ಬೆಂಗಳೂರು,ಏ.30- ಸ್ನೇಹಿತರಿಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಹಾಲಿನ ಟ್ಯಾಂಕರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.ಶ್ರೀರಾಂಪುರದ ನಿವಾಸಿ ಹರ್ಷ(17) ಮೃತಪಟ್ಟ ಹಿಂಬದಿ ಸವಾರ. ಈತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ.
ಸ್ನೇಹಿತ ಸಚಿನ್ ಬೈಕ್‌ನಲ್ಲಿ ಹರ್ಷ ಹಿಂಬದಿ ಕುಳಿತುಕೊಂಡು ನ್ಯೂಬಿಇಎಲ್ ರಸ್ತೆಗೆ ಇಂದು ಬೆಳಗ್ಗೆ 6.30 ರ ಸುಮಾರಿನಲ್ಲಿ ಹೊಗುತ್ತಿದ್ದಾಗ ಸದಾಶಿವನಗರದ ಸಮೀಪ ಅಂಡರ್ ಪಾಸ್ ಬಳಿ ಹಿಂದಿನಿಂದ ವೇಗವಾಗಿ ಬಂದ ಹಾಲಿನ ಟ್ಯಾಂಕರ್ ವಾಹನ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಇಬ್ಬರು ಸವಾರರು ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಹರ್ಷ ಮೃತಪಟ್ಟಿದ್ದಾನೆ.ಎಂಎಸ್ ರಾಮಯ್ಯ ಆಸ್ಪತ್ರೆಗೆ ಹರ್ಷನ ಮೃತದೇಹ ರವಾನಿಸಲಾಗಿದೆ.
ಗಂಭೀರ ಗಾಯಗೊಂಡಿರುವ ಸಚಿನ್ ನನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.ಸುದ್ದಿ ತಿಳಿದು ಸದಾಶಿವನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.