ಮೈಸೂರು, ಮೇ. 1 -ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ 250 ವರ್ಷದ ಪುರಾತನ ಕಾಲದ ಆಲದ ಮರ ಧರೆಗೆ ಉರುಳಿದ್ದು, ಪರಿಣಾಮ ಲಕ್ಷಾಂತರ ಮೌಲ್ಯದ ಮಾವಿನ ಬೆಳೆ ನಾಶವಾಗಿರುವ ಘಟನೆ ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬೀರೇಗೌಡ ಎಂಬುವರಿಗೆ ಸೇರಿದ ಆಲದ ಮರ ಭಾರಿ ಮಳೆ ಗಾಳಿಗೆ ಬುಡ ಸಮೇತ ಉರುಳಿ ಬಿದ್ದಿದ್ದು ಇದರಿಂದ ಆರು ತೆಂಗಿನ ಮರ, ನಾಲ್ಕು ಮಾವಿನ ಮರಗಳು ಸಂಪೂರ್ಣ ನಾಶವಾಗಿದೆ.
250 ವರ್ಷಗಳ ಹಿಂದಿನ ಪುರಾತನ ಕಾಲದ ಆಲದ ಮರ ಇದಾಗಿದ್ದು, ಇದರಿಂದಾಗಿ ಮಾವಿನ ಫಸಲು ಸಂಪೂರ್ಣ ನೆಲಕಚ್ಚಿದೆ. ಬಾದಾಮಿ ಮಾವಿನ ಕಾಯಿಗಳು ಸಂಪೂರ್ಣ ನೆಲಕ್ಕುದುರಿದ್ದು ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.
ಲಕ್ಷಾಂತರ ಮೌಲ್ಯದ ಮಾವಿನ ಬೆಳೆ ನಾಶವಾಗಿದ್ದು, ನಾಲ್ಕು ಮಾವಿನ ಮರದಿಂದ ಸುಮಾರು ನಾಲ್ಕು ಟನ್ ಮಾವು ಕಟಾವಿಗೆ ಬಂದಿತ್ತು. ಆದರೆ ಇದೀಗ ಕೈಗೆ ಬಂದ ತುತ್ತು ಬಾಯಿ ಬಾರದಂತಾಗಿದೆ.