ಮದುಬನಿ(ಬಿಹಾರ), ವಿ.24– ಭಾರತದ ಆತ್ಮದ ಮೇಲೆ ದಾಳಿ ನಡೆಸಿರುವ ಪ್ರತಿಯೊಬ್ಬ ಉಗ್ರರನ್ನು ಹುಡಕಿ ಹುಡುಕಿ ಹೊಡೆದು ಮಣ್ಣಿನಲ್ಲಿ ಹೂತು ಹಾಕುತ್ತೇವೆ. ಕಲ್ಪನೆಗೂ ಮೀರಿದ ಶಿಕ್ಷೆಯನ್ನು ಕೊಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ನೇರಾನೇರ ಎಚ್ಚರಿಕೆ ಕೊಟ್ಟಿದ್ದಾರೆ.
ದೇಶದ ಒಳಗಡೆ ಮೋದಿಯವರ ಭಾಷಣ ಹಿಂದಿಯಲ್ಲಿರುತ್ತದೆ. ಆದರೆ ಉಗ್ರರಿಗೆ ಎಚ್ಚರಿಕೆ ನೀಡುವಾಗ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕಟು ಸಂದೇಶ ರವಾನಿಸಿದ್ದು ವಿಶೇಷವಾಗಿತ್ತು.ಜಮ್ಮು-ಕಾಶ್ಮೀರದ ಪುಹಲ್ಲಾಮ್ ನಲ್ಲಿ ಕಳೆದ ಮಂಗಳವಾರ ನಡೆದ ಉಗ್ರರ ದಾಳಿಯ ನಂತರ ಮೊದಲ ಬಾರಿಗೆ ಪ್ರಧಾನಿಯವರಿಂದ ಈ ಎಚ್ಚರಿಕೆ ಸಂದೇಶ ಬಂದಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.
ಇದು ಕೇವಲ ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲ, ಭಾರತದ ಆತ್ಮದ ಮೇಲೆ ನಡೆದಿರುವ ದಾಳಿಯಾಗಿದೆ. ಬಿಹಾರದ ನೆಲದಲ್ಲಿ ನಿಂತು ನಾನು ಹೇಳುತ್ತಿದ್ದೇನೆ. ಅಮಾಯಕರನ್ನು ಹತ್ಯೆ ಗೈದಿರುವ ಉಗ್ರರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ತಕ್ಕಶಾಸ್ತಿ ಆಗಲಿದೆ ಎಂದು ಗುಡುಗಿದರು.ಬಿಹಾರದ ಮದುಬನಿಯಲ್ಲಿ ನಡೆದ ಪ್ರಧಾನಮಂತ್ರಿ ಆವಾಜ್ ಯೋಜನೆ ಮತ್ತು ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುಹಲ್ಟಾಮ್ ಘಟನೆಯ ನಂತರ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೋದಿಯವರು, ನಾನು ಈ ಜಗತ್ತಿಗೆ ಸ್ಪಷ್ಟವಾದ ಸಂದೇಶ ಕೊಡಲು ಬಯಸುತ್ತೇನೆ.ಅಮಾಯಕರನ್ನು ಕೊಂದಿರುವವರಿಗೆ ಮುಟ್ಟಿ ನೋಡಿಕೊಳ್ಳುವಂತಹ ಶಿಕ್ಷೆಯಾಗಲಿದೆ. ಪುಹಲ್ಯಾಮ್‌ನಲ್ಲಿ ದಾಳಿ ಮಾಡಿದವರು ಮತ್ತು ಸಂಚು ರೂಪಿಸಿದವರು ಕಲ್ಪನೆಗೂ ಮೀರಿದ ರೀತಿಯಲ್ಲಿ ಶಿಕ್ಷೆಯಾಗುತ್ತದೆ ಎಂದು ಗುಡುಗಿದರು.
ಬಿಹಾರದ ನೆಲ ಶೌರ್ಯ ಮತ್ತು ಸಾಹಸಕ್ಕೆ ಹೆಸರುವಾಸಿಯಾಗಿದೆ. ನಾನು ಈ ನೆಲದ ಮೇಲೆ ನಿಂತು ಇಡೀ ಜಗತ್ತಿಗೆ ಸಂದೇಶ ಕೊಡುತ್ತೇನೆ. ಭಾರತ ಪ್ರಜೆಯೂ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಹುಡುಕಿಸಿ ಪತ್ತೆಹಚ್ಚುತ್ತದೆ. ಅವರಿಗೆ ಶಿಕ್ಷೆಯಾಗುವುದರಲ್ಲಿ ಯಾವ ಅನುಮಾನವೂ ಬೇಡ ಎಂದು ಅಭಯ ನೀಡಿದರು.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಯಾಮ್‌ನಲ್ಲಿ ಭಯೋತ್ಪಾದಕರು ಅಮಾಯಕ ನಾಗರಿಕರನ್ನು ಹತ್ಯೆ ಮಾಡಿದ್ದರಿಂದ ಇಡೀ ರಾಷ್ಟ್ರವು ದುಃಖಿತವಾಗಿದೆ. 140 ಕೋಟಿ ಭಾರತೀಯರ ಇಚ್ಛಾಶಕ್ತಿ ಈಗ ಭಯೋತ್ಪಾದನೆಯ ಮಾಸ್ಟರ್ ಗಳ ಬೆನ್ನು ಮುರಿಯಲಿದೆ ಎಂದು ಗುಡುಗಿದರು.
ಈ ಸಂಕಲ್ಪದಲ್ಲಿ ಇಡೀ ರಾಷ್ಟ್ರವು ಒಂದಾಗಿದೆ. ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬರೂ ನಮ್ಮೊಂದಿಗಿದ್ದಾರೆ. ವಿವಿಧ ದೇಶಗಳ ಜನರಿಗೆ ಮತ್ತು ಅವರ ನಾಯಕರು ನಮ್ಮೊಂದಿಗೆ ನಿಂತಿದ್ದಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದರು.
ಉಗ್ರರನ್ನು ಹೆಡೆಮುರಿ ಕಟ್ಟಿ ನಮ್ಮ ದೇಶದಿಂದ ಹೊರ ಹಾಕುವ ಸಮಯ ಬಂದಿದೆ. ಭಾರತೀಯರೆಲ್ಲರೂ ಒಗ್ಗಟ್ಟಿನಲ್ಲಿದ್ದರೆ ಉಗ್ರರ ಸೊಂಟ ಮುರುಯುವುದೇನೂ ಕಷ್ಟವಲ್ಲ, ಈ ಭೂಮಿಯಿಂದಲೇ ಅವರನ್ನು ಹೊರಗಟ್ಟುತ್ತೇವೆ ಎಂದು ಆಕ್ರೋಶಭರಿತರಾಗಿ ನುಡಿದರು.ಭಯೋತ್ಪಾದನೆ ಎದುರು ಭಾರತ ಎಂದೂ ತಲೆ ಬಾಗುವುದಿಲ್ಲ, ಭಾರತದಿಂದ ಭಯೋತ್ಪಾದನೆ ತೊಲಗಿಸುವವರೆಗೂ ಬಿಡುವುದಿಲ್ಲ. ನಿರೀಕ್ಷೆಯೇ ಮಾಡಿರದ ಸಾವು ಆ ಉಗ್ರರಿಗೆ ಬರಲಿದೆ ಎಂದು ಹೇಳಿದರು.
ಏಪ್ರಿಲ್ 22ರಂದು ಪಹಲ್ಟಾಮ್‌ನಲ್ಲಿ ಭಯೋತ್ಪಾದಕರು ಅಮಾಯಕ ನಾಗರಿಕರನ್ನು ಕೊಂದ ಕ್ರೂರತೆಯಿಂದ ಇಡೀ ರಾಷ್ಟ್ರವು ದುಃಖಿತವಾಗಿದೆ. ಇಡೀ ದೇಶವು ಎಲ್ಲಾ ಸಂತ್ರಸ್ತ ಕುಟುಂಬಗಳ ದುಃಖದಲ್ಲಿ ಜೊತೆಗಿದೆ. ಚಿಕಿತ್ಸೆ ಪಡೆಯುತ್ತಿರುವ ಕುಟುಂಬ ಸದಸ್ಯರು ಬೇಗನೆ ಗುಣಮುಖರಾಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಸ್ನೇಹಿತರೇ, ಈ ಭಯೋತ್ಪಾದಕ ದಾಳಿಯಲ್ಲಿ, ಯಾರೋ ಒಬ್ಬರು ತಮ್ಮ ಮಗನನ್ನು ಕಳೆದುಕೊಂಡರು, ಯಾರೋ ಒಬ್ಬರು ತಮ್ಮ ಸಹೋದರನನ್ನು ಕಳೆದುಕೊಂಡರು, ಯಾರೋ ಒಬ್ಬರು ತಮ್ಮ ಸಂಗಾತಿಯನ್ನು ಕಳೆದುಕೊಂಡರು, ಅವರಲ್ಲಿ ಕೆಲವರು ಬಂಗಾಳಿ ಮಾತನಾಡುತ್ತಿದ್ದರು. ಕೆಲವರು ಕನ್ನಡ ಮಾತನಾಡುತ್ತಿದ್ದರು. ಕೆಲವರು ಮರಾಠಿ ಮಾತನಾಡುತ್ತಿದ್ದರು. ಆದರೆ ಅವರ ಸಾವಿಗೆ ಆಕ್ರೋಶ ಮಾತ್ರ ಕಾರ್ಗಿಲ್‌ನಿಂದ ಕನ್ಯಾಕುಮಾರಿವರೆಗೂ ಒಂದೇ ರೀತಿ ಆಗಿದೆ ಎಂದರು. ಇದಕ್ಕೂ ಮುನ್ನ ಮೋದಿಯವರು ಪಹಲ್ಯಾಮ್ ನಲ್ಲಿ ಮಡಿದವರಿಗೆ ಎರಡು ನಿಮಿಷಗಳ ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಿದರು.