ಬೆಂಗಳೂರು,ಮೇ 3-ನಗರದ ಹೊರವಲಯದ ನೈಸ್ ರಸ್ತೆಯಲ್ಲಿ ವಕೀಲರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಕೆಂಗೇರಿಯ ಎಸ್‌ಎಂವಿ ಲೇಔಟ್ ನಿವಾಸಿ ಜಗದೀಶ್ (46) ಕೊಲೆಯಾಗಿರುವ ವಕೀಲರು.ಜಗದೀಶ್ ಅವರು ತಮ ಕೀಯಾ ಸೇಲ್ಟೋಸ್ ಕಾರು ತೆಗೆದುಕೊಂಡು ಹೊರಗೆ ಹೊಗಿದ್ದು ರಾತ್ರಿ 7.30 ರಿಂದ 8 ಗಂಟೆ ಮಧ್ಯೆ ಮನೆಗೆ ಹಿಂದಿರುಗುತ್ತಿದ್ದರು.
ಕೆಂಗೇರಿಯ ಸಿವಿ ರಾಮನ್ ಎಸ್ಟೇಟ್ ಪಕ್ಕದ ನೈಸ್ ರಸ್ತೆಯಲ್ಲಿ ಜಗದೀಶ್ ರವರ ಕಾರು ಚಲಿಸುತ್ತಿದ್ದಾಗ ದುಷ್ಕರ್ಮಿಗಳು ಅವರ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಯಾವುದೋ ವಾಹನದಿಂದ ಕಾರಿಗೆ ಡಿಕ್ಕಿ ಹೊಡೆಸಿದ್ದಾರೆ.
ಆ ವೇಳೆ ಜಗದೀಶ್ ಅವರು ಕಾರಿನಿಂದ ಇಳಿದು ಹೊರಗೆ ಬಂದು ಏನಾಯಿತೆಂದು ಕಾರನ್ನು ನೋಡುತ್ತಿದ್ದಾಗ ಅದೇ ಸಮಯಕ್ಕಾಗಿ ಕಾದಿದ್ದ ದುಷ್ಕರ್ಮಿಗಳು ಅವರ ಮೇಲೆ ಮಾರಕಾಸಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ.ತಕ್ಷಣ ಜಗದೀಶ್ ಅವರಿಗೆ ತನ್ನ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆಂದು ಅರಿತು ಕಾರನ್ನು ಸ್ಥಳದಲ್ಲೆ ಬಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಆದರೂ ಬಿಡದ ದುಷ್ಕರ್ಮಿಗಳು 150 ಮೀಟರ್ ದೂರ ಅಟ್ಟಾಡಿಸಿಕೊಂಡು ಹೋಗಿ ನಡು ರಸ್ತೆಯಲ್ಲಿ ಮಾರಕಾಸಗಳಿಂದ ತಲೆಗೆ ಬಲವಾಗಿ ಹೊಡೆದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ರಾತ್ರಿ10.30ರ ಸುಮಾರಿನಲ್ಲಿ ಜಗದೀಶ್ ಕೊಲೆಯಾಗಿರುವುದನ್ನು ತಿಳಿದು ಸಂಬಂಧಿ ಹರ್ಷ ಎಂಬುವವರು ತಕ್ಷಣ ಸೋದರ ಸಂಬಂಧಿ ಡಾ.ಪ್ರಭಂಜನ್ ಎಂಬುವವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಡಾ.ಪ್ರಭಂಜನ್ ರವರು ತಕ್ಷಣ ನೈಸ್ ರಸ್ತೆಯ ಸ್ಥಳಕ್ಕೆ ಹೋಗಿ ನೋಡಿದಾಗ ಜಗದೀಶ್ ಅವರ ಕಾರು ಪತ್ತೆಯಾಗಿದೆ. ಆದರೆ ಜಗದೀಶ್ ಕಾರಿನಲ್ಲಿ ಇರಲಿಲ್ಲ.ಕಾರಿನ ಎಡ ಮತ್ತು ಬಲ ಭಾಗದಲ್ಲಿ ಜಖಂಗೊಂಡಿದ್ದಲ್ಲದೆ ಕಾರಿನ ಪಾರ್ಕಿಂಗ್ ಲೈಟ್ ಹಾಗೂ ಕಾರು ಆನ್‌ನಲ್ಲಿದ್ದು, ಕಾರಿನ ನಾಲ್ಕು ಡೋರ್‌ಲಾಕ್ ಆಗಿರುವುದು ಕಂಡು ಬಂದಿದೆ.
ಸ್ವಲ್ಪ ದೂರ ಹೋಗುತ್ತಿದ್ದಂತೆ ಸುಮಾರು 150 ಮೀಟರ್ ಅಂತರದಲ್ಲಿ ಜಗದೀಶ್ ಅವರ ಮೃತದೇಹ ಪತ್ತೆಯಾಗಿದೆ. ತಲೆಯ ಮಧ್ಯಭಾಗದಲ್ಲಿ ತೀವ್ರವಾಗಿ ಪೆಟ್ಟು ಬಿದ್ದಿದ್ದು, ಎಡಕಾಲು ಮತ್ತು ಹೊಟ್ಟೆಯ ಭಾಗದಲ್ಲಿ ತೆರಚಿದ ಗಾಯವಾಗಿದ್ದು, ತಲೆಯ ಹಿಂಭಾಗ ಸಂಪೂರ್ಣ ತೆರೆದುಕೊಂಡು ಮೆದುಳು ಹೊರ ಬಂದಿರುವುದು ಕಂಡು ಬಂದಿದೆ.
ಈ ನಡುವೆ ಜಗದೀಶ್ ಅವರು ಬಳಸುತ್ತಿದ್ದ ಮೊಬೈಲ್ ಸಹ ನಾಪತ್ತೆಯಾಗಿದೆ. ತಕ್ಷಣ ಡಾ.ಪ್ರಭಂಜನ್ ರವರು ಕೆಂಗೇರಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಜಗದೀಶ್ ರವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಡಾ.ಪ್ರಭಂಜನ್ ರವರು ಪೊಲೀಸರಿಗೆ ದೂರು ನೀಡಿದ್ದು, ಸಂಬಂಧಿ ಜಗದೀಶ್ ಅವರನ್ನು ಯಾರೋ ಅಪರಿಚಿತರು ಕೊಲೆ ಮಾಡುವ ಉದ್ದೇಶದಿಂದ ಅವರ ಕಾರಿಗೆ ಅಪಘಾತ ಮಾಡಿ, ಅವರು ಕೆಳಗೆ ಇಳಿಯುವಂತೆ ಮಾಡಿ ನಂತರ ಯಾವುದೋ ಆಯುಧದಿಂದ ಕೊಲೆ ಮಾಡಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ವಿವರಿಸಿದ್ದಾರೆ.ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.