ಚಾಮರಾಜನಗರ,ಏ.24– ಪುಲ್ವಾಮಾ ದಾಳಿಯಾದ ನಂತರ ಅತ್ಯಂತ ಎಚ್ಚರಿಕೆಯಿಂದ ಇರಬೇಕಿತ್ತು. ಘಟನೆಯಾದ ಬಳಿಕ ಕ್ರಮ ಕೈಗೊಳ್ಳುವುದೇ ಬೇರೆ, ದುರ್ಘಟನೆಗಳೇ ನಡೆಯದಂತೆ ಮುಂಜಾಗ್ರತೆ ವಹಿಸುವುದು ಮುಖ್ಯವಾಗಿತ್ತು. ಇದರಲ್ಲಿ ಕೇಂದ್ರಸರ್ಕಾರ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಧಿ ಮೀರಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿಗರ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು.ಜಮು-ಕಾಶೀರದ ಅನಂತ್‌ನಾಗ್ ಜಿಲ್ಲೆಯಲ್ಲೇ ಈ ಮೊದಲು ಪುಲ್ವಾಮ ದಾಳಿಯಾಗಿ 40 ಮಂದಿ ಯೋಧರು ಜೀವ ಕಳೆದುಕೊಂಡಿದ್ದರು. ಅದರ ಬಳಿಕ ಅತ್ಯಂತ ಎಚ್ಚರಿಕೆಯಿಂದಿರಬೇಕಿತ್ತು. ಆದರೆ ಭದ್ರತಾ ವೈಫಲ್ಯ ಹಾಗೂ ಮುಂಜಾಗ್ರತಾ ಕೊರತೆಯಿಂದಾಗಿ ದೇಶದ 26 ಮಂದಿ ನಾಗರಿಕರು ಜೀವ ಕಳೆದುಕೊಳ್ಳುವಂತಾಯಿತು.
ಭಯೋತ್ಪಾದಕ ದಾಳಿ ನಡೆಸಿದ ಉಗ್ರರನ್ನು ಹುಡುಕಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಲ್ಲಿ ಯಾವುದೇ ಜಾತಿ, ಧರ್ಮ ಮುಖ್ಯವಲ್ಲ. ದೇಶದ ಭದ್ರತೆ ಹಾಗೂ ನಾಗರೀಕರ ಸುರಕ್ಷತೆ ಪ್ರಮುಖವಾಗಿದೆ. ಮತ್ತೆ ಇಂತಹ ದುರ್ಘಟನೆಗಳು ಮರುಕಳಿಸದಂತೆ ನಿಗಾ ವಹಿಸಬೇಕು. ಘಟನೆಯಾದ ಬಳಿಕ ಕ್ರಮ ಕೈಗೊಳ್ಳುವುದು ಬೇರೆಯ ವಿಚಾರ. ಆದರೆ ಪುಲ್ವಾಮ ಬಳಿಕ ವಿಶ್ರಮಿಸುವುದು ಸರಿಯಲ್ಲ ಎಂದರು.
ಪಹಲ್ಗಾಮ್ ದಾಳಿಯಲ್ಲಿ ಹತ್ಯೆಯಾದ ರಾಜ್ಯದ ಮೂವರಿಗೂ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಮಂಜುನಾಥ್‌ರಾವ್, ಭರತ್ ಭೂಷಣ್ ಅವರಿಗೆ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಆಂಧ್ರಪ್ರದೇಶದ ನಲ್ಲೂರಿನ ಮಧುಸೂದನ್ ಬೆಂಗಳೂರಿನಲ್ಲೇ ನೆಲೆಸಿದ್ದರು. ಹೀಗಾಗಿ ಅವರನ್ನೂ ಸೇರಿದಂತೆ ಮೂವರಿಗೂ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರದ ನಿರ್ಲಕ್ಷ್ಯ:
ರಾಜ್ಯದಲ್ಲಿ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲು ರಾಜ್ಯಸರ್ಕಾರ ಸಿದ್ಧವಿದೆ. ಕೇಂದ್ರ ಸರ್ಕಾರ ಅಗತ್ಯ ಪೂರ್ವಾನುಮತಿಗಳನ್ನು ನೀಡಿದ ತಕ್ಷಣವೇ ಕಾಮಗಾರಿ ಆರಂಭವಾಗಲಿದೆ. ಇಂದು ಒಪ್ಪಿಕೊಂಡರೆ ನಾಳೆಯಿಂದಲೇ ಕಾಮಗಾರಿ ಆರಂಭವಾಗುತ್ತದೆ ಎಂದರು.ತಾವು ದೆಹಲಿಗೆ ಅನೇಕ ಬಾರಿ ಭೇಟಿ ನೀಡಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಷಾ ಸೇರಿದಂತೆ ಹಲವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಅನುದಾನವನ್ನೇ ಕೊಡುತ್ತಿಲ್ಲ. ಭದ್ರಾ ಮೇಲ್ದಂಡೆಗೆ 5,400 ಕೋಟಿ ರೂ. ನೀಡುವುದಾಗಿ 2023-24ರ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಇಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜು ಬೊಮಾಯಿ ಅದನ್ನು ತಮ ಬಜೆಟ್‌ನಲ್ಲಿ ಸೇರಿಸಿ ಕೇಂದ್ರಕ್ಕೆ ಧನ್ಯವಾದ ಹೇಳಿದರು. ಆದರೆ ಈವರೆಗೂ ಒಂದು ರೂಪಾಯಿ ಹಣ ಬಂದಿಲ್ಲ ಎಂದು ಆರೋಪಿಸಿದರಲ್ಲದೆ, ಇದನ್ನು ನೋಡಿದರೆ ದ್ವೇಷದ ರಾಜಕಾರಣವಿದ್ದಂತಿದೆ ಎಂದರು.
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ನಡೆಯುತ್ತಿದ್ದು, ಬಜೆಟ್‌ನಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಜೊತೆಗೆ ಈ ಭಾಗದ ಸಮಸ್ಯೆಗಳ ಬಗ್ಗೆ ಕುರಿತು ಚರ್ಚಿಸುವುದಾಗಿ ಹೇಳಿದರು.