Thursday, May 1, 2025
Homeರಾಜ್ಯರಾಜ್ಯದಲ್ಲಿ ವಾಡಿಕೆಗಿಂದ ಶೇ.63ರಷ್ಟು ಅಧಿಕ ಪೂರ್ವ ಮುಂಗಾರು ಮಳೆ

ರಾಜ್ಯದಲ್ಲಿ ವಾಡಿಕೆಗಿಂದ ಶೇ.63ರಷ್ಟು ಅಧಿಕ ಪೂರ್ವ ಮುಂಗಾರು ಮಳೆ

Pre-monsoon rainfall in the state is 63% more than usual

ಬೆಂಗಳೂರು,ಮೇ1-ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿ ಬಿದ್ದಿದೆ. ಮಾರ್ಚ್‌ ಒಂದರಿಂದ ಏಪ್ರಿಲ್‌ 30ರವರೆಗೆ ರಾಜ್ಯದಲ್ಲಿ 67.6 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.63 ರಷ್ಟು ಅಧಿಕ ಮಳೆಯಾಗಿದೆ.

ಈ ಎರಡು ತಿಂಗಳ ಅವಧಿಯಲ್ಲಿ ವಾಡಿಕೆ ಮಳೆ ಪ್ರಮಾಣ 41.5 ಮಿ.ಮೀ. ಆಗಿದ್ದು, 67.6 ಮಿ.ಮೀ. ಮಳೆಯಾಗಿದೆ. ಹೀಗಾಗಿ ವಾಡಿಕೆಗಿಂತ ಶೇ.63ರಷ್ಟು ಹೆಚ್ಚಾಗಿದೆ. ಬೇಸಿಗೆ ಮಳೆಯಂತೆಯೇ ಈ ಬಾರಿಯ ಮುಂಗಾರು ಕೂಡ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಾಗಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜನವರಿ ಒಂದರಿಂದ ಏಪ್ರಿಲ್‌ ಅಂತ್ಯದವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟಾರೆ ವಾಡಿಕೆಗಿಂತ ಶೇ.50ರಷ್ಟು ಅಧಿಕ ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ ಪ್ರಮಾಣ 45.9 ಮಿ.ಮೀ. ಆಗಿದ್ದು, 68.8 ಮಿ.ಮೀ.ನಷ್ಟು ಮಳೆಯಾಗಿದೆ.ಬೀದರ್‌, ಹಾವೇರಿ, ಬಳ್ಳಾರಿ, ಮೈಸೂರು ಜಿಲ್ಲೆಗಳಲ್ಲಿ ಮಾತ್ರ ವಾಡಿಕೆ ಮಳೆಯಾಗಿದ್ದು, ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಅಂದರೆ, ಚಳಿಗಾಲದ ಈ ಎರಡು ತಿಂಗಳಲ್ಲಿ ಮಳೆಯೇ ಆಗಲಿಲ್ಲ. ಆದರೆ, ಫೆಬ್ರವರಿಯಲ್ಲಿ ಬಿಸಿಲ ಬೇಗೆ ಹೆಚ್ಚಾಗಿ ಬೇಸಿಗೆಯ ಅನುಭವ ಉಂಟಾಗಿತ್ತು. ಮಾರ್ಚ್‌ನಲ್ಲೂ ಬಿಸಿಲಿನ ತೀವ್ರತೆ ಹೆಚ್ಚಾಗಿತ್ತು. ಆದರೆ, ಮಾರ್ಚ್‌ ಕೊನೆಯ ವಾರದಲ್ಲಿ ಬೇಸಿಗೆ ಮಳೆ ಆರಂಭಗೊಂಡಿತ್ತು. ನಂತರ ಈತನಕ ಚದುರಿದಂತೆ ಅಲ್ಲಲ್ಲಿ ಮಳೆಯಾಗಿದೆ.

ಕಳೆದ ಒಂದು ವಾರದಲ್ಲಿ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆಯಾಗಿದೆ. ಉತ್ತರ ಒಳನಾಡಿನಲ್ಲಿ ಮತ್ತು ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೆ, ಮಲೆನಾಡು ಭಾಗದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದೆ.

ಏಪ್ರಿಲ್‌ ತಿಂಗಳ ಆರಂಭದಿಂದ ಅಂತ್ಯದವರೆಗೆ ರಾಜ್ಯದ ಹಲವೆಡೆ ಚದುರಿದಂತೆ ಮಳೆಯಾಗಿದೆ. ನಿರಂತರವಾಗಿ ಎಲ್ಲೆಡೆ ವ್ಯಾಪಕವಾಗಿ ಮಳೆಯಾಗದಿದ್ದರೂ ಚದುರಿದಂತೆ ಅಲ್ಲಲ್ಲಿ ಮಳೆಯಾಗಿದ್ದು, ಕೃಷಿ ಚಟುವಟಿಕೆಗೆ ಅನುಕೂಲಕರವಾಗಿದೆ.

ಕಳೆದೊಂದು ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅಂದರೆ, ಏಪ್ರಿಲ್‌ ಒಂದರಿಂದ ಏಪ್ರಿಲ್‌ 30ರವರೆಗೆ ರಾಜ್ಯದ ವಾಡಿಕೆ ಮಳೆ ಪ್ರಮಾಣ 32.4 ಮಿ.ಮೀ.ಆಗಿದ್ದು, 55.6 ಮಿ.ಮೀ. ಮಳೆ ಬಿದ್ದಿದೆ. ಒಟ್ಟಾರೆ ಶೇ.72ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕರಾವಳಿ ಭಾಗದಲ್ಲಿ ಶೇ.106, ಮಲೆನಾಡು ಭಾಗದಲ್ಲಿ ಶೇ.57, ಉತ್ತರ ಒಳನಾಡಿನಲ್ಲಿ ಶೇ.83 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.61ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

RELATED ARTICLES

Latest News