ಬೆಂಗಳೂರು,ಏ.24– ಜಮ್ಮುಕಾಶ್ಮೀರದ ಪಹಲ್ಯಾಮ್‌ನಲ್ಲಿ ನಡೆದ ಭಯೋತ್ಪಾದಕರ ಪೈಶಾಚಿಕ ಕೃತ್ಯವನ್ನು ಖಂಡಿಸಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥಸ್ವಾಮಿ, ನಾವು ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸಲೇಬೇಕು ಎಂದು ಪ್ರತಿಪಾದಿಸಿದ್ದಾರೆ.
ಇದು ಸಾರ್ವಭೌಮತೆ ಮೇಲೆ ನಡೆದಿರುವ ದಾಳಿ. ಉಗ್ರರನ್ನು ಮಟ್ಟ ಹಾಕಲು ಸರ್ಕಾರ ಏನೆಲ್ಲ ಸಾಧ್ಯವೋ ಅದನ್ನು ಮಾಡಬೇಕು ಎಂದಿದ್ದಾರೆ. 26 ಮಂದಿ ಸಾವು ಆಘಾತ ನೀಡಿದೆ. ಪ್ರೀತಿಪಾತ್ರರ ಕಳೆದುಕೊಂಡ ಕುಟುಂಬದವರಿಗೆ ಸಂತಾಪ ಸೂಚಿಸಿ, ಗಾಯಗೊಂಡವರು ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಒಂದು ಕಾಲದಲ್ಲಿ ಜಮ್ಮುಕಾಶ್ಮೀರ ಅಶಾಂತಿಯ ಬೀಡಾಗಿತ್ತು. ಮೋದಿ ನಿರ್ಧಾರಗಳಿಂದಾಗಿ ಕಳೆದ ಹಲವು ವರ್ಷಗಳಿಂದ ಶಾಂತಿ ನೆಲೆಸಿದೆ. ಇದನ್ನು ಸಹಿಸದ ಉಗ್ರರು ಮನುಷ್ಯತ್ವ ಮರೆತು ಅತ್ಯಂತ ಬರ್ಬರವಾಗಿ ಗುಂಡಿನ ದಾಳಿ ನಡೆಸಿರುವುದನ್ನು ಸಹಿಸಲು ಸಾಧ್ಯವಿಲ್ಲ. ಉಗ್ರರನ್ನು ಮಟ್ಟ ಹಾಕಲು ಸರ್ಕಾರ ಏನೆಲ್ಲಾ ಸಾಧ್ಯವೋ ಅದನ್ನೆಲ್ಲ ಮಾಡಬೇಕು. ಅದಕ್ಕೆ ಸಹಕಾರ ಕೊಡಬೇಕು ಎಂದು ಶ್ರೀಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.