Tuesday, April 29, 2025
Homeಬೆಂಗಳೂರುಬಿಬಿಎಂಪಿ ವ್ಯಾಪ್ತಿಯ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಬೈಸಿಕಲ್‌

ಬಿಬಿಎಂಪಿ ವ್ಯಾಪ್ತಿಯ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಬೈಸಿಕಲ್‌

Bicycles for high school students under BBMP

ಬೆಂಗಳೂರು, ಏ.28- ಬಿಬಿಎಂಪಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸಲು ತೀರ್ಮಾನಿಸಲಾಗಿದೆ.ಮುಂದಿನ ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತಿದಂತೆ ಸೈಕಲ್‌ ವಿತರಣೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಜೆಡಿಎಸ್‌‍-ಬಿಜೆಪಿ ಮೈತ್ರಿಸರ್ಕಾರದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸುವ ಯೋಜನೆ ಸಾಕಷ್ಟು ಗಮನ ಸೆಳೆದಿತ್ತು. ಇದೀಗ ಬಿಬಿಎಂಪಿಯು ತನ್ನ ವ್ಯಾಪ್ತಿಯಲ್ಲಿನ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಣೆ ಮಾಡುವುದಕ್ಕೆ ಮುಂದಾಗಿದೆ.

ಬಿಬಿಎಂಪಿಯ ಪ್ರಸಕ್ತ 2025-26ನೇ ಸಾಲಿನ ಆಯುವ್ಯಯದಲ್ಲಿ 721.40 ಕೋಟಿ ರು. ಮೀಸಲಿಡಲಾಗಿದೆ. ಕಳೆದ ವರ್ಷ 554.05 ಕೋಟಿ ರು. ಮೀಸಲಿಡಲಾಗಿತ್ತು. ಈ ಬಾರಿ ಹೆಚ್ಚುವರಿಯಾಗಿ 167 ಕೋಟಿ ರು. ಮೀಸಲಿಟ್ಟಿದ್ದು, ಹೆಚ್ಚುವರಿ ಅನುದಾನ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿಯ ಕಲ್ಯಾಣ ವಿಭಾಗದ ಅಧಿಕಾರಿಗಳು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

ಬಿಬಿಎಂಪಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಣೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ. ಸೈಕಲ್‌ ಕೇವಲ ಬಿಬಿಎಂಪಿಯ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲ. ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಯಾವುದೇ ವಿದ್ಯಾರ್ಥಿಯಾದರೂ ಸೈಕಲ್‌ ಪಡೆಯಬಹುದಾಗಿದೆ ಎಂದು ಮೂಲಗಳು ಉಲ್ಲೇಖಿಸಿವೆ.

ಆದರೆ, ಬಿಬಿಎಂಪಿಗೆ ಅರ್ಜಿ ಸಲ್ಲಿಸಿದವರೆಗೆ ಮಾತ್ರ ಸೈಕಲ್‌ ದೊರೆಯಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟು ವಿದ್ಯಾರ್ಥಿಗಳು 8ನೇ ತರಗತಿಗೆ ಈ ಬಾರಿ ದಾಖಲಾತಿ ಪಡೆಯಲಿದ್ದಾರೆ ಎಂಬುದರ ಕುರಿತು ಮಾಹಿತಿ ಸಂಗ್ರಹ ಸಹ ಮಾಡುವುದಕ್ಕೆ ಕಲ್ಯಾಣ ವಿಭಾಗದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ಪರಿಸರ ಪ್ರೇಮ ಬೆಳೆಸುವುದುಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಈಗಾಗಲೇ ಪರಿಸರ ಪ್ರೇಮದ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನಡುವೆ ನಗರದಲ್ಲಿ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆಯಿಂದ ಉಂಟಾಗುತ್ತಿರುವ ಮಾಲಿನ್ಯ ಕಡಿಮೆ ಮಾಡುವುದಕ್ಕೆ ಸೈಕಲ್‌ ಬಳಕೆಯೂ ಒಂದು ಪರಿಹಾರವಾಗಿದೆ. ಈ ಕುರಿತು ಮಕ್ಕಳಿಗೆ ಸೈಕಲ್‌ ವಿತರಿಸುವ ಮೂಲಕ ತಿಳುವಳಿಕೆ ನೀಡಿಸುವುದು ಬಿಬಿಎಂಪಿಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES

Latest News