ನವದೆಹಲಿ,ಏ.28- ಪಹಲ್ಗಾಮ್ ದಾಳಿಯ ಬಳಿಕ ಪಾಕ್ ಮತ್ತು ಭಾರತದ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಮಹತ್ವದ ಮಾತುಕತೆ ನಡೆಸಿದ್ದಾರೆ. ದಿನೇದಿನೇ ಪರಿಸ್ಥಿತಿ ಉಲ್ಭಣಗೊಳ್ಳುತ್ತಿದ್ದು, ಗಡಿಭಾಗದಲ್ಲಿ ಭಾರತ ತನ್ನ ಸೇನೆ ಹಾಗೂ ಯುದ್ಧ ಸಲಕರಣೆಗಳನ್ನು ಜಮಾವಣೆಗೊಳಿಸಿದ್ದಾರೆ. ಪ್ರತಿಯಾಗಿ ಪಾಕಿಸ್ತಾನ ಭಾಗದಲ್ಲೂ ಯುದ್ಧ ಸಲಕರಣೆಗಳು ಜಮಾವಣೆಗೊಳ್ಳುತ್ತಿರುವುದು ಜಿದ್ದಾಜಿದ್ದಿಯನ್ನು ಸೃಷ್ಟಿಸಿದೆ.
ಈ ನಡುವೆ ಗಡಿಯ ಕುಪ್ವಾರ ಮತ್ತು ಪೂಂಚ್ ಪ್ರದೇಶಗಳಲ್ಲಿ ಪಾಕಿಸ್ತಾನದ ಕಡೆಯಿಂದ ಅಪ್ರಚೋದಿತ ಗುಂಡಿನ ಚಕಮಕಿಯ ಕುಚೋದ್ಯ ಮುಂದುವರೆಯುತ್ತಲೇ ಇದೆ. ಇದಕ್ಕೆ ಭಾರತೀಯ ಸೇನೆ ನಿನ್ನೆ ರಾತ್ರಿ ತಕ್ಕ ಉತ್ತರ ನೀಡಿದ್ದು, ಯಾವುದೇ ಕ್ಷಣದಲ್ಲಿ ಪ್ರತಿಕಾರದ ಆಕ್ರಮಣ ನಡೆಯುವ ಸಾಧ್ಯತೆಯಿದೆ.
ನಿನ್ನೆ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಕೇಂದ್ರ ಭದ್ರತಾ ಪಡೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ಜನರಲ್ ಸೇನಾ ಮುಖ್ಯಸ್ಥ ಅನಿಲ್ ಚೌವ್ಹಾಣ್ ಅವರು ರಾಜನಾಥ ಸಿಂಗ್‌ರವರಿಗೆ ಪರಿಸ್ಥಿತಿಯ ಪ್ರಸ್ತುತೆಯನ್ನು ವಿವರಿಸಿದ್ದು, ಪಹಲ್ಗಾಮ್ ದಾಳಿಯ ಬಳಿಕ ಸೇನೆ ಸಜ್ಜುಗೊಳಿಸಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ರಕ್ಷಣಾ ಸಚಿವರ ಮನೆಯಲ್ಲಿ 40 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಸೇನಾ ತಾಂತ್ರಿಕತೆ ಹಾಗೂ ಭಯೋತ್ಪಾದನೆಯನ್ನು ಈ ಬಾರಿ ಕಿತ್ತೊಗೆಯಲು ತೆಗೆದುಕೊಳ್ಳಲಾಗಿರುವ ಪೂರ್ವ ತಯಾರಿಗಳ ಬಗ್ಗೆ ಚರ್ಚೆಯಾಗಿದೆ. ಗಡಿಭದ್ರತಾ ಪಡೆ (ಬಿಎಸ್‌ಎಫ್) ಮಹಾ ನಿರ್ದೇಶಕ ದಲಜಿತ್ ಸಿಂಗ್ ಚೌಧರಿ ಅವರು ಕೂಡ ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದು ಪ್ರಮುಖ ಅಂಶಗಳನ್ನು ಚರ್ಚೆ ನಡೆಸಿದ್ದಾರೆ.
ಇದೆಲ್ಲದರ ನಡುವೆ ಭಾರತೀಯ ನೌಕಾಪಡೆ ನಿನ್ನೆ ಕ್ಷಿಪಣಿ ನಿರೋಧಕ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಅಭ್ಯಾಸ ನಡೆಸಿದರು. ಯುದ್ಧ ಸನ್ನಿವೇಶಕ್ಕೆ ನೌಕಾಪಡೆ ಸಂಪೂರ್ಣ ಸಿದ್ಧವಿದೆ. ಭಾರತೀಯ ಸಮುದ್ರ ಪ್ರದೇಶವನ್ನು ಯಾವಾಗ, ಯಾವ ರೀತಿಯಲ್ಲಾದರೂ ರಕ್ಷಿಸಲು ನೌಕಾಪಡೆ ಎಲ್ಲಾ ರೀತಿ ಸಜ್ಜುಗೊಂಡಿರುವುದಾಗಿ ತಿಳಿಸಲಾಗಿದೆ.
ರಾಜತಾಂತ್ರಿಕವಾಗಿ ಕೇಂದ್ರ ಸರ್ಕಾರ ಈಗಾಗಲೇ ನಾನಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಇಂದು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಪಹಲ್ಗಾಮ್ ದಾಳಿಯ ಸತ್ಯಾಸತ್ಯತೆಗಳನ್ನು ತಿರುಚಿ ವರದಿ ಮಾಡಿ ಅಭದ್ರತೆಯನ್ನು ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ಪಾಕಿಸ್ತಾನದ 16 ಯೂ ಟ್ಯೂಬ್ ಚಾನೆಲ್ ಮತ್ತು ಕೆಲವು ಸೆಟಲೈಟ್ ಚಾನೆಲ್‌ಗಳನ್ನು ಭಾರತದಲ್ಲಿ ನಿರ್ಬಂಧಿಸುವ ನಿರ್ಣಯವಾಗಿದೆ.
ತಪ್ಪು ಮಾಹಿತಿಯನ್ನು ವರದಿ ಮಾಡಿದ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ನೋಟಿಸ್ ನೀಡಲಾಗಿದೆ. ಭಾರತದ ವಿರುದ್ಧ ಈ ಚಾನೆಲ್‌ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಪ್ಪು ಮಾಹಿತಿಯನ್ನು ಬಿತ್ತರಿಸುತ್ತಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಇಂದು ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ರಾಜನಾಥ್‌ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಸೇನೆಯ ಪ್ರಮುಖರು ಪಾಲ್ಗೊಂಡಿದ್ದರು. ಗಡಿಯಲ್ಲಿನ ವಾತಾವರಣವನ್ನು ಪರಾಮರ್ಶೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗಡಿಭಾಗದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿರುವ ಗ್ರಾಮಗಳ ಜನರನ್ನು ಸ್ಥಳಾಂತರಿಸುವ ಹಾಗೂ ಕೃಷಿ ಚಟುವಟಿಕೆಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಮನವರಿಕೆ ಮಾಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಪೂರ್ವ ತಯಾರಿಗಳು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಕಾರ್ಯಾಚರಣೆಯ ಮುನ್ಸೂಚನೆ ನೀಡಿದೆ.
ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸರ್ವಪಕ್ಷಗಳ ಸಭೆ ನಡೆಸಿ ಪರಿಸ್ಥಿತಿಯನ್ನು ವಿವರಿಸಿ ಅಗತ್ಯ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದರು. ಪಹಲ್ಗಾಮ್ ದಾಳಿಯ ಬಳಿಕ ಭಾರತದಲ್ಲಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ತೀವ್ರ ಆಕ್ರೋಶಗಳು ಕೇಳಿಬಂದಿವೆ. ಭಯೋತ್ಪಾದನೆಯ ಮೂಲೋಚ್ಛಾಟನೆಗೆ ಒತ್ತಡಗಳು ಹೆಚ್ಚಿವೆ. ಅದರಲ್ಲೂ ಪಾಕಿಸ್ತಾನ ಕೆಲವು ಕುಖ್ಯಾತ ಭಯೋತ್ಪಾದಕರ ನೆಲೆವೀಡಾಗಿರುವುದರಿಂದ ಕಠಿಣ ಕಾರ್ಯಾಚರಣೆಯನ್ನು ಅಂತಾರಾಷ್ಟ್ರೀಯ ಸಮುದಾಯ ಭಾರತದ ಕಡೆಯಿಂದ ನಿರೀಕ್ಷಿಸುತ್ತಿದೆ.
ಪಾಕಿಸ್ತಾನ ತನ್ನ ರಕ್ಷಣೆಗಾಗಿ ಚೀನಾ ಮತ್ತು ರಷ್ಯಾ ಧಾವಿಸಬೇಕು ಎಂಬರ್ಥದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಅವಲತ್ತುಕೊಳ್ಳಲಾರಂಭಿಸಿದೆ. ಭಯೋತ್ಪಾದನೆಗೆ ಸಂಬಂಧಪಟ್ಟಂತೆ ಭಾರತ ತನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ಈ ಕುರಿತು ಸತ್ಯಾಸತ್ಯತೆ ತನಿಖೆಗಾಗಿ ಚೀನಾ ಮತ್ತು ರಷ್ಯಾ ವಿಶೇಷ ತನಿಖಾ ತಂಡಗಳನ್ನು ರಚಿಸಬೇಕು ಎಂಬುದು ಪಾಕ್‌ನ ಆಗ್ರಹವಾಗಿದೆ.
ಆದರೆ ಇದ್ಯಾವುದಕ್ಕೂ ಲೆಕ್ಕಿಸದೆ ಭಾರತ ತನ್ನ ಕಡೆಯಿಂದ ದಿಟ್ಟ ಕ್ರಮಗಳನ್ನು ಮುಂದುವರೆಸಿದೆ. ದುಷ್ಕರ್ಮಿಗಳಿಗೆ ನೆರವು ನೀಡಿದ್ದ ಹಾಗೂ ಭಯೋತ್ಪಾದಕರು ನೆಲೆಸಿದ್ದರು ಎನ್ನಲಾದ ಹತ್ತು ಮನೆಗಳನ್ನು ಕಾಶೀರ ಭಾಗದಲ್ಲಿ ಈಗಾಗಲೇ ಕಂಟ್ರೋಲ್ ಬ್ಲಾಸ್ಟ್ ಮೂಲಕ ಧ್ವಂಸಗೊಳಿಸಲಾಗಿದೆ.ಕೋಂಬಿಂಗ್ ಕಾರ್ಯಾಚರಣೆ ಮುಂದುವರೆದಿದ್ದು ಉತ್ತರ ಕಾಶೀರದಲ್ಲಿ ಇಂಚಿಂಚೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಭಯೋತ್ಪಾದಕರು 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿದ ಬಳಿಕ ಅವರಿಂದ ಎರಡು ಮೊಬೈಲ್‌ಗಳನ್ನು ಕಸಿದುಕೊಂಡು ಹೋಗಿದ್ದು, ಅವುಗಳ ತಾಂತ್ರಿಕ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಚಾಲ್ತಿಯಲ್ಲಿದೆ. ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ ಉಗ್ರರು ಹಾಗೂ ಅವರ ಹಿಂದೆ ಬೆಂಬಲವಾಗಿ ನಿಂತ ಕಾಣದ ಕೈಗಳ ವಿರುದ್ಧ ಭಾರತ ತೀಕ್ಷ್ಣ ಕ್ರಮಕ್ಕೆ ಮುಂದಾಗಿದ್ದು, ಯಾವುದೇ ಕ್ಷಣದಲ್ಲಿ ಪ್ರತೀಕಾರ ಕಾರ್ಯಾಚರಣೆ ಶುರುವಾಗುವ ಸಾಧ್ಯತೆಯಿದೆ.