ಬೆಂಗಳೂರು,ಮೇ 3- ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡಿಗರು, ಕನ್ನಡಪರ ಸಂಘಟನೆಗಳು ಕೆರಳಿ ಕೆಂಡವಾಗಿವೆ. ಅಭಿಮಾನಿಯೊಬ್ಬರ ಕನ್ನಡ ಅಭಿಮಾನವನ್ನು ಪಹಲ್ಗಾಮ್ ಘಟನೆಗೆ ಹೋಲಿಸಿದ ಸೋನು ನಿಗಮ್ ವರ್ತನೆಯನ್ನು ತೀವ್ರವಾಗಿ ಖಂಡಿಸಿರುವ ಕನ್ನಡಪರ ಸಂಘಟನೆಗಳು ಬಹಿರಂಗ ಕ್ಷಮೆಗೆ ಆಗ್ರಹಿಸಿರುವುದಲ್ಲದೆ ಕನ್ನಡ ಚಿತ್ರರಂಗದಿಂದಲೇ ಸೋನು ನಿಗಮ್ ಅವರನ್ನು ನಿಷೇಧಿಸಬೇಕೆಂದು ಒತ್ತಾಯಿಸಿವೆ.
ಕರವೇ ಅಧ್ಯಕ್ಷ ನಾರಾಯಣ ಗೌಡ, ಡಾ.ರಾಜ್‌ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ, ಚಲನಚಿತ್ರ ನಿರ್ದೇಶಕರು, ಗಾಯಕರು, ಕನ್ನಡಪರ ಹೋರಾಟಗಾರರು ಸೇರಿದಂತೆ ಕನ್ನಡ ಮನಸ್ಸುಗಳು ಸೋನು ನಿಗಮ್ ಅವರ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿರುವುದಲ್ಲದೆ ಕಾನೂನು ಹೋರಾಟಕ್ಕೂ ಮುಂದಾಗಿವೆ.
ಯಾವುದೇ ಕಾರಣಕ್ಕೂ ಸೋನು ನಿಗಮ್ ಅವರ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ಯಾವುದಾದರೂ ಕಾರ್ಯಕ್ರಮ ನಡೆಸಿದರೆ ಅದಕ್ಕೆ ಆಯೋಜಕರೇ ಹೊಣೆಗಾರರು ಆಗಬೇಕಾಗುತ್ತದೆ. ಮುಂದಾಗುವ ಪರಿಣಾಮ ಎದುರಿಸಲು ಸಿದ್ಧರಾಗಬೇಕೆಂದು ನಿರ್ಮಾಪಕ, ನಿರ್ದೇಶಕರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮತ್ತಿತರ ಮುಖಂಡರು ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿ ದೂರು ನೀಡಿ, ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ. ಅವರ ವಿವಾದಿತ ಹೇಳಿಕೆಯಿಂದ ಕನ್ನಡದ ಮನಸ್ಸುಗಳಿಗೆ ತೀವ್ರ ನೋವಾಗಿದೆ. ಅವರು ಬಹಿರಂಗ ಕ್ಷಮೆ ಯಾಚಿಸಬೇಕು. ಅವರು ಕನ್ನಡಕ್ಕೆ ಯಾವ ರೀತಿ ಸೇವೆ ಸಲ್ಲಿಸಿದರೇನು ಪ್ರಯೋಜನ? ಈ ರೀತಿ ಮಾಡಿರುವ ಅವಮಾನವನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಕರವೇ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಸೋನು ನಿಗಮ್ ಅವರ ಹೇಳಿಕೆ ಅತ್ಯಂತ ಬಾಲಿಶವಾಗಿದೆ. ಬಾಲಿವುಡ್‌ನಲಿ ಖಾಲಿ ಕುಳಿತಿದ್ದ ಸೋನು ನಿಗಮ್ ಅವರನ್ನು ಕರ್ನಾಟಕದಲ್ಲಿ ರತ್ನಗಂಬಳಿ ಹಾಸಿ ಕರೆದು ಆತಿಥ್ಯ ನೀಡಿದ್ದಕ್ಕೆ ಈ ರೀತಿ ಅವಮಾನ ಮಾಡಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ.
ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿ ಅವಮಾನ ಮಾಡಿರುವುದನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಕೂಡಲೇ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧ ಮಾಡಬೇಕು. ಯಾವುದೇ ಕಾರಣಕ್ಕೂ ಅವರಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡಲೇ ಬಾರದು ಎಂದು ಆಗ್ರಹಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ ಅವರು, ಸೋನು ನಿಗಮ್ ಅವರ ವರ್ತನೆ ಖಂಡಿಸಿ, ಸೋನು ನಿಗಮ್ ಕನ್ನಡಿಗರ ಕ್ಷಮೆಯಾಚಿಸಬೇಕು.
ಇಲ್ಲವೇ ಕರ್ನಾಟಕಕ್ಕೆ ಬರುವುದನ್ನು ನಿಲ್ಲಿಸಬೇಕು. ಕನ್ನಡ ಭಾಷೆಗೂ ಪಹಲ್ಗಾಮ್‌ನ ಭಯೋತ್ಪಾದನೆ ಘಟನೆಗೂ ತಳಕು ಹಾಕುವುದು ಎಷ್ಟು ಸಮಂಜಸ ಎಂದು ಕಿಡಿಕಾರಿದ್ದಾರೆ.
ಇದೇ ರೀತಿ ಹಲವು ಕನ್ನಡಪರ ಹೋರಾಟಗಾರರು ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಸೋನು ನಿಗಮ್ ವರ್ತನೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಷಮೆ ಕೇಳಬೇಕು: ಜೆಡಿಎಸ್ ಒತ್ತಾಯ
ಕನ್ನಡವನ್ನು ಪಹಲ್ಗಾಮ್ ಘಟನೆಗೆ ಸಂಬಂಧ ಕಲ್ಪಿಸಿ, ಕನ್ನಡಿಗರನ್ನು ಕೆಣಕಿರುವ ಗಾಯಕ ಸೋನು ನಿಗಮ್ ಕನ್ನಡಿಗರ ಕ್ಷಮೆ ಕೇಳಲೇಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.
ಈ ಸಂಬಂಧ ಎಕ್‌್ಸ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಕನ್ನಡ ಭಾಷಾಭಿಮಾನವನ್ನು ಅವಮಾನಿಸಿದ ಗಾಯಕ ಸೋನು ನಿಗಮ್ ನಿಮಗೆ ಧಿಕ್ಕಾರವಿರಲಿ. ಕನ್ನಡ ಹಾಡು ಹಾಡಿ ಎಂದು ಕೇಳಿದ್ದಕ್ಕೆ, ಕನ್ನಡದ ಮೇಲಿನ ನಮ ಅಭಿಮಾನವನ್ನು ಪಹಲ್ಗಾಮ್ ಉಗ್ರರ ದಾಳಿಗೆ ಹೋಲಿಕೆ ಮಾಡಿದ್ದು ಖಂಡನೀಯ. ಇದನ್ನು ಕನ್ನಡಿಗರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಕನ್ನಡಾಭಿಮಾನವನ್ನು ಪಹಲ್ಗಾಮ್ ಘಟನೆಗೆ ಕಲ್ಪಿಸಿದ ನಿಮದು ಉಗ್ರಗಾಮಿ ಮನಸ್ಥಿತಿ.. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ಹಾಡನ್ನು ಹಾಡುವಂತೆ ಕೇಳಿದರೆ ಅದು ತಪ್ಪೇ? ಎಂದು ಪ್ರಶ್ನಿಸಿದೆ.
ಸೋನು ನಿಗಮ್ ನೀವು ಕನ್ನಡ ಭಾಷೆಯಲ್ಲಿ ಹಾಡು ಹಾಡಿದ್ದಕ್ಕೆ ಕರ್ನಾಟಕದಲ್ಲಿ ಮನೆ ಮಾತಾಗಿದ್ದೀರಿ, ಪ್ರಖ್ಯಾತಿಯನ್ನು ಪಡೆದಿದ್ದು ಎಂಬುದನ್ನು ಮರೆತುಬಿಟ್ಟಿರಾ? ಕೋಟ್ಯಂತರ ಕನ್ನಡಿಗರು, ಅಭಿಮಾನಿಗಳು ನಿಮನ್ನು ಆರಾಧಿಸುತ್ತಾ ಪ್ರೀತಿ ಕೊಟ್ಟಿದ್ದಾರೆ. ಆದರೆ ನೀವು ಕನ್ನಡದ ಮನಸ್ಸುಗಳನ್ನು, ಅಭಿಮಾನಿಗಳನ್ನು ಅವಮಾನಿಸಿ, ನೋಯಿಸಿದ್ದೀರಿ, ಅವರ ನಂಬಿಕೆ ಮತ್ತು ವಿಶ್ವಾಸಕ್ಕೆ ದ್ರೋಹ ಬಗೆದಿದ್ದೀರಿ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.