ಬೆಂಗಳೂರು, ಮೇ 1- ಕೇಂದ್ರ ಸರ್ಕಾರ ಜಾತಿ ಜನಗಣತಿ ಮಾಡುವುದಾಗಿ ಘೋಷಣೆ ಮಾಡಿರುವುದನ್ನು ಸ್ವಾಗತಿಸುವುದಾಗಿ ಹೇಳಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಪದ್ಧತಿಯನ್ನು ಜಾರಿಗೆ ತರಲು ಕಾನೂನು ರೂಪಿಸುವಂತೆ ಆಗ್ರಹಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಬಿಬಿಎಂಪಿಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ 13 ಸಾವಿರ ಪೌರ ಕಾರ್ಮಿಕರನ್ನು ಖಾಯಂ ಮಾಡಿರುವುದು ಅಭಿನಂದನಾರ್ಹ ಎಂದರು.
ದೇಶದ ಇತಿಹಾಸದಲ್ಲೇ ಇಷ್ಟೊಂದು ಪೌರಕಾರ್ಮಿಕರನ್ನು ಖಾಯಂಗೊಳಿಸಿರುವುದು ಹೆಮೆಯ ವಿಷಯ. ಪೌರ ಕಾರ್ಮಿಕರಿಗೆ ಸಿಗಬೇಕಾದ ಹಕ್ಕುಗಳು ಸರಿಯಾಗಿ ಸಿಗುತ್ತಿಲ್ಲ. 13 ಸಾವಿರ ಮಂದಿಯ ಜೊತೆಗೆ ರಾಜ್ಯದ ಉಳಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂದು ಸೂಚನೆ ನೀಡಿದರು.
ಕೇಂದ್ರ ಸರ್ಕಾರ ಜನಗಣತಿಯ ಜೊತೆಗೆ ಜಾತಿ ಗಣತಿಯನ್ನು ಮಾಡುವುದಾಗಿ ಘೋಷಣೆ ಮಾಡಿದೆ. ಅದಕ್ಕಿಂತ ಮೊದಲು ಯುಪಿಎ ಸರ್ಕಾರ 2010ರ ಸೆಪ್ಟೆಂಬರ್ ನಲ್ಲಿ ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನು ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಆರಂಭಿಸಿತ್ತು. ಆಗ ನಾನು ಕಾರ್ಮಿಕ ಹಾಗೂ ಸಮಾಜ ಕಲ್ಯಾಣ ಸಚಿವನಾಗಿದ್ದೆ. 2016ರಲ್ಲಿ ಜಾತಿ ಗಣತಿ ಮುಗಿದಿದೆ. ಆದರೆ ಬಿಜೆಪಿ ಸರ್ಕಾರ ಆ ವರದಿಯನ್ನು ಈವರೆಗೂ ಬಹಿರಂಗ ಪಡಿಸಿಲ್ಲ ಮತ್ತು ಜಾರಿಗೂ ತಂದಿಲ್ಲ. ಇಂತಹ ಒಳ್ಳೆಯ ಕೆಲಸಗಳ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಿಗುವುದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
2023ರ ಏಪ್ರಿಲ್ 16ಕ್ಕೆ ತಾವು ಪ್ರಧಾನಿಯವರಿಗೆ ಪತ್ರ ಬರೆದು ಜನಗಣತಿಯಲ್ಲಿ ಜಾತಿ ಗಣತಿಯನ್ನು ಸೇರಿಸಬೇಕು ಎಂದು ಒತ್ತಾಯ ಮಾಡಿದ್ದೆ. ಕೇಂದ್ರ ಸರ್ಕಾರ ಎರಡು ವರ್ಷದಿಂದ ಏನನ್ನೂ ಮಾಡಲಿಲ್ಲ. ನಿನ್ನೆ ವಿಶೇಷ ಸಚಿವ ಸಂಪುಟ ಸಭೆ ಮಾಡಿ ಜಾತಿ ಗಣತಿಯನ್ನು ಪ್ರಕಟಿಸಿದ್ದಾರೆ. ನಾವು ಹೇಳಿದಾಗ ನಿರ್ಲಕ್ಷ್ಯ ಮಾಡಿ, ಅವರಿಗೆ ಬೇಕಾದಾಗ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾವು ಹೇಳಿದಾಗಲೇ ಕ್ರಮ ಕೈಗೊಂಡರೆ ಕಾಂಗ್ರೆಸ್‌ಗೆ ಕೀರ್ತಿ ಬರುತ್ತದೆ ಎಂಬುದು ಅವರ ಧೊರಣೆ. ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಮಾತ್ರ ಕೀರ್ತಿ ಬರಬೇಕು ಎಂಬುದು ಅವರ ಹುನ್ನಾರ ಎಂದು ಆರೋಪಿಸಿದರು.
ಜಾತಿ ಗಣತಿಗೆ ನೆಹರು ವಿರೋಧವಿದ್ದರು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿದ್ದ ಹಿಂದು ಕೋಡ್ ಬಿಲ್ ಅನ್ನು ನೆಹರು ನಾಲ್ಕು ಭಾಗಗಳಾಗಿ ವಿಂಗಡಿಸಿ ಜಾರಿಗೆ ತಂದರು. ಕಾಂಗ್ರೆಸ್ ಮಾಡಿದಷ್ಟು ಒಳ್ಳೆಯ ಕೆಲಸಗಳನ್ನು ಬಿಜೆಪಿಯಿಂದ ಮಾಡಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳಿಗೆ ಮೀಸಲಾತಿ ಜಾರಿಗೆ ತರಬೇಕು ಎಂದು ಹಿಂದೆ ಕಾಂಗ್ರೆಸ್ ಸರ್ಕಾರ ಕಾನೂನು ರೂಪಿಸಿತ್ತು, ಆದರೆ ಈವರೆಗೂ ಅದನ್ನು ಯಾಕೆ ಜಾರಿ ಮಾಡಿಲ್ಲ? ಜನ ವಿರೋಧ ವ್ಯಕ್ತವಾಗಿ ಪ್ರತಿಭಟನೆಗಳಾದಾಗ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಿಡಿಮಿಡಿ ವ್ಯಕ್ತ ಪಡಿಸಿದರು.
ಯುಪಿಎ ಅಧಿಕಾರವಧಿಯಲ್ಲಿ ಸಂವಿಧಾನ ಆರ್ಟಿಕಲ್ 15 (5) ಕ್ಕೆ ತಿದ್ದುಪಡಿ ತರಲಾಗಿದೆ. ಅದರ ಪ್ರಕಾರ ಖಾಸಗಿ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿಗೆ ಮೀಸಲಾತಿ ನೀಡಲು ಕಾನೂನು ರೂಪಿಸಿದೆ. ಆದರೆ ಈ ಸರ್ಕಾರ ಅದನ್ನು ಜಾರಿ ಮಾಡುವುದಿಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ನಿಟ್ಟಿನಲ್ಲಿ ಹೋರಾಟ ಮಾಡಲಾಗುವುದು, ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ.50ರಷ್ಟು ಮಿತಿಗೊಳಿಸಿರುವುದಕ್ಕೆ ವಿನಾಯಿತಿ ನೀಡಬೇಕು, ಜನಸಂಖ್ಯೆವಾರು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರಕ್ಕೆ ಜಾತಿ ಗಣತಿ ಮಾಡಿ, ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಿಸಬೇಕು ಎಂಬ ಉದ್ದೇಶ ಇಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಜಾತಿ ಗಣತಿ ಮಾಡಲು 150 ಕೋಟಿ ರೂ. ಖರ್ಚು ಮಾಡಿದೆ. ಕೇಂದ್ರ ಸರ್ಕಾರ ಇಡೀ ದೇಶಕ್ಕೆ 550 ಕೋಟಿ ಮಾತ್ರ ನಿಗದಿ ಮಾಡಿದೆ. ಆ ಹಣ ಉತ್ತರ ಪ್ರದೇಶದ ಗಣತಿಗೂ ಸಾಲುವುದಿಲ್ಲ. ಜಾತಿ ಜನಗಣತಿ ಮಾಡಿ ಹಿಂದುಳಿದ ವರ್ಗಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದ್ದರೆ, ಬಜೆಟ್‌ನಲ್ಲೇ ಹಣ ಮೀಸಲಿಡಬೇಕಿತ್ತು, ಆದರೆ ಆ ರೀತಿ ಮಾಡಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯನ್ನು ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ, ನಮ ವಿರೋಧಿಗಳು ಅನಗತ್ಯವಾಗಿ ಟೀಕೆ ಮಾಡುತ್ತಾರೆ, ಅದಕ್ಕೆ ಜನ ಸಾಮಾನ್ಯರು ಧ್ವನಿಗೂಡಿಸುತ್ತಾರೆ. ಸರ್ಕಾರ ಮಾಡಿದ ಒಳ್ಳೆಯ ಕೆಲಸಗಳನ್ನು ಗುರುತಿಸಿ ಮೆಚ್ಚುಗೆ ವ್ಯಕ್ತ ಪಡಿಸಬೇಕು ಎಂದರು.ಅಂಬೇಡ್ಕರ್ ಸಂವಿಧಾನ ಬರೆದಿರುವುದಷ್ಟೆ ಅಲ್ಲ, ಬ್ರಿಟಿಷರ ಆಳ್ವಿಕೆಯಲ್ಲೇ ವೈಸ್ ರಾಯ್ ಕೌನ್ಸಿಲ್‌ನ ಸದಸ್ಯರಾಗಿ ಹೋರಾಟ ಮಾಡಿ, ಕಾರ್ಮಿಕರಿಗಾಗಿ ಹಲವು ಸೌಲಭ್ಯಗಳನ್ನು ಕೊಡಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಕೋಲ್ ಮೈನ್‌್ಸ ಸೇಫ್ಟಿ ಬಿಲ್, ಫ್ಯಾಕ್ಟರಿ ಬಿಲ್, ವರ್ಕ್‌ಮನ್ ಕಂಪೆನ್ಸೇಷನ್ ಬಿಲ್, ಹೆಲ್ತ್ ಬಿಲ್, ಸಾಮಾಜಿಕ ಭದ್ರೆತೆ, ವಿಮಾ ಸೌಲಭ್ಯ ಸೇರಿದಂತೆ 10ಕ್ಕೂ ಹೆಚ್ಚು ಬಿಲ್‌ಗಳನ್ನು ಕಾರ್ಮಿಕರಿಗಾಗಿ ರೂಪಿಸಿದ್ದರು ಎಂದರು.
ಬ್ರಿಟಿಷರು ಭಾರತೀಯರನ್ನು 13-14 ಗಂಟೆ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರು. ಬ್ರಿಟಿಷ್ ನೌಕರರಿಂದ 8 ಗಂಟೆ ಮಾತ್ರ ಕೆಲಸ ಮಾಡಿಸಲಾಗುತ್ತಿತ್ತು. ಈ ತಾರತಮ್ಯವನ್ನು ಅಂಬೇಡ್ಕರ್ ಪ್ರತಿಭಟಿಸಿದರು. ಆ ಬಳಿಕ 8 ಗಂಟೆ ದುಡಿಮೆಯ ಅವಧಿ ಕಾನೂನು ಜಾರಿಯಾಯಿತು. ಮೋದಿ ಸರ್ಕಾರ ಕಾರ್ಮಿಕರಿಗಾಗಿ ಇದ್ದ 44 ಕಾನೂನುಗಳನ್ನು ರದ್ದು ಮಾಡಿ, ತಮಗೆ ಬೇಕಾದಂತೆ ಮೂರ್ನಾಲ್ಕು ಕಾನೂನುಗಳನ್ನು ಮಾತ್ರ ಉಳಿಸಿದ್ದಾರೆ. ಈಗ ದುಡಿಮೆ ಅವಧಿಯನ್ನು 10 ಗಂಟೆ ಮಾಡಿದ್ದಾರೆ. ಬಂಡವಾಳಶಾಹಿಗಳು ಎಲ್ಲೆಡೆ ಖಾಯಂ ನೌಕರರನ್ನು ತೆಗೆದು, ಗುತ್ತಿಗೆ ಪದ್ಧತಿ ಜಾರಿಗೆ ಮಾಡಲಾಗಿದೆ. ಅದಕ್ಕೆ ಮೋದಿ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಮಿಕರಿಗೆ ಅಂಬೇಡ್ಕರ್ ಬಹಳಷ್ಟು ಕೊಡುಗೆ ನೀಡಿದ್ದರು, ಮೋದಿ ಸರ್ಕಾರ ಅದನ್ನು ಹಾಳು ಮಾಡುತ್ತಿದೆ. ಖಾಸಗಿಯಲ್ಲಿ ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳಿಗೆ ನೌಕರಿ ನೀಡುವುದಿಲ್ಲ. ಆದಕ್ಕಾಗಿಯೇ ನೆಹರು ಸರ್ಕಾರಿ ಸಹಭಾಗಿತ್ವದ ಸಂಸ್ಥೆಗಳನ್ನು ಮಾಡಿದ್ದರು, ಈಗ ಮೋದಿ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ಹಂತ ಹಂತವಾಗಿ ಮುಚ್ಚುತ್ತಿದೆ. ಈಗಲೂ ಅಸ್ಪಶ್ಯತೆ ಜಾರಿಯಲ್ಲಿದೆ. ಪೌರ ಕಾರ್ಮಿಕರು ತಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ವ್ಯಾಪಾರ, ಉದ್ಯಮಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಎಂದು ಸಲಹೆ ನೀಡಿದರು. ಕೋವಿಡ್ ಸಂದರ್ಭದಲ್ಲಿ ಪೌರ ಕಾರ್ಮಿಕರು ಮಾಡಿದ ಕೆಲಸ ಸರಣೀಯ ಎಂದು ಕೊಂಡಾಡಿದರು.
ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಶೋಷಿತ ವರ್ಗದವರು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಅದು ಗಣನೆಗೆ ಬರುತ್ತಿಲ್ಲ. ಬಾಬು ಜಗಜೀವನರಾಮ್ ಎಂಟು ಬಾರಿ ಸೋಲಿಲ್ಲದ ಸಂಸದರಾಗಿ, ಕಾರ್ಮಿಕರಾಗಿ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಆದರೆ ಅವರು ಪ್ರಧಾನಿಯಾಗಲು ಸಾಧ್ಯವಾಗಲಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯೂ ಆಗಲಿಲ್ಲ ಎಂದು ವಿಷಾದಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಹೆಚ್.ಮುನಿಯಪ್ಪ, ಹೆಚ್.ಸಿ.ಮಹದೇವಪ್ಪ, ಬೈರತಿ ಸುರೇಶ್, ಕೃಷ್ಣಭೈರೇಗೌಡ, ರಹೀಂಖಾನ್, ಸಂಸದರಾದ ರಾಧಾಕೃಷ್ಣ, ನಾಸೀರ್ ಹುಸೇನ್, ಶಾಸಕರಾದ ಎಸ್.ಟಿ.ಸೋಮಶೇಖರ್, ರಿಜ್ವಾನ್ ಅರ್ಷದ್, ಶ್ರೀನಿವಾಸ್, ಮಾಜಿ ಮೇಯರ್ ನಾರಾಯಣ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.