ನವದೆಹಲಿ/ಬೆಂಗಳೂರು,ಏ.24- ಉಗ್ರರ ಭೀಬತ್ಸ್ಯ ದಾಳಿಯಲ್ಲಿ ಬಲಿಯಾದ 26 ಜನರ ಪಾರ್ಥಿವ ಶರೀರಗಳು ಅವರ ಹುಟ್ಟೂರಿಗೆ ತಲುಪಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ.
ವಿಶೇಷ ವಿಮಾನಗಳ ಮೂಲಕ ವಿವಿಧ ರಾಜ್ಯಗಳಿಗೆ ಮೃತದೇಹಗಳನ್ನು ಕಳುಹಿಸಿಕೊಡಲಾಗಿದ್ದು, ಜಿಲ್ಲಾಡಳಿತದಿಂದ ಆಯಾ ಜಿಲ್ಲೆಗಳಲ್ಲಿ ವಿಶೇಷ ವ್ಯವಸ್ಥೆಯನ್ನೂ ಕೂಡ ಮಾಡಿ ಗೌರವ ಸಲ್ಲಿಸಲಾಗಿದ್ದು, ಹಲವಾರು ರಾಜಕೀಯ ಮುಖಂಡರು, ರಕ್ಷಣಾಪಡೆಯ ಸಿಬ್ಬಂದಿಗಳು ಸೇರಿದಂತೆ ಹಲವಾರು ಗಣ್ಯರು ಅಂತಿಮದರ್ಶನ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ದೇಶದಲ್ಲೇ ಈ ಘಟನೆ ಭಾರಿ ಆತಂಕ ಮೂಡಿಸಿದ್ದು, ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ವಿಶ್ವನಾಯಕರು ಇದನ್ನು ಕಟುವಾಗಿ ಟೀಕಿಸಿರುವ ನಡುವೆಯೇ ಜನರಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕಳೆದ ರಾತ್ರಿ ಶ್ರೀನಗರದಿಂದ ವಿಶೇಷ ವಿಮಾನಗಳ ಮೂಲಕ ಪಾರ್ಥಿವ ಶರೀರಗಳನ್ನು ಕಳುಹಿಸಿಕೊಡಲಾಗಿದ್ದು, ಅದರಲ್ಲಿ ಕೆಲವು ಕೇಂದ್ರ ಮಂತ್ರಿಗಳು ಕೂಡ ಕುಟುಂಬ ಸದಸ್ಯರ ಜೊತೆಗೆ ಭಾಗಿಯಾಗಿದ್ದರು.
ಇಂದು ಮುಂಜಾನೆ 3.45 ರ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದ ಬೆಂಗಳೂರಿನ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಮತ್ತು ಶಿವಮೊಗ್ಗ ಮಂಜುನಾಥ್‌ರಾವ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.
ನಂತರ ಆ್ಯಂಬುಲೆನ್‌್ಸ ಮೂಲಕ ಭರತ್ ಭೂಷಣ್ ಅವರ ಪಾರ್ಥಿವ ಶರೀರವನ್ನು ಮತ್ತಿಕೆರೆಗೆ ತಂದಾಗ ಅಲ್ಲಿ ಸೇರಿದ್ದ ನೂರಾರು ಜನರು ಕಂಬನಿ ಮಿಡಿದರು. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ವೃದ್ಧ ತಂದೆ-ತಾಯಿ ಹಾಗೂ ಪತ್ನಿ ಡಾ.ಸುಜಾತ ಘಟನೆಯ ಆಘಾತಕ್ಕೊಳಗಾಗಿದ್ದರು. ಸಿಎಂ ಸಿದ್ದರಾಮಯ್ಯ, ಶಾಸಕ ರಾಮಲಿಂಗಾರೆಡ್ಡಿ, ಶಾಸಕ ಮುನಿರತ್ನ, ಅಶ್ವತ್ಥನಾರಾಯಣ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಅಂತಿಮ ದರ್ಶನ ಪಡೆದರು.
ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್‌ರಾವ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆ್ಯಂಬುಲೆನ್‌್ಸ ಮೂಲಕ ತರಲಾಯಿತು. ಘಟನೆಯನ್ನು ಖಂಡಿಸಿ ಇಂದು ಅರ್ಧದಿನ ಶಿವಮೊಗ್ಗ ಬಂದ್‌ಗೆ ಕರೆ ನೀಡಲಾಗಿತ್ತು. ಬಹುತೇಕ ಎಲ್ಲೆಡೆ ಅಂಗಡಿಮುಂಗಟ್ಟುಗಳು ಮುಚ್ಚಲಾಗಿದ್ದು, ಮೌನ ಆವರಿಸಿತ್ತು.
ಅವರ ಪಾರ್ಥಿವ ಶರೀರ ಶಿವಮೊಗ್ಗ ನಗರವನ್ನು ಪ್ರವೇಶಿಸುತ್ತಿದ್ದಂತೆ ಸಾರ್ವಜನಿಕರು ಪಾಕಿಸ್ತಾನ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಮಂಜುನಾಥ್‌ರ ಪತ್ನಿ ಪಲ್ಲವಿ ಮತ್ತು ಅವರ ಪುತ್ರ ಅಭಿಜಯ ಅವರೂ ಕೂಡ ಪಾರ್ಥಿವ ಶರೀರದೊಂದಿಗೆ ಮನೆ ತಲುಪುತ್ತಿದ್ದಂತೆ ನೆರೆದಿದ್ದ ಕುಟುಂಬಸ್ಥರ ದುಃಖ ಕಟ್ಟೆಯೊಡೆಯಿತು.ಮನೆಯಲ್ಲಿ ಸಂಭ್ರಮದಿಂದ ತೆರಳಿದ ಮಗ ಇಂದು ಶವವಾಗಿ ಬಂದಿರುವುದನ್ನು ಕಂಡು ಕಣ್ಣೀರ ಕೋಡಿ ಹರಿಸಿದರು.
ಉಗ್ರರ ದಾಳಿಯಲ್ಲಿ ಬಲಿಯಾದ ಬೆಂಗಳೂರು ರಾಮಮೂರ್ತಿನಗರ ನಿವಾಸಿ ಸಾಫ್‌್ಟವೇರ್ ಎಂಜಿನಿಯರ್ ಮಧುಸೂದನ್‌ರಾವ್ ಅವರ ಪಾರ್ಥಿವ ಶರೀರವನ್ನು ಚೆನ್ನೈಗೆ ತರಲಾಯಿತು. ಅಲ್ಲಿ ಎಐಡಿಎಂಕೆ ಹಾಗೂ ಕಾಂಗ್ರೆಸ್ ನಾಯಕರು ಅದನ್ನು ಸ್ವೀಕರಿಸಿ ಅಂತಿಮ ನಮನ ಸಲ್ಲಿಸಿದ ನಂತರ ಅವರ ಹುಟ್ಟೂರು ಆಂಧ್ರಪ್ರದೇಶದ ನೆಲ್ಲೂರಿಗೆ ಆ್ಯಂಬುಲೆನ್‌್ಸ ಮೂಲಕ ಕಳುಹಿಸಿಕೊಡಲಾಯಿತು.
ತಂದೆ-ಮಗ ಸೇರಿ ಗುಜರಾತಿನ ಮೂವರಿಗೆ ಅಂತಿಮ ನಮನ
ಪಹಲ್ಗಾಮ್‌ನ ಉಗ್ರರ ದಾಳಿಯಲ್ಲಿ ಗುಜರಾತಿನ ಮೂರು ಮಂದಿ ಮೃತಪಟ್ಟಿದ್ದು, ಅವರ ಪಾರ್ಥಿವ ಶರೀರಗಳು ಇಂದು ಅಹಮದಾಬಾದ್ ಮತ್ತು ಸೂರತ್‌ಗೆ ತಲುಪಿವೆ.ಸೂರತ್‌ನ ಶೈಲೇಶ್ ಕಲಾತಿಯ, ಭಾವನಗರ್‌ನ ನಿವಾಸಿಗಳಾದ ಯತೀಶ್ ಪರ್ಮಾರ್ ಮತ್ತು ಅವರ ಪುತ್ರ ಸಮಿತ್ ಅವರು ಜಮು-ಕಾಶೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದವರು.ಧಾರ್ಮಿಕ ಸಂತ ಮುರಾರಿ ಬಾಬು ಅವರ ಪ್ರವಚನ ಕೇಳಲು ಜಮು-ಕಾಶೀರಕ್ಕೆ ಭಾವನಗರ್‌ದಿಂದ 19 ಮಂದಿ ತೆರಳಿದ್ದರು.
ಏ.16ರಂದು ಪ್ರವಚನ ಮುಗಿಸಿಕೊಂಡು ಯತೀಶ್ ಪರ್ಮಾರ್ ಕುಟುಂಬ ಸಮೇತರಾಗಿ ಪಹಲ್ಗಾಮ್ ಜಿಲ್ಲೆಯ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ಗುಂಡಿನ ದಾಳಿಯಲ್ಲಿ ಯತೀಶ್ ಮತ್ತು ಅವರ ಮಗ ಸಮಿತ್ ಇಬ್ಬರೂ ಹತ್ಯೆಯಾಗಿದ್ದಾರೆ. ಅವರ ದೇಹಗಳನ್ನು ಮುಂಬೈನಿಂದ ಅಹಮದಾಬಾದ್ ವಿಮಾನನಿಲ್ದಾಣಕ್ಕೆ ಕರೆತರಲಾಯಿತು. ಗುಜರಾತ್‌ನ ಆರೋಗ್ಯ ಸಚಿವ ಹೃಷಿಕೇಷ್ ಪಟೇಲ್ ಹಾಗೂ ರಾಜ್ಯ ಆರೋಗ್ಯ ಸಚಿವ ಹರ್ಷ ಸಾಂಗ್ವಿ ಅವರು ವಿಮಾನನಿಲ್ದಾಣದಲ್ಲಿ ಗೌರವ ನಮನ ಸಲ್ಲಿಸಿದರು.
ಅಲ್ಲಿಂದ ಪಾರ್ಥಿವ ಶರೀರಗಳನ್ನು ಭಾವನಗರ್‌ಗೆ ತೆಗೆದುಕೊಂಡು ಹೋಗಲಾಯಿತು. ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭಾಗವಹಿಸಿದ್ದರು.ಕೇಂದ್ರ ಸಚಿವ ಸಿ.ಆರ್.ಪಾಟೀಲ್ ಅವರು ಕಲಾತಿಯ ಅವರ ಪಾರ್ಥಿವ ಶರೀರಕ್ಕೆ ಮುಂಬೈನಲ್ಲಿ ಅಂತಿಮ ನಮನ ಸಲ್ಲಿಸಿದ್ದಾರೆ. ಸೂರತ್‌ನ ವಿಮಾನನಿಲ್ದಾಣಕ್ಕೆ ಕಳೆದ ರಾತ್ರಿ ಅವರ ಪಾರ್ಥಿವ ಶರೀರವನ್ನು ತರಲಾಯಿತು.
ದಾಳಿಯಲ್ಲಿ ಕಲಾತಿಯ ಅವರ ಪತ್ನಿ ಮತ್ತು ಮಕ್ಕಳು ಬದುಕುಳಿದಿದ್ದಾರೆ.44 ವರ್ಷದ ಕಲಾತಿಯ ಸೂರತ್‌ನ ಚಿಕ್ಕುವಾಡಿ ನಿವಾಸಿಯಾಗಿದ್ದು, ನಾಲ್ಕು ವರ್ಷಗಳ ಹಿಂದೆ ಉದ್ಯೋಗದ ವರ್ಗಾವಣೆ ಸಲುವಾಗಿ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಕುಟುಂಬ ಸಮೇತರಾಗಿ ಜಮು-ಕಾಶೀರ ಪ್ರವಾಸಕ್ಕೆ ಹೋಗಿದ್ದಾಗ ದುರ್ಘಟನೆ ನಡೆದಿದೆ.
ಮನೀಶ್ ರಂಜನ್ ಅಂತ್ಯಕ್ರಿಯೆ
ಜಮು- ಕಾಶೀರ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಕೇಂದ್ರ ಗುಪ್ತದಳದ ಅಧಿಕಾರಿ ಮನೀಶ್ ರಂಜನ್ ಅವರ ಪಾರ್ಥಿವ ಶರೀರವನ್ನು ರಾಂಚಿಯ ವಿಮಾನನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಯಿತು.ವಿಮಾನನಿಲ್ದಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ್ ಮರಳ್ಳಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಹಾಜರಿದ್ದು, ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು. ಅಲ್ಲಿಂದ ಮನೀಶ್ ಅವರ ಹುಟ್ಟೂರು ಪ.ಬಂಗಾಳದ ಪುರುಲಿಯಾ ಜಿಲ್ಲೆಯ ಜಹ್ಲಾದ್ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಲಾಗಿದೆ.
ಉಗ್ರರ ದಾಳಿಯಲ್ಲಿ ಮೃತಪಟ್ಟ 26 ಮಂದಿಯಲ್ಲಿ ಮನೀಶ್ ರಂಜನ್ ಕೂಡ ಒಬ್ಬರಾಗಿದ್ದು, ಕೇಂದ್ರ ಗುಪ್ತದಳದಿಂದ ಹೈದ್ರಾಬಾದ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ವ್ಯಾಸಂಗದ ಅವಧಿಯುದ್ದಕ್ಕೂ ಮೆರಿಟ್ ವಿದ್ಯಾರ್ಥಿಯಾಗಿದ್ದ ರಂಜನ್ ಅತ್ಯಂತ ಸಜ್ಜನ, ಸ್ನೇಹಪ್ರಿಯ ಎಂದು ಹೆಸರಾಗಿದ್ದರು. ರಜಾಕಾಲದಲ್ಲಿ ಪ್ರವಾಸ ಹೋಗಿದ್ದ ಅವರು ಜಮು-ಕಾಶೀರದಿಂದ ಬಂದ ಬಳಿಕ ತಂದೆ-ತಾಯಿಯನ್ನು ವೈಷ್ಣೋದೇವಿ ದರ್ಶನಕ್ಕೆ ಕರೆದುಕೊಂಡು ಹೋಗುವ ಯೋಜನೆಯಲ್ಲಿದ್ದರು.
ಅವರ ತಂದೆ ಸರ್ಕಾರಿ ಹಿಂದಿ ಶಾಲೆಯ ಹೆಡ್‌ಮಾಸ್ಟರ್ ಆಗಿ ಇತ್ತೀಚೆಗಷ್ಟೇ ನಿವೃತ್ತರಾಗಿದ್ದರು.ಮನೀಶ್ ಅವರ ಸ್ನೇಹಿತ ಆದಿತ್ಯ ಶರ್ಮ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದರು. ಈ ರೀತಿಯ ನರಮೇಧವೊಂದರಲ್ಲಿ ಮನೀಶ್ ಜೀವಹಾನಿಯಾಗಲಿದೆ ಎಂದು ನಾವು ಭಾವಿಸಿರಲಿಲ್ಲ. ಭಯೋತ್ಪಾದನೆಗೆ ಧರ್ಮ ಇಲ್ಲ ಎಂದು ಜನ ಹೇಳುತ್ತಾರೆ. ಆದರೆ ಧರ್ಮದ ಕಾರಣಕ್ಕಾಗಿಯೇ ಅಮಾಯಕ ಜೀವಗಳು ಬಲಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದುರ್ಘಟನೆಯ ಭಾಗಿದಾರರು ಹಾಗೂ ಸಂಚುಕೋರರನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.