Thursday, April 24, 2025
Homeಇದೀಗ ಬಂದ ಸುದ್ದಿಪಹಲ್ಲಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ಭರತ್ ಭೂಷಣ್ ಪತ್ನಿ ಬಿಚ್ಚಿಟ್ಟ ಭಯಾನಕ ಅನುಭವ

ಪಹಲ್ಲಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ಭರತ್ ಭೂಷಣ್ ಪತ್ನಿ ಬಿಚ್ಚಿಟ್ಟ ಭಯಾನಕ ಅನುಭವ

ಬೆಂಗಳೂರು,ಏ.24- ನೀವು ಇಲ್ಲಿ ಇಷ್ಟು ಖುಷಿಯಿಂದ ಹೇಗೆ ಇರಲು ಸಾಧ್ಯ ಅಂತ ಪ್ರಶ್ನಿಸಿ ಉಗ್ರರು ಜನರ ಮೇಲೆ ಗುಂಡು ಹಾರಿಸುತ್ತಿದ್ದರು ಆ ದೃಶ್ಯ ಭಯಾನಕ ಎಂದು ಪಹಲ್ಲಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ಭರತ್ ಭೂಷಣ್ ಪತ್ನಿ ಡಾ.ಸುಜಾತ ಕಣ್ಣೀರು ಹಾಕಿದರು.ಇಂದು ಬೆಳಗ್ಗೆ ಭರತ್ ಭೂಷಣ್ ಪಾರ್ಥಿವ ಶರೀರ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಅಲ್ಲಿಂದ ಅಬುಲೆನ್ಸ್‌ನಲ್ಲಿ ಶವವನ್ನು ಮತ್ತೀಕೆರೆಯಲ್ಲಿರುವ ಸುಂದರ ನಗರಕ್ಕೆ ತರಲಾಯಿತು.

ಮನೆಗೆ ಬಂದ ಬಳಿಕ ಡಾ.ಸುಜಾತ ಅವರನ್ನು ಮಾಧ್ಯಮದ ಮುಂದೆ ಭಾವುಕರಾಗಿ ಭಯಾನಕ ಕ್ಷಣಗಳನ್ನ ನೆನೆದು ಕಣ್ಣೀರು ಹಾಕಿದರು. ನಾವು ಏ.18ಕ್ಕೆ ಕಾಶ್ಮೀರಕ್ಕೆ ಹೋಗಿದ್ದೆವು. ಏ.22 ನಮ್ಮ ಪ್ರವಾಸದ ಕೊನೆಯ ದಿನ ಅಂದು ನಾವು ಪಹಲ್ಟಾಮ್ ಭೇಟಿ ನೀಡಿದ್ದೆವು. ಸುಮಾರು 4 ಕಿ.ಮೀ ದೂರದವರೆಗೆ ಕುದುರೆಯಲ್ಲಿ ಬೈಸರನ್‌ಗೆ ಹೋಗಿದ್ದೆವು. ಆ ಬಯಲು ಪ್ರದೇಶದಲ್ಲಿ ಮಗುವಿನ ಜೊತೆ ಆಟ ಆಡುತ್ತಾ ಕುಳಿತಿದ್ದೆವು. ಮೈದಾನದಲ್ಲಿ ಇದ್ದ ಟೆಂಟ್‌ನಲ್ಲಿ ಕಾಶ್ಮೀರದ ದಿರಿಸು ಧರಿಸಿ ಫೋಟೋ ತೆಗೆಯಬಹುದಿತ್ತು.

ನಾನು ಮತ್ತು ಇನ್ನೊಂದು ಕುಟುಂಬದವರು ಕೊನೆಯ ಎರಡು ದಿನದಿಂದ ಜೊತೆಯಾಗಿ ಓಡಾಡುತ್ತಿದ್ದೆವು. ಫೋಟೋ ಎಲ್ಲಾ ತೆಗೆದು ಮುಗಿಯುಷ್ಟರಲ್ಲಿ ಮಧ್ಯಾಹ್ನ 1:30 1:45 ಆಗಿರಬಹುದು. ಊಟ ಮಾಡಲು ಮತ್ತೆ ಕೆಳಗೆ ಹೋಗಬೇಕಿತ್ತು. ಹೀಗಾಗಿ ನಾವು ಬೈಸರನ್‌ನಿಂದ ಹೊರಡಲು ಮುಂದಾಗುತ್ತಿದ್ದಾಗ ಜೋರಾಗಿ ಗುಂಡಿನ ಶಬ್ದ ಕೇಳಿಸಿತು.

ಈ ಶಬ್ದ ಕೇಳಿದಾಗ ಪಕ್ಷಿ, ಪ್ರಾಣಿ ಓಡಿಸಲು ಗನ್‌ನಿಂದ ಶೂಟ್ ಮಾಡುತ್ತಿರಬಹುದು ಎಂದು ಭಾವಿಸಿದೆವು. ಆದರೆ ಶಬ್ದದ ತೀವ್ರತೆ ಜಾಸ್ತಿ ಆಗುತ್ತಿದ್ದಂತೆ ಹತ್ತಿರದಲ್ಲೇ ಗುಂಡಿನ ದಾಳಿ ನಡೆಯುತ್ತಿದೆ ಎನ್ನುವುದು ಗೊತ್ತಾಗಿ ನಾನು, ಪತಿ ಭೂಷಣ್ ಮಗು ಟೆಂಟ್ ಹಿಂಭಾಗದಲ್ಲಿ ಅಡಗಿ ಕುಳಿತೆವು.

ಸುಮಾರು 100 ಅಡಿ ದೂರದಲ್ಲಿ ಉಗ್ರನೊಬ್ಬ, ಒಬ್ಬರನ್ನು ಮಾತನಾಡಿಸಿ ಶೂಟ್ ಮಾಡಿದ. ನೀವು ಹೇಗೆ ಖುಷಿಯಲ್ಲಿ ಇದ್ದೀರಿ. ಮತ್ತೊಬ್ಬರಿಗೆ ಅಲ್ಲಿ ನಮ್ಮ ಮಕ್ಕಳು ಸಾಯುತ್ತಿದ್ದಾರೆ. ಇಲ್ಲಿ ನೀವು ಮಕ್ಕಳೊಂದಿಗೆ ಹೇಗೆ ಆಟ ಆಡುತ್ತಾ ಖುಷಿಯಾಗಿದ್ದೀರಿ ಎಂದು ಪ್ರಶ್ನಿಸಿದ. ಅದಕ್ಕೆ ಅವರು ನಾನು ಏನು ಮಾಡಬೇಕು? ಯಾವ ರೀತಿ ಸಹಾಯ ಮಾಡಬೇಕು ಎಂದು ಕೇಳಿದರು. ಅವರ ಮಾತನ್ನು ಕೇಳದೇ ಶೂಟ್ ಮಾಡಿ ನೂಕಿದ ಬಳಿಕ ಮತ್ತೆ ಅವರ ದೇಹಕ್ಕೆ ಬೀಕವಾಗಿ ಮೂರು-ನಾಲ್ಕು ಬಾರಿ ಗುಂಡು ಹಾರಿಸಿದ.

ಇದನ್ನು ನೋಡುತ್ತಿರುವಾಗ ಭೂಷಣ್, ಏನು ಆಗಲ್ಲ, ಧೈರ್ಯವಾಗಿರು ಎಂದು ನಮಗೆ ಧೈರ್ಯ ತುಂಬುತ್ತಿದ್ದರು. ಉಗ್ರರು ಪತಿಯ ಮೇಲೆ ಗುಂಡಿನ ದಾಳಿ ಮಾಡಿದ ಬಳಿಕ ನಾನು ತಲೆ ಎತ್ತಲೇ ಇಲ್ಲ. ಮಗುವನ್ನು ಬಚ್ಚಿಟ್ಟುಕೊಂಡೆ. ನನಗೆ ಬೇಕಾದರೆ ಗುಂಡು ಹೊಡೆಯಲಿ ಮಗುವಿಗೆ ಏನು ಆಗದೇ ಇರಲಿ ಎಂದು ಆತನನ್ನು ಕಾಪಾಡಲು ಮುಂದಾದೆ. ಉಗ್ರರು ಪತಿಯ ತಲೆಗೆ ಗುಂಡು ಹಾರಿಸಿದ್ದರು. ನಾನು ವೈದ್ಯೆಯಾಗಿರುವ ಕಾರಣ ಭೂಷಣ್ ಇನ್ನು ಬದುಕುವುದಿಲ್ಲ ಎನ್ನುವುದು ಗೊತ್ತಾಯಿತು. ಹೀಗಾಗಿ ನನ್ನ ಮೂರು ವರ್ಷದ ಮಗುವನ್ನು ಉಳಿಸಲು ನಾನು ಅಲ್ಲಿಂದ ಓಡಿಕೊಂಡು ಬಂದೆ ಎಂದು ಹೇಳಿ ಭಾವುಕರಾದರು.

ನಮ್ಮ ಟೆಂಟ್ ಬಳಿ ಬಂದಾಗ ನಾನು ಮಗುವನ್ನು ಬಚ್ಚಿಟ್ಟುಕೊಂಡೆ.ಸಣ್ಣ ಮಗು ಇದೆ ಬಿಟ್ಟುಬಿಡಿ ಅಂತ ಕೈ ಮುಗಿದು ನಮ್ಮನ್ನು ಏನು ಮಾಡಬೇಡಿ ಎಂದು ಬೇಡಿಕೊಂಡೆ ನನ್ನ ಪತಿ ಭೂಷಣ್ ಮೇಲೆ ಶೂಟ್ ಮಾಡಿ ಹೋದ. ಉಗ್ರ ಹೋಗುತ್ತಿದ್ದಂತೆ ಅಲ್ಲಿದ್ದವರು ಓಡಿ ಹೋಗಲು ಮುಂದಾದರು. ನಾನು ಮಗುವನ್ನು ಎತ್ತಿಕೊಂಡು ಓಡಲು ಆರಂಭಿಸಿದೆ. ನಾನು ಓಡಿ ಬರುವಾಗ ಅಲ್ಲಿ ಹೆಣಗಳ ರಾಶಿ ಇತ್ತು.

ನಮ್ಮನ್ನು ಅಟ್ಟಿಸಿಕೊಂಡು ಬಂದು ದಾಳಿ ಮಾಡಬಹುದು ಎಂಬ ಭಯದಿಂದ ನಾನು ಮಗುವನ್ನು ಎತ್ತಿಕೊಂಡು ಓಡತೊಡಗಿದೆ. ಈ ವೇಳೆ ಹಲವು ಮಂದಿ ಓಡಿಕೊಂಡು ಬರುತ್ತಿದ್ದರು. ಕೊನೆಗೆ ಕುದುರೆ ಸಿಕ್ಕಿತು. ಕುದುರೆಯಲ್ಲಿ ಕುಳಿತು ಸಿಆ‌ರ್ ಪಿಎಫ್ ಮೆಸ್‌ಗೆ ಬಂದೆ ಎಂದು ಕಣ್ಣೀರು ಹಾಕಿದರು.

RELATED ARTICLES

Latest News