ಬೆಂಗಳೂರು, ಮೇ 1– ಕೇಂದ್ರ ಸರ್ಕಾರವೇ ಜನಗಣತಿಯ ಜೊತೆ ಜಾತಿ ಜನಗಣತಿ ನಡೆಸಲು ನಿರ್ಧರಿಸಿರುವುದರಿಂದ ರಾಜ್ಯ ಸರ್ಕಾರ ನಡೆಸಿದ ಜಾತಿ ಜನಗಣತಿ ಹಾಗೂ ಒಳ ಮೀಸಲಾತಿಗೆ ನಡೆಸಬೇಕಾದ ವಿಶೇಷ ಸಮೀಕ್ಷೆಗಳ ಔಚಿತ್ಯ ಅಥವಾ ಊರ್ಜಿತದ ಬಗ್ಗೆ ಪ್ರಶ್ನೆಗಳು ಉದ್ಭವಿಸಲಾರಂಭಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಿದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯಲ್ಲಿ 54 ಅಂಶಗಳ ಜೊತೆಯಲ್ಲಿ ಜಾತಿಯ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಈ ವರದಿ ಸುಮಾರು ಎಂಟು ವರ್ಷಗಳ ಬಳಿಕ ಕಳೆದ ಏಪ್ರಿಲ್ 17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿ, ಸಚಿವರ ಕೈ ಸೇರಿದೆ. ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಜಾತಿವಾರು ಅಂಕಿ ಸಂಖ್ಯೆಗಳು ಭಾರೀ ಕೋಲಾಹಲವನ್ನೇ ಎಬ್ಬಿಸಿವೆ.
ಲಿಂಗಾಯತ-ವೀರಶೈವ, ಒಕ್ಕಲಿಗ ಹಾಗೂ ಇತರ ಹಲವು ಜಾತಿಗಳು ವರದಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ರಾಜ್ಯ ಸರ್ಕಾರ ಅದನ್ನು ತಿರಸ್ಕರಿಸಬೇಕು ಎಂಬ ಒತ್ತಡ ಹಾಕುತ್ತಿವೆ. ವಿರೋಧ ಪಕ್ಷಕ್ಕಿಂತಲೂ ಆಡಳಿತ ಪಕ್ಷದಲ್ಲೇ ಈ ವರದಿಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಾಸೆಯಿಂದ ನಡೆದ ಈ ಸಮೀಕ್ಷೆ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುವ ಮಟ್ಟಿಗೆ ವಿವಾದ ಸೃಷ್ಟಿಸಿದೆ. ಹಾಗಾಗಿ ರಾಜ್ಯ ಸರ್ಕಾರ ವರದಿಯ ಮೇಲೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳದೆ ಕಾಲ ವ್ಯಯ ಮಾಡಲಾರಂಭಿಸಿದೆ. ಮೇಲಾಗಿ ರಾಜ್ಯ ಸರ್ಕಾರಕ್ಕೆ ಈ ರೀತಿಯ ಗಣತಿ ಮಾಡಲು ಅಧಿಕಾರವಿಲ್ಲ, ಕೇಂದ್ರ ಸರ್ಕಾರಕ್ಕೆ ಮಾತ್ರ ಗಣತಿ ಅಥವಾ ಜಾತಿ ಗಣತಿ ಮಾಡಲು ಅಧಿಕಾರವಿದೆ. ರಾಜ್ಯಗಳು ಈ ರೀತಿಯ ಗಣತಿ ಮಾಡಿದರೆ ಅದು ಸಂವಿಧಾನ ಬಾಹಿರ ಎಂಬ ಆಕ್ಷೇಪಗಳಿದ್ದವು. ಅದರ ಹೊರಾತಾಗಿಯೂ ಬಿಹಾರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಜಾತಿ ಸಮೀಕ್ಷೆಗಳು ನಡೆದಿದ್ದವು.
ರಾಜ್ಯ ಸರ್ಕಾರ ಕಾನೂನು ಮತ್ತು ಸಂವಿಧಾನ ಬಿಕ್ಕಟ್ಟಿಗೆ ಸಿಲುಕಬಾರದು ಎಂಬ ಕಾರಣಕ್ಕೆ ಜಾತಿ ಜನಗಣತಿ ಎಂಬ ಹೆಸರು ಇಡದೆ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವರದಿ ಎಂದು ಉಲ್ಲೇಖಿಸಿತ್ತು. ಅದರಲ್ಲಿ ಸಂಗ್ರಹಿಸಲಾದ ಜಾತಿ ಅಂಕಿ ಸಂಖ್ಯೆಗಳನ್ನು ಆಧರಿಸಿ ಮೀಸಲಾತಿ ಪರಿಷ್ಕರಣೆ ಹಾಗೂ ಇತರ ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಿತ್ತು.
ಸರ್ಕಾರ ಸಂಪುಟದಲ್ಲಿ ವರದಿ ಮಂಡನೆ ಮಾಡುತ್ತಿದ್ದಂತೆ ಭಾರೀ ವಿರೋಧ ವ್ಯಕ್ತವಾಗಿದ್ದಲ್ಲದೆ, ಸಿದ್ದರಾಮಯ್ಯ ಅವರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಕಾರಣಕ್ಕೆ ಮೀಸಲಾತಿ ಪ್ರಮಾಣವನ್ನು ಶೇ.50ರಿಂದ 71ಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಗಳು ಹುಟ್ಟಿಕೊಂಡವು. ಸರ್ಕಾರ ಜಯಪ್ರಕಾಶ್ ಹೆಗ್ಡೆ ಅವರ ವರದಿಯ ಆಧಾರದ ಮೇಲೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನಾ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿ ಬಂದಿದ್ದವು.
ಇದರ ಜೊತೆಗೆ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದಂತೆಯೂ ಭಾರೀ ಚರ್ಚೆಗಳಿವೆ. ಈ ಹಿಂದೆ ಸದಾಶಿವ ಆಯೋಗ ನೀಡಿದ್ದ ವರದಿಯ ಬಗ್ಗೆ ಬಹಳಷ್ಟು ಪರ ವಿರೋಧ ಚರ್ಚೆಗಳಾಗಿವೆ. ಅದರಲ್ಲಿನ ದತ್ತಾಂಶಗಳು ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ಹೊಸದಾಗಿ ರಚಿಸಲಾದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗ ಇದೇ ಮೇ 5ರಿಂದ ಮನೆ ಮನೆಯಿಂದ ಮಾಹಿತಿ ಸಂಗ್ರಹಿಸಿ ಪರಿಶಿಷ್ಟ ಜಾತಿಗಳಲ್ಲಿ ಜನಸಂಖ್ಯೆ ಹಾಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗೆ ಮುಂದಾಗಿದೆ.
ಈ ಎರಡು ಕಾರ್ಯಕ್ರಮಗಳು ಕಾವೇರಿದ ಚರ್ಚೆಯನ್ನು ಹುಟ್ಟು ಹಾಕಿವೆ. ಇದರ ನಡುವೆ ಕೇಂದ್ರ ಸರ್ಕಾರ ಜನಗಣತಿಯನ್ನು ಘೋಷಣೆ ಮಾಡಿದ್ದು, ಜಾತಿ ಗಣತಿಯನ್ನು ನಡೆಸುವುದಾಗಿ ತಿಳಿಸಿದೆ. ಕೇಂದ್ರ ಸರ್ಕಾರಕ್ಕೆ ಜನಗಣತಿ ಹಾಗೂ ಜಾತಿ ಗಣತಿ ನಡೆಸಲು ಹಕ್ಕು ಸ್ವಾಮ್ಯಗಳಿವೆ. ಆ ಗಣತಿ ಶುರುವಾಗುವ ಹೊತ್ತಿನಲ್ಲಿ ರಾಜ್ಯ ಸರ್ಕಾರ ನಡೆಸಿರುವ ಹಿಂದುಳಿದ ವರ್ಗಗಳ ಆಯೋಗದ ವರದಿ ಹಾಗೂ ಸಮೀಕ್ಷೆ ನಡೆಯಬೇಕಿರುವ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿ ಔಚಿತ್ಯಪೂರ್ಣವೇ ಹಾಗೂ ಊರ್ಜಿತವೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
ಮೂಲಗಳ ಪ್ರಕಾರ ಸರ್ಕಾರ ಗೊಂದಲಮಯ ಸನ್ನಿವೇಶದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರದ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಸಮಗ್ರ ವರದಿಯನ್ನು ಮಂಡಿಸುವಂತೆ ಸೂಚಿಸಲಾಗಿದೆ.
ಕೇಂದ್ರ ಸರ್ಕಾರ ಗಣತಿ ನಡೆಸಿ ವರದಿ ವರದಿ ಸ್ವೀಕರಿಸಿ ಅದು ಅನುಷ್ಠಾನಕ್ಕೆ ಬರಲು ಕನಿಷ್ಠ ಎರಡು ವರ್ಷವಾದರೂ ಬೇಕಿದೆ. ಆವರೆಗೂ ರಾಜ್ಯ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಊರ್ಜಿತಗೊಳ್ಳಲಿವೆಯೇ ? ನ್ಯಾಯಾಲಯಗಳಲ್ಲಿ ತಕರಾರು ಕಾರ್ಯಸಾಧುವಾಗಬಲ್ಲವೇ ಎಂಬೆಲ್ಲಾ ಪ್ರಶ್ನೆಗಳು ಕಾಡಲಾರಂಭಿಸಿವೆ.
ಜಯಪ್ರಕಾಶ್ ಹೆಗ್ಡೆ ಅವರ ವರದಿ ವಿರುದ್ಧ ಈಗಾಗಲೇ ಜನ ಸಾಮಾನ್ಯರ ಮಟ್ಟದಲ್ಲಿ ಹೋರಾಟಗಳು ಶುರುವಾಗಿವೆ. ವರದಿ ಅನುಷ್ಠಾನಕ್ಕೆ ತರುವ ನಿರ್ಧಾರವಾದರೆ ಅದು ನ್ಯಾಯಾಲಯದಲ್ಲಿ ಪ್ರಶ್ನೆಗೆ ಒಳಗಾಗುವುದು ಬಹುತೇಕ ಖಚಿವಾಗಲಿದೆ. ಆ ವೇಳೆ ನ್ಯಾಯಾಲಯಗಳು ವ್ಯತಿರಿಕ್ತ ತೀರ್ಪು ನೀಡಿದರೆ ಭವಿಷ್ಯದಲ್ಲಿ ಸಾಮಾಜಿಕ ನ್ಯಾಯದ ಮೇಲೆ ಅಡ್ಡ ಪರಿಣಾಮವಾಗಬಹುದು ಎಂಬ ಆತಂಕವೂ ಇದೆ.
ಕೆಲವು ಸಂಘಟನೆಗಳು ಕೇಂದ್ರ ಸರ್ಕಾರದ ಜಾತಿ ಗಣತಿಯನ್ನು ನಿರೀಕ್ಷಿಸದೆ ರಾಜ್ಯ ಸರ್ಕಾರ ನಡೆಸಿರುವ ಸಮೀಕ್ಷೆಯ ವರದಿ ಆಧರಿಸಿಯೇ ಮುಂದಿನ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿ ಮಾಡಬೇಕು ಎಂಬ ಆಗ್ರಹ ಮಾಡುತ್ತಿವೆ. ಸದ್ಯಕ್ಕೆ ರಾಜ್ಯ ಸರ್ಕಾರ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಹೀಗಾಗಿ ಜಯಪ್ರಕಾಶ್ ಹೆಗ್ಡೆ ವರದಿ ಅನುಷ್ಠಾನದ ಬಗ್ಗೆ ಅನುಮಾನಗಳು ಸೃಷ್ಟಿಯಾಗಿವೆ.