ್ ಆರಂಭಿಸುವ ಚಿಂತನೆಯಲ್ಲಿದ್ದರು. ಅದರಂತೆ ಕೆಲಸ ಬಿಟ್ಟಿದ್ದ ಕಾರಣ ರಜೆಯಿದ್ದಿದ್ದರಿಂದ ಮಗುವಿಗೆ ಕಾಶ್ಮೀರ ತೋರಿಸಬೇಕೆಂಬ ಕಾರಣಕ್ಕೆ ಪ್ರವಾಸ ಕೈಗೊಂಡಿದ್ದರು. ಆದರೆ ದುರಾದೃಷ್ಟವಶಾತ್ ಉಗ್ರರ ಬಂದೂಕಿನ ಗುಂಡೇಟಿಗೆ ಭರತ್ ಉಸಿರು ಚೆಲ್ಲಿದ್ದಾರೆ.
ಪ್ರಸ್ತುತ ಮತ್ತಿಕೆರೆಯ ಸುಂದರ ನಗರದಲ್ಲಿರುವ ಅವರ ನಿವಾಸದಲ್ಲಿ ಅವರ ತಂದೆ -ತಾಯಿ ಇದ್ದು ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದರೆ ಆಘಾತಕೊಳಗಾಗುತ್ತಾರೆ ಎಂದು ಮಾಹಿತಿಯನ್ನು ತಿಳಿಸಿಲ್ಲ. ಮಾಧ್ಯಮದವರಿಗೂ ಕೂಡ ಮನೆಯ ಸಮೀಪವೇ ಬ್ಯಾರಿಕೇಡ್ ಹಾಕಿ ತಡೆಯಲಾಗಿದೆ.
ರಾಮಮೂರ್ತಿ ನಗರದ ನಿವಾಸಿ ಮಧು ದುರಂತ ಸಾವು
ಬೆಂಗಳೂರು, ಏ.23- ದಕ್ಷಿಣ ಕಾಶ್ಮೀರದಲ್ಲಿ ಉಗ್ರರು ನಡೆಸಿದ ನಡೆದ ಹಿಂದೂಗಳ ನರಮೇಧದಲಿ ನಗರದ ಮಧು ಸೂದನ್ ರಾವ್ ಎಂಬುವರು ಬಲಿ ಯಾಗಿದ್ದಾರೆ.ಮೂಲತಃ ಆಂಧ್ರದ ನೆಲ್ಲೂರು ಜಿಲ್ಲೆಯ ಕಾವಲಿ ಗ್ರಾಮದವರಾದ ಮಧುಸೂದನ್ ನಗರದ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಟೆಕ್ಕಿಯಾಗಿದ್ದು, ರಾಮಮೂರ್ತಿ ನಗರದ ಕಲ್ಕೆರೆಯಲ್ಲಿ ವಾಸವಾಗಿದ್ದರು.
ಪತ್ನಿ ಹಾಗೂ ತಮ ಇಬ್ಬರು ಮಕ್ಕಳೊಂದಿಗೆ ಎರಡು ದಿನದ ಹಿಂದೆ ಪತ್ನಿಯ ಸ್ನೇಹ ವರ್ಗದವರೊಂದಿಗೆ ಬೇಸಿಗೆ ರಜೆ ಕಳೆಯಲು ಕಾಶ್ಮೀರಕ್ಕೆ ತೆರಳಿದ್ದರು.ಮಿನಿ ಸ್ವಿಜರ್‌ಲ್ಯಾಂಡ್ ಪಹಲ್ಗಾಮ್‌ಗೆ ಕುದುರೆ ಮೇಲೆ ತೆರಳಿ ಪ್ರವಾಸ ಮುಗಿಸಿ ಒಂದು ಸ್ಥಳದಲ್ಲಿ ಜತೆಯಲ್ಲಿದ್ದವರೆಲ್ಲಾ ಕುಳಿತಿದ್ದಾಗ ಮಧುಸೂದನ್ ಊಟ ತರುವುದಾಗಿ ಹೇಳಿ ಹೋಗಿ ಉಗ್ರರ ಗುಂಡಿಗೆ ಬಲಿಯಾಗಿ ಸಾವನ್ನಪ್ಪಿದ್ದಾರೆ.
ಊಟ ತರಲು ಹೋದ ನನ್ನ ಪತಿಯ ತಲೆಗೆ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಅವರ ಪತ್ನಿ ಅಲ್ಲಿನ ಪೊಲೀಸರಿಗೆ ಧೃಡಪಡಿಸಿದ್ದಾರೆ.ಕಾಶ್ಮೀರಕ್ಕೆ ತೆರಳಿದ್ದ ಮಂಜುನಾಥ್, ಭರತ್ ಭೂಷಣ್ ಹಾಗೂ ಮಧುಸೂದನ್ ಅವರ ಸಾವಿನೊಂದಿಗೆ ರಾಜ್ಯದ ಮೂವರು ಉಗ್ರರ ದಾಳಿಗೆ ಬಲಿಯಾದಂತಾಗಿದೆ.
ಇದೀಗ ಕಾಶೀರಕ್ಕೆ ತೆರಳಿರುವ ರಾಜ್ಯದ ಅಧಿಕಾರಿಗಳ ತಂಡ ಉಗ್ರರ ದಾಳಿಯಲ್ಲಿ ಹತರಾಗಿರುವ ಮೂವರ ಪಾರ್ಥಿವ ಶರೀರಗಳನ್ನು ರಾಜ್ಯಕ್ಕೆ ತರುವ ಪ್ರಯತ್ನಗಳನ್ನು ಕೈಗೊಂಡಿದ್ದಾರೆ. ಇದರ ಜೊತೆಗೆ ಬೇರೆ ಯಾರಾದರೂ ಘಟನೆಯಲ್ಲಿ ಬಲಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ.
ಮಗ ದ್ವಿತೀಯ ಪಿಯುನಲ್ಲಿ ಶೇ. 97 ಅಂಕ ಕಾಶೀರದಲ್ಲಿ ಸಂಭ್ರಮಕ್ಕೆ ತೆರಳಿದ್ದರು!
ಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ಅವರ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.ದ್ವಿತೀಯ ಪಿಯು ಪರೀಕ್ಷೆಯಲ್ಲಿ ತಮ ಮಗ 97% ಅಂಕ ಗಳಿಸಿದ್ದ ಹೀಗಾಗಿ ಸಂಭ್ರಮಾಚರಣೆ ಮಾಡಲು 48 ವರ್ಷದ ಮಂಜುನಾಥ್ ತನ್ನ ಪತ್ನಿ ಮತ್ತು ಮಗನೊಂದಿಗೆ ಕಾಶೀರಕ್ಕೆ ಹೋಗಿದ್ದರು.
ಮಂಜುನಾಥ್ ಮತ್ತು ಅವರ ಕುಟುಂಬ ಸದಸ್ಯರು ಏಪ್ರಿಲ್ 19ರಂದು ಕಾಶೀರಕ್ಕೆ ತೆರಳಿದ್ದರು. ನಾಳೆ ಶಿವಮೊಗ್ಗಕ್ಕೆ ಹಿಂತಿರುಗಬೇಕಿತ್ತು. ಪ್ರವಾಸವನ್ನು ಏಜೆನ್ಸಿಯ ಮೂಲಕ ಬುಕ್ ಮಾಡಲಾಗಿತ್ತು ಎಂದು ಕುಟುಂಬದ ಆಪ್ತ ಮೂಲಗಳು ಟಿಎನ್‌ಐಇಗೆ ತಿಳಿಸಿವೆ. ಭಯೋತ್ಪಾದಕರು ನನ್ನ ಗಂಡನನ್ನು ನನ್ನ ಕಣ್ಣೆದುರೇ ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಂಜುನಾಥ್‌ರವರ ಪತ್ನಿ ಪಲ್ಲವಿ ಸುದ್ದಿ ವಾಹಿನಿಗಳಿಗೆ ತಿಳಿಸಿದ್ದಾರೆ.
ನನ್ನ ಮಗ ಬೆಳಿಗ್ಗೆಯಿಂದ ಏನನ್ನೂ ತಿಂದಿರಲಿಲ್ಲ. ಹೀಗಾಗಿ ನನ್ನ ಪತಿ ಅಂಗಡಿಯವನೊಂದಿಗೆ ಮಾತನಾಡುತ್ತಿದ್ದಾಗ ಭಯೋತ್ಪಾದಕರು ಗುಂಡು ಹಾರಿಸಿದರು. ಅವರ ತಲೆಗೆ ಗುಂಡು ಬಿತ್ತು, ಮೂರರಿಂದ ನಾಲ್ಕು ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ಮಾಡಿದರು. ನನ್ನ ಗಂಡನನ್ನು ಕೊಂದ ನಂತರ, ನಾನು ಅವರಲ್ಲಿ ಒಬ್ಬನನ್ನು ನನ್ನನ್ನೂ ಕೊಲ್ಲುವಂತೆ ಕೇಳಿದೆ.
ಅವನು, ನಹಿನ್ ಮಾರೇಂಗೆ, ಮೋದಿ ಕೋ ಬೋಲ್ದೋ (ನಾವು ನಿನ್ನನ್ನು ಕೊಲ್ಲುವುದಿಲ್ಲ, ಪ್ರಧಾನಿ ಮೋದಿಗೆ ಹೇಳು) ಎಂದು ಹೇಳಿ ಹೊರಟುಹೋದನು. ದಾಳಿಯ ಸಮಯದಲ್ಲಿ ಯಾವುದೇ ಸೇನಾ ಸಿಬ್ಬಂದಿ ಇರಲಿಲ್ಲ ಎಂದು ಹೇಳಿದ್ದಾರೆ.ಮೂವರು ಸ್ಥಳೀಯ ಕಾಶೀರಿ ಪುರುಷರು ಬಿಸಿಲ್ಲಾ, ಬಿಸಿಲ್ಲಾ ಎಂದು ಘೋಷಣೆ ಕೂಗುತ್ತಾ ನನ್ನನ್ನು ರಕ್ಷಿಸಿದರು ಎಂದು ಪಲ್ಲವಿ ಹೇಳಿದರು. ಅವರು ನನ್ನ ಸಹೋದರರಂತೆ ಎಂದು ಪಲ್ಲವಿ ಹೇಳಿದರು.
ಪ್ರವಾಸಕ್ಕೆಂದು ತೆರಳಿದವರ ಮೇಲೆ ದಾಳಿ ನಡೆದಿರುವ ಸುದ್ದಿ ಬರಸಿಡಿಲಿನಂತೆ ಬಂದಿದ್ದೇ ಶಿವಮೊಗ್ಗದಲ್ಲಿರುವ ಮಂಜುನಾಥ್ ಅವರ ಕುಟುಂಬ ಗಾಬರಿಗೆ ಒಳಗಾಗಿದೆ. ಪಲ್ಲವಿ ಅವರು ಪತಿಯ ಸಾವಾಗಿರುವ ವಿಚಾರ ತಿಳಿಸುತ್ತಿದ್ದಂತೆ ವಿಜಯನಗರದಲ್ಲಿರುವ ಅವರ ಮನೆಗೆ ಸಂಬಂಧಿಕರು ದೌಡಾಯಿಸಿದ್ದಾರೆ.
ಮಂಜುನಾಥ್ ಅವರ ತಾಯಿಗೆ ವಯಸ್ಸಾಗಿದ್ದರಿಂದ ಪುತ್ರನ ಸಾವಿನ ವಿಚಾರ ತಿಳಿಸಿಲ್ಲ. ಜತೆಗೆ, ಮನೆಯಲ್ಲಿ ಟಿವಿಯನ್ನು ಸಹ ಬಂದ್ ಮಾಡಲಾಗಿದೆ. ಮೃತರ ಮನೆಯಲ್ಲಿದುಃಖ ಮಡುಗಟ್ಟಿದೆ. ಇಡೀ ಕುಟುಂಬ ಕಣ್ಣೀರುಸುರಿಸುತ್ತಿದೆ.