ಬೆಂಗಳೂರು, ಏ.29- ಬೆಸಿಗೆಯಲ್ಲಿ ನಗರದ ಜನರನ್ನು ಕಾಡಲಿರುವ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಜಲಮಂಡಳಿ ಮುಂದಾಗಿದೆ.ಆನ್‌ಲೈನ್ ಯುಗದಲ್ಲಿ ಮನೆಯಲ್ಲೇ ಕುಳಿತು ತಮಗೆ ಬೇಕಾದ ವಸ್ತುಗಳನ್ನು ತರಿಸಿಕೊಳ್ಳುವ ಕಾಲವಿದು. ಇಂತಹ ಸಂದರ್ಭದಲ್ಲಿ ಆನ್‌ಲೈನ್‌ನಲ್ಲೆ ಅವಶ್ಯಕತೆ ಇರುವವರು ನೀರು ತರಿಸಿಕೊಳ್ಳಲು ಅನುಕೂಲವಾಗುವಂತೆ ಕಾವೇರಿ ಸಂಚಾರಿ ಎಂಬ ವಿನೂತನ ಯೋಜನೆಯನ್ನು ಜಲಮಂಡಳಿ ಅನುಷ್ಠಾನಗೊಳಿಸಿದೆ ಎಂದ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಬೇಸಿಗೆಯಲ್ಲಿನ ಕುಡಿಯುವ ನೀರಿನ ಅಭಾವ ನೀಗಿಸಲು ಆನ್ ಲೈನ್ ನಲ್ಲಿ ಕಾವೇರಿ ನೀರು ಮಾರಾಟಕ್ಕೆ ಜಲಮಂಡಳಿ ಸಿದ್ಧತೆ ನಡೆಸಿದ್ದು, ಕಾವೇರಿ ಸಂಚಾರಿ ಎಂಬ ಯೋಜನೆ ಅಡಿ ಮನೆ ಬಾಗಿಲಿಗೆ ನೀರು ಸರಬರಾಜು ಮಾಡಲಾಗುತ್ತಿದೆ.
ಆ್ಯಪ್ ಮೂಲಕ ಬೆಂಗಳೂರು ಜನರು ತಮಗೆ ಬೇಕಾದಷ್ಟು ನೀರನ್ನು ಮನೆಗೆ ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಜಲಮಂಡಳಿ ಜಾರಿಗೆ ತಂದಿರುವ ಆ್ಯಪ್ ಆಧಾರಿತ ನೀರು ಪೂರೈಕೆ ಸೇವೆಗೆ ನೀವು ಆನ್‌ಲೈನ್‌ನಲ್ಲಿ ಆರ್ಡರ್ ನೀಡಿದರೆ ಮನೆ ಬಾಗಿಲಿಗೆ ನೇರ ನೀರು ಸರಬರಾಜಗಲಿದೆ.
ಇದಕ್ಕಾಗಿ ನಗರದಾದ್ಯಂತ ಒಟ್ಟು 500ಕ್ಕೂ ಅಧಿಕ ಟ್ಯಾಂಕರ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. 4 ರಿಂದ 12 ಸಾವಿರ ಲೀಟರ್ ವರೆಗೆ ಏಕಕಾಲಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ಇದಕ್ಕೆ ಆನ್ ಲೈನ್ ಅಥವಾ ನೇರವಾಗಿ ಹಣ ಪಾವತಿಗೆ ಅವಕಾಶ ನೀಡಲಾಗಿದೆ. ದುಬಾರಿ ಬೆಲೆಗೆ ನೀರು ಮಾರಿಕೊಳ್ಳುವ ಟ್ಯಾಂಕರ್ ಮಾಲೀಕರಿಗೆ ಬಿಸಿ ಮುಟ್ಟಿಸಲಾಗಿದೆ.
4000 ಲೀಟರ್ ಟ್ಯಾಂಕರ್ ಗೆ-660 ರೂ,, 5000 ಲೀಟರ್ ಟ್ಯಾಂಕರ್ ಗೆ -700 ರೂ, 6000 ಲೀಟರ್ ಟ್ಯಾಂಕರ್ ಗೆ -740 ರೂ ಮತ್ತು 12,000 ಲೀಟರ್ ಟ್ಯಾಂಕರ್ ಗೆ -1,290 ರೂ. ದರ ನಿಗದಿ ಮಾಡಲಾಗಿದೆ.
ಈ ದರ ಆರಂಭಿಕ ಎರಡು ಕಿಲೋ ಮೀಟರ್ ವ್ಯಾಪ್ತಿಗೆ ಸೀಮಿತವಾಗಿರುತ್ತದೆ. 4 ರಿಂದ 6 ಸಾವಿರ ಲೀಟರ್ ವರೆಗಿನ ಸ್ಲ್ಯಾಬ್ ಗೆ 2 ಕಿಲೋ ಮೀಟರ್ ನಂತರದ ಪ್ರತಿ ಕಿಲೋ ಮೀಟರ್ 50 ರೂಪಾಯಿ ಹಾಗೂ 12 ಸಾವಿರ ಹಾಗೂ ಅಧಕ್ಕೂ ಮೇಲ್ಪಟ್ಟ ಸ್ಲ್ಯಾಬ್ ಗೆ 2 ಕಿಲೋ ಮೀಟರ್ ನಂತರದ ಪ್ರತಿ ಕಿಲೋ ಮೀಟರ್ ಗೆ 70 ರೂಪಾಯಿ ದರ ನಿಗದಿ ಮಾಡಲಾಗಿದೆ.