ಬೆಂಗಳೂರು, ಏ.26– ಪ್ರೀತಿಸುವಂತೆ ಕಾಲೇಜು ವಿದ್ಯಾರ್ಥಿನಿಗೆ ಒತ್ತಾಯಿಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಸಾಫ್ಟ್ ವೇರ್ ಇಂಜಿನಿಯರೊಬ್ಬರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೆಸಿನಗರದ ಕುರುಬರಹಳ್ಳಿ ನಿವಾಸಿ ಶ್ರೀಕಾಂತ್ (43) ಬಂಧಿತ ಆರೋಪಿ. ಈತನಿಗೆ ಮದುವೆಯಾಗಿದ್ದು ಮಕ್ಕಳಿವೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಕಾಲೇಜು ವಿದ್ಯಾರ್ಥಿನಿ ಪೋಷಕರು ಈ ಹಿಂದೆ ಇವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಈಗ ಬೇರೆ ಕಡೆ ನೆಲೆಸಿದ್ದಾರೆ.
ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಈತ ವಿದ್ಯಾರ್ಥಿನಿ ಎಲ್ಲೆಲ್ಲಿ ಹೋಗುತ್ತಾರೆ ಅಲ್ಲೆಲ್ಲ ಹೋಗುತ್ತಿದ್ದ. ಇತ್ತೀಚೆಗೆ ಈಕೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಈ ವಿದ್ಯಾರ್ಥಿನಿ ತನ್ನ ಸ್ನೇಹಿತನ ಜೊತೆ ಮಾತನಾಡುತ್ತಾ ನಿಂತಿದ್ದಳು.
ಆಗ ಅಲ್ಲಿಗೆ ಬಂದ ಈತ ಜಗಳ ತೆಗೆದು ಕೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಈ ಬಗ್ಗೆ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.