Sunday, May 4, 2025
Homeರಾಜ್ಯಸಾಂಸ್ಕೃತಿಕ ಭಯೋತ್ಪಾದಕ ಗಾಯಕ ಸೋನು ನಿಗಮ್ ಬಂಧನವಾಗಬೇಕು : ಕರವೇ ನಾರಾಯಣಗೌಡ

ಸಾಂಸ್ಕೃತಿಕ ಭಯೋತ್ಪಾದಕ ಗಾಯಕ ಸೋನು ನಿಗಮ್ ಬಂಧನವಾಗಬೇಕು : ಕರವೇ ನಾರಾಯಣಗೌಡ

singer Sonu Nigam should be arrested: Karave Narayana Gowda

ಬೆಂಗಳೂರು,ಮೇ.4 – ಕನ್ನಡಿಗರ ಕನ್ನಡಾಭಿಮಾನವನ್ನು ಪಹಲ್ಲಾಮ್ ಉಗ್ರರ ದಾಳಿಗೆ ಹೋಲಿಸಿ ಅವಹೇಳನ ಮಾಡಿದ ಗಾಯಕ ಸೋನು ನಿಗಮ್ ಸಾಂಸ್ಕೃತಿಕ ಭಯೋತ್ಪಾದಕ ಎಂದು ಕಿಡಿಕಾರಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಕೂಡಲೇ ಇವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸೋನು ನಿಗಂ ಅವರನ್ನು ಕನ್ನಡಿಗರು ಮೆರೆಸಿದಷ್ಟು ಯಾರೂ ಮೆರೆಸಿರಲಿಲ್ಲ. ಅವರ ಬಗ್ಗೆ ಕನ್ನಡಿಗರು ಅಪಾರ ಅಭಿಮಾನ, ಪ್ರೀತಿ ಇಟ್ಟುಕೊಂಡಿದ್ದರು. ಕನ್ನಡಿಗರ ಬಗ್ಗೆ ಪ್ರೀತಿ, ಕಾಳಜಿ ಅವರಿಗೆ ಇರಬೇಕಿತ್ತು. ಈ ಋಣವನ್ನಾದರೂ ಅವರು ತೀರಿಸಬೇಕಿತ್ತು. ಕನ್ನಡಾಭಿಮಾನದಿಂದ ಕಾರ್ಯಕ್ರಮದಲ್ಲಿ ಗಾಯಕನಿಂದ ಕನ್ನಡ ಹಾಡು ಕೇಳಲು ಮುಂದಾದ ಕನ್ನಡಿಗರನ್ನು ಉಗ್ರರಿಗೆ ಹೋಲಿಸಿ ಅವಹೇಳನ ಮಾಡುವುದು ಎಷ್ಟು ಸಮಂಜಸ? ಇದನ್ನು ನಾವು ಸಹಿಸಲು ಸಾಧ್ಯವಿಲ್ಲ, ಈಗಾಗಲೇ ಅವರ ವಿರುದ್ಧ ದೂರು ನೀಡಿದ್ದೇವೆ. ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ನಾರಾಯಣಗೌಡರು, ಕನ್ನಡಕ್ಕೆ ಅವಮಾನ ಮಾಡುವ ಕನ್ನಡಿಗರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡುವ ಯಾರಿಗೂ ಉಳಿಗಾಲವಿಲ್ಲ ಎಂಬುದನ್ನು ಸೋನು ನಿಗಂ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ನಾವು ಎಚ್ಚರಿಸಬೇಕಾಗಿದೆ.

ಕೇವಲ ಅವರು ಪಶ್ಚಾತ್ತಾಪಪಟ್ಟು ಕ್ಷಮೆ ಕೇಳಿದರೆ ಸಾಲದು, ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲೇಬೇಕೆಂಬುದು ನಮ್ಮ ಒತ್ತಾಯ ಎಂದು ಹೇಳಿದರು. ಕನ್ನಡದ ಬಗ್ಗೆ ಕೀಳಾಗಿ ಮಾತನಾಡುವವರಿಗೆ, ಕನ್ನಡಿಗರಿಗೆ ಅವಮಾನ ಮಾಡುವವರಿಗೆ ಸೋನು ನಿಗಂ ಅವರ ವಿರುದ್ಧ ಕೈಗೊಳ್ಳುವ ಕ್ರಮ ಎಚ್ಚರಿಕೆ ಘಂಟೆಯಾಗಬೇಕೆಂದು ಅವರು ಹೇಳಿದರು.

ಕನ್ನಡಿಗರಿಗೆ ಹೃದಯ ಶ್ರೀಮಂತಿಕೆ ಇದೆ. ಎಲ್ಲರನ್ನೂ ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಗುಣವಿದೆ. ಅದು ನಮ್ಮ ದೌರ್ಬಲ್ಯವಲ್ಲ, ಪರಭಾಷಿಗರು, ವಲಸಿಗರು ನಮ್ಮ ಅತಿಯಾದ ಒಳ್ಳೆಯತನವನ್ನು ದುರ್ಬಳಕೆ ಮಾಡಿ ಕೊಂಡು ಕೆಣಕಿದರೆ, ಅವಮಾನ ಮಾಡಿದರೆ ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ನಿರ್ಮಾಪಕರು, ನಿರ್ದೇಶಕರಿಗೂ ನಾನು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ. ಸೋನು ನಿಗಂ ಹಾಡಿರುವ ಚಿತ್ರಗಳನ್ನು ತೆರೆ ಕಾಣಲು ಬಿಡುವುದಿಲ್ಲ. ನಾವು ಇಂತವರಿಗೆ ಸರಿಯಾಗಿ ಪಾಠ ಕಲಿಸದಿದ್ದರೆ ಕನ್ನಡ ಭಾಷೆಗೆ, ಸಂಸ್ಕೃತಿಗೆ, ಕನ್ನಡಿಗರಿಗೆ ಉಳಿಗಾಲವಿಲ್ಲ ಎಂದು ಹೇಳಿದರು.

ಪ್ರೀತಿಯೂ ಬೇಕು, ಭೀತಿಯೂ ಇರಬೇಕು. ಯಾವುದೂ ಅತಿಯಾಗಿರಬಾರದೆಂಬುದು ನಮ್ಮ ನಿಲುವು. ಆದರೆ ಕೆಲವರು ನಮ್ಮ ಒಳ್ಳೆಯತನವನ್ನು ದುರ್ಬಳಕೆ ಮಾಡಿಕೊಂಡು ಅವಹೇಳನ ಮಾಡುವ ಕೆಲಸ ಮಾಡುತ್ತಾರೆ. ಎಷ್ಟು ದಿನ ಎಂದು ಸಹಿಸಿಕೊಂಡಿರಲು ಸಾಧ್ಯ. ಹಾಗಾಗಿ ನಾವು ಇವರ ವಿರುದ್ಧ ಹೋರಾಟ ಮಾಡುವುದಲ್ಲದೆ. ಕಾನೂನು ಹೋರಾಟಕ್ಕೂ ಕೂಡ ಮುಂದಾಗಿದ್ದೇವೆ ಎಂದರು.

ಯಾವುದೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವವರು ಕನ್ನಡ ಹಾಡುಗಳಿಗೆ ಪ್ರಥಮ ಆದ್ಯತೆ ನೀಡಬೇಕು. ಯಾವ ಗಾಯಕರಿಗೂ ಕನ್ನಡ ಹಾಡಿ ಎಂದು ಬೇಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು.ಇದು ಎಲ್ಲಾ ಕಾರ್ಯಕ್ರಮ ಆಯೋಜಕರಿಗೂ ಅನ್ವಯವಾಗುತ್ತದೆ. ಎಚ್ಚರ!…. ನಾಡಿನೆಲ್ಲೆಡೆ ಆಯೋಜನೆಯಾಗುವ ಕಾರ್ಯಕ್ರಮಗಳಲ್ಲಿ ಪರಭಾಷಿಗರಾಗಲೀ, ಯಾರೇ ಆಗಲೀ ಏರ್ಪಡಿಸುವ ಈವೆಂಟ್‌ಗಳಲ್ಲಿ ಮೊದಲು ಕನ್ನಡ ಭಾಷೆಗೆ ಆದ್ಯತೆಯಿರಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಗಾಯದ ಮೇಲೆ ಬರೆ :
ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ಗಾಯಕ ಸೋನು ನಿಗಂ ಘಟನೆ ಬಗ್ಗೆ ಕ್ಷಮೆ ಕೇಳಲು ಹಿಂಜರಿದಿರುವುದಲ್ಲದೆ ಸ್ಪಷ್ಟನೆ ನೀಡುವ ಭರದಲ್ಲಿ ಕನ್ನಡ ಹಾಡು ಹೇಳಿ ಎಂದವರನ್ನು ಗೂಂಡಾಗಳಿಗೆ ಹೋಲಿಸಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಕ್ಷಮೆ ಕೇಳದೆ ಉದ್ದಟತನ ತೋರಿರುವ ಸೋನುನಿಗಂ, ತನ್ನ ವರ್ತನೆ ಸರಿ ಎಂದು ಹೇಳಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಸೋನುನಿಗಂ ವಿರುದ್ಧ ನಾಡಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಚಿತ್ರ ರಂಗದಿಂದ ಅವರನ್ನು ಬ್ಯಾನ್ ಮಾಡಬೇಕೆಂದು ಒತ್ತಾಯ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆ ನೀಡಿರುವ ಅವರು, ವೇದಿಕೆ ಕಾರ್ಯಕ್ರಮದ ಸಂದರ್ಭದಲ್ಲಿ ಕೆಲವು ಹುಡುಗರು ನನ್ನನ್ನು ಗುರಾಯಿಸುತ್ತಿದ್ದರಲ್ಲದೆ, ಕನ್ನಡ ಕನ್ನಡ ಎಂದು ಕಿರುಚುತ್ತಾ ಧಮ್ಮಿ ಹಾಕುತ್ತಿದ್ದರು. ಅದಕ್ಕಾಗಿ ನಾನು ಈ ರೀತಿ ಮಾತನಾಡಬೇಕಾಯಿತು. ನನಗೆ ಕನ್ನಡದ ಮೇಲೆ ಬಹಳ ಪ್ರೀತಿಯಿದೆ ಎಂದು ಹೇಳಿದ್ದಾರೆ.

ಕನ್ನಡಿಗರು ತುಂಬಾ ಒಳ್ಳೆಯವರು. ನಾನು ಯಾವಾಗಲೂ ಕನ್ನಡ ಹಾಡು ಹಾಡಲು ರೆಡಿಯಾಗಿಯೇ ಬಂದಿರುತ್ತೇನೆ. ಆದರೆ ಈ ರೀತಿ ಗುಂಡಾಗಿರಿ ಮಾಡುವವರನ್ನು ತಡೆಯಬೇಕು ಎಂದು ನೀಡಿರುವ ಸ್ಪಷ್ಟನೆಗೆ ಮತ್ತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಯಾವುದೇ ಪಶ್ಚಾತ್ತಾಪ ಪಡದೇ, ಕ್ಷಮೆ ಕೇಳದೇ ಮತ್ತೆ ಕನ್ನಡಾಭಿಮಾನಿಗಳನ್ನು ಗುಂಡಾಗಳಿಗೆ ಹೋಲಿಸಿರುವ ಸೋನುನಿಗಂ ವಿರುದ್ಧ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ.

RELATED ARTICLES

Latest News