ನವದೆಹಲಿ,ಏ.24– ಭಾರತದ ರಾಜತಾಂತ್ರಿಕ ಕ್ರಮಗಳಿಂದ ಬೆಚ್ಚಿ ಬಿದ್ದಿರುವ ನೆರೆ ರಾಷ್ಟ್ರ ಪಾಕಿಸ್ತಾನ ಭವಿಷ್ಯದಲ್ಲಿ ಸಂಭವಿಸಬಹುದಾದ ದಾಳಿಯನ್ನು ಎದುರಿಸಲು ಅರಬ್ಬೀ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆಯನ್ನು ನಡೆಸಿದೆ. ಜಮು ಮತ್ತು ಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ನರಹತ್ಯೆಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ(ಏರ್ ಸ್ಟ್ರೈಕ್), ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಸೇನಾ ಕಾರ್ಯಾಚರಣೆ ನಡೆಸಲು ಸನ್ನದ್ಧವಾಗಿದೆ ಎಂದು ಹೇಳಲಾಗುತ್ತಿದೆ.
ಈ ಬೆಳವಣಿಗೆಗಳಿಂದ ಬೆಚ್ಚಿ ಬಿದ್ದಿರುವ ಪಾಕಿಸ್ತಾನ 480 ಕಿ.ಮೀ ಗುರಿ ಸಾಮರ್ಥ್ಯ ಹೊಂದಿರುವ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ವರದಿಯಾಗಿದೆ.ಕರಾಚಿಯಲ್ಲಿರುವ ಅರಬ್ಬೀ ಸಮುದ್ರದಲ್ಲಿ ಯಶಸ್ವಿಯಾಗಿ ಕ್ಷಿಪಣಿಯನ್ನು ಪರೀಕ್ಷೆ ನಡೆಸಿದ್ದು, ಭಾರತದ ಯಾವುದೇ ದಾಳಿಯನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ ಎಂಬ ಸಂದೇಶ ರವಾನಿಸಲು ಇದನ್ನು ನಡೆಸಲಾಗಿದೆ ಎಂದು ಹೇಳಲಾಗಿದೆ.
ಕರಾಚಿಗೆ ಹೊಂದಿಕೊಂಡಿರುವ ಕರಾವಳಿ ತೀರಪ್ರದೇಶದಲ್ಲಿ ಸತತವಾಗಿ ಪರೀಕ್ಷಾರ್ಥ ಕ್ಷಿಪಣಿ ನಡೆಸುವಂತೆ ಸೇನಾ ಮುಖ್ಯಸ್ಥರು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗುರುವಾರ ಮತ್ತು ಶುಕ್ರವಾರ ಆರ್ಥಿಕ ವಲಯದೊಳಗೆ ಕ್ಷಿಪಣಿ ಪರೀಕ್ಷೆಯನ್ನು ನಡೆಸುವಂತೆ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಭಾರತದ ಮಿಲಿಟರಿ ಕಾರ್ಯಾಚರಣೆಯ ಪ್ರತಿಯೊಂದು ಬೆಳವಣಿಗೆಗಳ ಮೇಲೆ ತೀವ್ರ ನಿಗಾವಹಿಸಿರುವ ಪಾಕಿಸ್ತಾನ ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆಯನ್ನು ಸನ್ನದ್ದವಾಗಿಟ್ಟಿದೆ. ಈ ಹಿಂದೆ ಭಾರತ ಪಾಕ್ ಆಕ್ರಮಿತ ಕಾಶೀರದಲ್ಲಿರುವ ಬಾಲ್‌ಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇದರಲ್ಲಿ ನೂರಾರು ಭಯೋತ್ಪಾದಕರು ಸಾವನ್ನಪ್ಪಿದ್ದರು.
ಸಭೆ ನಡೆಸಿದ ಅಧಿಕಾರಿಗಳು:
ಭಾರತದ ಕ್ರಮಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಪಾಕಿಸ್ತಾನದ ಉನ್ನತ ನಾಗರಿಕ ಸಂಸ್ಥೆಯು ಪ್ರಧಾನಿ ಶಹಬಾಜ್ ಷರೀಫ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ನಡೆಸಿದೆ ಎಂದು ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ತಿಳಿಸಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ನೀಡಿರುವ ಪ್ರತಿಕ್ರಿಯೆಯಲ್ಲಿ, ಅನಂತನಾಗ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಪ್ರವಾಸಿಗರು ಸಾವನ್ನಪ್ಪಿದ ಬಗ್ಗೆ ನಮಗೆ ಬೇಸರವಿದೆ, ಮೃತರ ಕುಟುಂಬಗಳಿಗೆ ನಮ ಸಂತಾಪ ಸೂಚಿಸುತ್ತೇವೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ ಎಂದು ಬರೆದಿದ್ದಾರೆ.