ನವದೆಹಲಿ,ಏ.26 – ಪೆಹಲ್ಗಾಮ್ ಭಯೋತ್ಪಾದನೆಯನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕೆಂದು ಆಗ್ರಹಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಾಯಕರ ಸಲಹೆಗಳನ್ನು ಪರಿಗಣಿಸಲು ಕೇಂದ್ರದ ಆಡಳಿತಾರೂಢ ಎನ್‌ಡಿಎ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಖ್ಯಾತ ವಕೀಲ ಮತ್ತು ರಾಜ್ಯ ಸಭಾ ಸಂಸದ ಕಪಿಲ್ ಸಿಬಲ್ ಅವರು, ಪಹಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಇಡೀ ಜಗತ್ತಿಗೆ ಒಗ್ಗಟ್ಟಿನ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದು ನಿರ್ಣಯ ಅಂಗೀಕರಿಸಬೇಕೆಂದು ಆಗ್ರಹಿಸಿದ್ದರು.
ಸರ್ಕಾರ ಹಾಗೂ ವಿಪಕ್ಷಗಳ ಸಂಸದರ ನಿಯೋಗಗಳನ್ನು ವಿವಿಧ ದೇಶಗಳಿಗೆ ರವಾನಿಸಿ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೇರಬೇಕು. ಅಮೆರಿಕ ನಿರ್ಬಂಧ ವಿಧಿಸುವಂತೆಯೇ ಪಾಕಿಸ್ತಾನದೊಂದಿಗೆ ವ್ಯಾಪಾರ ಹೊಂದಿರುವ ಎಲ್ಲ ಪ್ರಮುಖ ರಾಷ್ಟ್ರಗಳಿಗೂ ನಮ್ಮ ಮಾರುಕಟ್ಟೆಗೆ ಬರಲು ಸಾಧ್ಯವಿಲ್ಲ ಎಂಬ ಸಂದೇಶ ಸಾರಬೇಕು ಎಂದು ಆಗ್ರಹಿಸಿದ್ದರು.
ಭಾರತದ ಸಾರ್ವಭೌಮತ್ವದ ಮೇಲಿನ ದಾಳಿ ಆಗಿರುವುದರಿಂದ ಇಡೀ ದೇಶವು ನಿಮ್ಮೊಂದಿಗೆ ಇದೆ. ಈ ಕ್ಷಣದಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಈ ಕುರಿತು ಚರ್ಚೆ ನಡೆಸುವಂತೆ ಪ್ರಧಾನಿ ಅವರಿಗೆ ಸೂಚಿಸಲು ಬಯಸುತ್ತೇನೆ. ಇಡೀ ದೇಶವೇ ಒಗ್ಗಟ್ಟಾಗಿದ್ದು, ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ದೇಶದ ಭಾವನೆಯನ್ನು ವಿಶ್ವದ ಮುಂದೆ ವ್ಯಕ್ತಪಡಿಸಲು ಸಂಸತ್ತಿನಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಸಲಹೆ ನೀಡಿದ್ದರು.
ಈ ಆಗ್ರಹ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ಪದಾಧಿಕಾರಿಯೊಬ್ಬರು, ಸರ್ಕಾರ ಈ ಬಗ್ಗೆ ಚಿಂತನೆ ನಡೆಸಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಯಾವಾಗಲೂ ಸಾಮೂಹಿಕ ಏಕತೆಯೊಂದಿಗೆ ರಾಷ್ಟ್ರಕ್ಕಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿರುವುದರಿಂದ, ವಿಶೇಷವಾಗಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಬಿಕ್ಕಟ್ಟು ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ಪರಿಗಣನೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಶೀಘ್ರದಲ್ಲೇ ವಿಶೇಷ ಅಧಿವೇಶನಕ್ಕೆ ದಿನಾಂಕವನ್ನು ನಿರ್ಧರಿಸಲಿದ್ದು, ರಾಷ್ಟ್ರಪತಿಗಳು ಅನುಮೋದನೆ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಅಂದಿನ ಪ್ರಧಾನಿ ಜವಾಹರಲಾಲ್ ನೆಹರು 1962 ರಲ್ಲಿ ಚೀನಾದೊಂದಿಗಿನ ಯುದ್ಧದ ಕುರಿತು ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕರೆ ನೀಡಿದ್ದರು.
ಈಗಾಗಲೇ ಕೇಂದ್ರ ಸರ್ಕಾರ ಭಯೋತ್ಪಾದನೆ ವಿರುದ್ಧ ಯುದ್ಧ ಸಾರಿದ್ದು, ಪ್ರತಿಪಕ್ಷಗಳು ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಇದೀಗ ವಿಶೇಷ ಅಧಿವೇಶನ ಕರೆದು ನಿರ್ಣಯವನ್ನು ಅಂಗೀಕರಿಸಿದರೆ, ಅದು ಪಾಕಿಸ್ತಾನ ಹಾಗೂ ಉಗ್ರ ಸಂಘಟನೆಗಳಿಗೆ ಹೊಡೆತ ನೀಡಿದಂತಾಗುತ್ತದೆ ಎಂದೂ ಮೂಲಗಳು ತಿಳಿವೆ. ರಾಷ್ಟ್ರಪತಿ ದೌಪದಿ ಮುರ್ಮು ಅವರು ರೋಮ್‌ನಿಂದ ಭಾರತಕ್ಕೆ ವಾಪಸ್ಸಾದ ಬಳಿಕ ವಿಶೇಷ ಅಧಿವೇಶನ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ. ಎಂದು ಹೇಳಲಾಗುತ್ತಿದೆ.